ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳನ್ನು ರಾಯಬಾಗ ತಾಲೂಕಿಗೆ ಸೇರ್ಪಡೆ ಮಾಡಬೇಕೆಂದು ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ತಹಸೀಲ್ದಾರ್‌ಗೆ ಅವರಿಗೆ ಪತ್ರದ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ನೀಡಿರುವ ಹೇಳಿಕೆ ವಿರೋಧಿಸಿ ಚಿಕ್ಕೋಡಿ ವಕೀಲರ ಸಂಘದ ಸದಸ್ಯರು ಉಪವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಚಿಕ್ಕೋಡಿ ತಾಲೂಕು ವ್ಯಾಪ್ತಿಯ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ನಾಗರಮುನ್ನೋಳಿ, ಬಂಬಲವಾಡ, ಬೇಳಕೂಡ, ಕರೋಶಿ, ಉಮರಾಣಿ, ಹತ್ತರವಾಟ, ಜಾಗನೂರ .ಜೈನಾಪೂರ ಮುಗಳಿ ಕರಗಾಂವ, ವಡ್ರಾಳ, ಈ ಎಲ್ಲ ಗ್ರಾಮ ಪಂಚಾಯತಿಗಳು ಹಾಗೂ ಕಬ್ಬೂರ ಪಟ್ಟಣ ಪಂಚಾಯತಿ ರಾಯಬಾಗ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದರು. ಈ ಹಳ್ಳಿಗಳು ಚಿಕ್ಕೋಡಿ ನ್ಯಾಯಾಲಯ ಹಾಗೂ ತಹಸೀಲ್ದಾರ್ ವ್ಯಾಪ್ತಿಗೆ ಬರುತ್ತವೆ. ಇವುಗಳನ್ನು ರಾಯಬಾಗ ತಾಲೂಕಿಗೆ ಸೇರಿಸಿದರೇ ಸಾರ್ವಜನಿಕರಿಗೆ, ಕಕ್ಷಿದಾರರಿಗೆ ಮತ್ತು ನ್ಯಾಯವಾದಿಗಳಿಗೆ ಆಡಳಿತಾತ್ಮಕ ದೃಷ್ಟಿಯಿಂದ ತೊಂದರೆಯಾಗುತ್ತದೆ. ನಾಗರಮುನ್ನೋಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳನ್ನು ಸೇರ್ಪಡೆ ಮಾಡುವ ಬಗ್ಗೆ ಯಾವುದೇ ಅವಶ್ಯಕತೆ ಇಲ್ಲದಿದ್ದರೂ ಸಹಿತ ಅದನ್ನು ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹೇಳಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದು, ಈ ಕಾರ್ಯವನ್ನು ತಕ್ಷಣ ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೇ ಎಲ್ಲ ನ್ಯಾಯವಾದಿಗಳು ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಲ್ಲದೇ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಚಿಕ್ಕೋಡಿ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಾಗರಮುನ್ನೋಳ್ಳಿ ಹೋಬಳಿ ಹಳ್ಳಿಗಳನ್ನು ರಾಯಬಾಗ ತಾಲೂಕಿಗೆ ಸೇರಿಸಲು ಕಾರ್ಯ ಪ್ರಾರಂಭ ಮಾಡಿದ್ದು ಅದನ್ನು ಉಪವಿಭಾಗಾಧಿಕಾರಿಗಳು ತಕ್ಷಣ ತಡೆಹಿಡಿಯಬೇಕುಕೆಂದು ಮನವಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.ಉಪವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರು ಮನವಿ ಸ್ವೀಕರಿಸಿ ನಾಗರಮುನ್ನೋಳ್ಳಿ ಹೋಬಳಿ ವ್ಯಾಪ್ತಿಗೆ ಸೇರ್ಪಡೆ ವಿಷಯ ನಮ್ಮ ಕಚೇರಿಗೆ ಬಂದಲ್ಲಿ ಅದನ್ನು ತಡೆಹಿಡಿಯಲಾಗುವುದು ಎಂದು ಭರವಸೆ ನೀಡಿದ ಬಳಿಕ ಹೋರಾಟಗಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು.ಪ್ರತಿಭಟನೆಯು ಚಿಕ್ಕೋಡಿ ವಕೀಲರ ಸಂಘದಿಂದ ಮೆರವಣಿಗೆ ಮೂಲಕ ಸಾಗಿ ಬಸವ ಸರ್ಕಲ್‌ನಲ್ಲಿ ಮಾನವ ಸರ್ಪಳಿ ನಿರ್ಮಿಸಿ ಸುಮಾರು 1 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸಿಕ್ಕ ಜಿಪಂ ಸಿಇಒ ಬಸವಸರ್ಕಲ್ ಬಳಿ ಪ್ರತಿಭಟನೆ ನಡೆಯುತ್ತಿರುವಾಗ ಬೆಳಗಾವಿಯಿಂದ ಆಗಮಿಸುತ್ತಿದ್ದು ಚಿಕ್ಕೋಡಿ ಲೋಕಸಭೆ ಚುನಾವಣಾಧಿಕಾರಿ ಹಾಗೂ ಜಿಪಂ ಸಿಎಒ ರಾಹುಲ್ ಶಿಂಧೆ ಅವರಿದ್ದ ಕಾರನ್ನು ಪ್ರತಿಭಟನಾಕಾರರು ತಡೆದು ಅಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಮ್ಮ ವಾಹನದಿಂದ ಕೆಳಗಿಳಿದ್ದು ನಡೆದು ಹೋಗಿ ಮನವಿ ಸ್ವೀಕರಿಸಲು ಬಂದಿದ್ದ ತಹಸೀಲ್ದಾರ್ ಕಚೇರಿಯ ಗಾಡಿಯಲ್ಲಿ ಚುನಾವಣೆ ತರಬೇತಿ ನಡೆಯುತ್ತಿದ್ದ ಆರ್.ಡಿ.ಕಾಲೇಜಿಗೆ ತೆರಳಿದ ಪ್ರಸಂಗ ನಡೆಯಿತು.ವಕೀಲಕ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ, ಎನ್.ಡಿ.ದರಬಾರೆ,ಎಸ್.ಆರ್.ವಾಲಿ, ಸಿ.ಬಿ.ಪಾಟೀಲ, ಬಿ.ಎನ್.ಪಾಟೀಲ, ಸುಭಾಸ ಯರನಾಳೆ,ಡಿ.ಆರ್.ಕೊಟೆಪ್ಪಗೋಳ, ಎಂ.ಜಿ.ಮೋಟನ್ನವರ, ಅಶೋಕ ಹರಗಾಪೂರೆ, ರಮೇಶ ಕಾಳನ್ನವರ, ಆರ್.ಐ ಖೋತ, ಎಂ.ಐ.ಬೆಂಡವಾಡೆ, ಎಂ.ಬಿ.ಪಾಟೀಲ, ನ್ಯಾಯವಾದಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ ಸೇರಿದಂತೆ ಹಿರಿಯ, ಕಿರಿಯ ಹಾಗೂ ಮಹಿಳಾ ವಕೀಲರು ಉಪಸ್ಥಿತರಿದ್ದರು.