ಅರಸೀಕೆರೆಯ ಶ್ರೀ ಪ್ರಸನ್ನ ಗಣಪತಿ 84ನೇ ಮಹೋತ್ಸವ

| Published : Oct 29 2025, 01:00 AM IST

ಸಾರಾಂಶ

ಅರಸೀಕೆರೆಯ ಶ್ರೀ ಪ್ರಸನ್ನ ಗಣಪತಿ ದೇವಾಲಯವು ಸುಮಾರು ಎಂಟು ದಶಕಗಳ ಹಿಂದೆ, ಅಂದರೆ 1940ರ ದಶಕದಲ್ಲಿ, ಸ್ಥಳೀಯ ಭಕ್ತರ ತ್ಯಾಗ ಮತ್ತು ಸೇವೆಯಿಂದ ನಿರ್ಮಾಣಗೊಂಡಿತು. ಶ್ರೀ ಗಣಪತಿಯನ್ನು "ಪ್ರಸನ್ನ ಗಣಪತಿ " ಎಂದು ನಂಬಿ ದೇವಸ್ಥಾನ ನಿರ್ಮಿಸಿದರು. ಆ ದಿನದಿಂದ ಇಂದಿನವರೆಗೆ ಈ ದೇವಸ್ಥಾನವು ನಗರದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿ ಬೆಳೆದಿದೆ. ಪ್ರತಿ ವರ್ಷ ನಡೆಯುವ ಈ ಮಹೋತ್ಸವವು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ. ನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ನಡೆಯುತ್ತಿರುವ 84ನೇ ವಾರ್ಷಿಕ ಮಹೋತ್ಸವವು 64 ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮದೊಂದಿಗೆ ಇದೇ ಅಕ್ಟೋಬರ್ 31, ಶುಕ್ರವಾರ ಅಂತ್ಯಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ನಡೆಯುತ್ತಿರುವ 84ನೇ ವಾರ್ಷಿಕ ಮಹೋತ್ಸವವು 64 ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮದೊಂದಿಗೆ ಇದೇ ಅಕ್ಟೋಬರ್ 31, ಶುಕ್ರವಾರ ಅಂತ್ಯಗೊಳ್ಳಲಿದೆ.

ಶ್ರೀ ವಿನಾಯಕ ಚತುರ್ದಶಿ ದಿನದಿಂದ ಪ್ರಾರಂಭವಾದ ಈ ಮಹೋತ್ಸವವು ಪ್ರತಿವರ್ಷದಂತೆ ಈ ಬಾರಿ ಸಹ ಭಕ್ತಿಯ ಹಬ್ಬವಾಗಿ ಅರಸೀಕೆರೆಯ ಸಮಗ್ರ ಭಾಗವನ್ನು ಆವರಿಸಿದೆ. ಪ್ರತಿದಿನ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗಗಳು ನಡೆಯುತ್ತಾ ಬಂದಿವೆ. ಸಂಜೆಗಳಲ್ಲಿ ನೃತ್ಯ, ನಾಟಕ, ಭಜನೆ, ಹರಿಕಥೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸುತ್ತಿವೆ.ಇತಿಹಾಸದ ಚಿನ್ನದ ಪುಟಗಳು:

ಅರಸೀಕೆರೆಯ ಶ್ರೀ ಪ್ರಸನ್ನ ಗಣಪತಿ ದೇವಾಲಯವು ಸುಮಾರು ಎಂಟು ದಶಕಗಳ ಹಿಂದೆ, ಅಂದರೆ 1940ರ ದಶಕದಲ್ಲಿ, ಸ್ಥಳೀಯ ಭಕ್ತರ ತ್ಯಾಗ ಮತ್ತು ಸೇವೆಯಿಂದ ನಿರ್ಮಾಣಗೊಂಡಿತು. ಶ್ರೀ ಗಣಪತಿಯನ್ನು "ಪ್ರಸನ್ನ ಗಣಪತಿ " ಎಂದು ನಂಬಿ ದೇವಸ್ಥಾನ ನಿರ್ಮಿಸಿದರು. ಆ ದಿನದಿಂದ ಇಂದಿನವರೆಗೆ ಈ ದೇವಸ್ಥಾನವು ನಗರದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿ ಬೆಳೆದಿದೆ. ಪ್ರತಿ ವರ್ಷ ನಡೆಯುವ ಈ ಮಹೋತ್ಸವವು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ.ವಿಸರ್ಜನಾ ಉತ್ಸವಕ್ಕೆ ಸಿದ್ಧತೆ:

ಶುಕ್ರವಾರ ಸಂಜೆ 6 ಗಂಟೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಾನ್ನಿಧ್ಯದಲ್ಲಿ ವಿಸರ್ಜನಾ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು, ವಿವಿಧ ಕಲಾ ತಂಡಗಳು, ಹುಬ್ಬಳಿ ಡಿಜೆ, ನೃತ್ಯ ಹಾಗೂ ಭಕ್ತಿಗೀತೆಗಳೊಂದಿಗೆ ಸಂಭ್ರಮ ತುಂಬಲಿವೆ.ಭಾನುವಾರ ರಾತ್ರಿ ಕಂತೆನಹಳ್ಳಿ ಕೆರೆಯ ಬಳಿ ಭಾರಿ ಪಟಾಕಿ ಪ್ರದರ್ಶನದೊಂದಿಗೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನೆ ನಡೆಯಲಿದೆ.ಈ ಕುರಿತು ಉತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ, ನಗರದ ಶ್ರೀ ಪ್ರಸನ್ನ ಗಣಪತಿ ರಾಜ್ಯದಲ್ಲೇ ಇತಿಹಾಸ ಪ್ರಸಿದ್ಧ ಹಾಗೂ ಭಕ್ತಿಯ ಪರಂಪರೆಯನ್ನು ಉಳಿಸಿಕೊಂಡ ಕ್ಷೇತ್ರಗಳಲ್ಲಿ ಒಂದು. ಕಳೆದ ಎಂಟು ದಶಕಗಳಿಂದ ಅನವರತವಾಗಿ ನಡೆಯುತ್ತಿರುವ ಈ ಮಹೋತ್ಸವವು ಧಾರ್ಮಿಕತೆ, ಸಂಸ್ಕೃತಿ ಮತ್ತು ಸಮಾಜಸೇವೆಯ ಸಮ್ಮಿಲನವಾಗಿದೆ. ಇಲ್ಲಿ ಪ್ರತಿವರ್ಷ ನೂರಾರು ಕಲಾವಿದರು, ಭಕ್ತಾದಿಗಳು, ಸೇವಾದಾರರು ತಮ್ಮ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಬಾರಿ ಕೂಡ ವಿಶೇಷ ಪೂಜಾ ಕೈಂಕರ್ಯ ನಡೆಯುತ್ತಿದ್ದು, ರಾಜ್ಯದ ಎಲ್ಲ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.ನಗರವನ್ನು ತಳಿರು ತೋರಣಗಳು, ವಿದ್ಯುತ್ ದೀಪಾಲಂಕಾರ, ಹೂವುಗಳ ಅಲಂಕಾರ ಮತ್ತು ರಂಗೋಲಿಗಳಿಂದ ಕಂಗೊಳಿಸಿ ಶ್ರೀಯವರ ವಿಸರ್ಜನಾ ಉತ್ಸವವನ್ನು ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯ ಸಂಭ್ರಮವಾಗಿ ಆಚರಿಸಬೇಕು. ಈ ಉತ್ಸವ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ ಇದು ನಮ್ಮ ಅರಸೀಕೆರೆಯ ಗುರುತಾಗಿರುವ ಸಾಮಾಜಿಕ ಒಗ್ಗಟ್ಟಿನ ಹಬ್ಬ ಎಂದು ಹೇಳಿದರು.

ಭಕ್ತಾದಿಗಳಲ್ಲಿ ಶಿಸ್ತಿನ ಸಂಯಮ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತಾ, ಮಹಿಳೆಯರು ಉತ್ಸವ ಸಂದರ್ಭದಲ್ಲಿ ಹೆಚ್ಚಿನ ಆಭರಣ ಧರಿಸಬಾರದೆಂಬ ಜಾಗೃತಿಯನ್ನು ಸಹ ನೀಡಿದರು. ಭಕ್ತಿಯು ಅಲಂಕಾರದಲ್ಲಿ ಅಲ್ಲ, ಆಂತರಿಕ ಶ್ರದ್ಧೆಯಲ್ಲಿ ಇದೆ. ಎಲ್ಲರೂ ಸಮನಾಗಿ ಭಾಗವಹಿಸಿದಾಗಲೇ ಉತ್ಸವದ ನಿಜವಾದ ಅರ್ಥ ವ್ಯಕ್ತವಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲ, ಖಜಾಂಚಿ ನಾಗಭೂಷಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ವಿಭವ್ ಇಟ್ಟಗಿ, ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ ಸಿಖಂದರ್, ಪುರೋಹಿತ ಎಚ್.ಆರ್‌. ವೆಂಕಟೇಶ್ ಹಾಗೂ ಗಣೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಅವರು ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪಕ್ಕೆ ಭೇಟಿ ನೀಡಿ ದರ್ಶನ ಮಾಡಿ, “ಅರಸೀಕೆರೆಯ ಭಕ್ತಮಂಡಳಿ ಕಲೆ ಮತ್ತು ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹದಿಂದ ರಾಜ್ಯದಲ್ಲೇ ಕಲೆಗಳ ತವರೂರಾಗಿದೆ. 84 ವರ್ಷಗಳ ಸಂಪ್ರದಾಯವನ್ನು ಮುಂದುವರಿಸುತ್ತಿರುವ ಭಕ್ತಮಂಡಳಿಯ ಸೇವೆ ಶ್ಲಾಘನೀಯ ಎಂದರು.