ಸಾರಾಂಶ
ಸಮೀಪದ ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ 85ನೇ ವರ್ಷದ ವರ್ಧಂತಿ ಮಹೋತ್ಸವ, 55 ನೇ ವರ್ಷದ ಪೀಠಾರೋಹಣ, ಅಖಿಲ ಭಾರತ ವೇದಾಂತ ಪರಿಷತ್ತು, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಅಂತಾರಾಜ್ಯ ಬೃಹತ್ ಕೃಷಿಮೇಳ ಕಾರ್ಯಕ್ರಮವು ಡಿ.27 ರಿಂದ ಜ.2 ರವರೆಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀಮಠದ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಮೀಪದ ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ 85ನೇ ವರ್ಷದ ವರ್ಧಂತಿ ಮಹೋತ್ಸವ, 55 ನೇ ವರ್ಷದ ಪೀಠಾರೋಹಣ, ಅಖಿಲ ಭಾರತ ವೇದಾಂತ ಪರಿಷತ್ತು, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಅಂತಾರಾಜ್ಯ ಬೃಹತ್ ಕೃಷಿಮೇಳ ಕಾರ್ಯಕ್ರಮವು ಡಿ.27 ರಿಂದ ಜ.2 ರವರೆಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀಮಠದ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದರು.ಸುಕ್ಷೇತ್ರ ಇಂಚಲದಲ್ಲಿ ಶ್ರೀಗಳ 85ನೇ ವರ್ಷದ ವರ್ಧಂತಿ ಮಹೋತ್ಸವ ನಿಮಿತ್ತ ಜರುಗುವ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸುಮಾರು 7 ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳು ಡಾ.ಶಿವಾನಂದ ಭಾರತಿ ಸ್ವಾಮಿಜಿ ಸಾನ್ನಿಧ್ಯದಲ್ಲಿ ಡಿ.27 ರಿಂದ ಜ.2ರವರೆಗೆ ಸಕಲ ಭಕ್ತಾಧಿಗಳಿಂದ ಸದ್ಗುರು ಸಿದ್ಧಾರೂಢರ ಚರಿತಾಮೃತ ಪಾರಾಯಣ ನಡೆಯಲಿದ್ದು, ಡಿ.28 ರಂದು ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಸಚಿವರು, ಕೇಂದ್ರ ಸಚಿವರು ದೇಶದ ವಿವಿಧ ಮೂಲೆಗಳಿಂದ ಮಹಾಮಂಡಲೇಶ್ವರರು, ಮಠಾಧೀಶರು, ಜಗದ್ಗುರುಗಳು, ಸಾಧು ಸಂತರು, ವಿದ್ವಾಂಸರು, ಶರಣರು, ದೂರದರ್ಶನ, ಆಕಾಶವಾಣಿ ಕಲಾವಿದರು ಆಗಮಿಸಲಿದ್ದಾರೆ ಎಂದು ತಿಳಿಸಿದರು.ಹಳೆ ವಿದ್ಯಾರ್ಥಿಗಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿಗಳಾದ ಮಹಾಂತೇಶ ಬೀಳಗಿ, ರವಿ ಚೆನ್ನಣ್ಣವರ, ದಿವ್ಯ ಪ್ರಭು ಅನೇಕರು ಆಗಮಿಸಿ ಶಿಕ್ಷಣ ಚಿಂತನಾಗೊಷ್ಠಿ ನಡೆಸಲಿದ್ದಾರೆ. ಅಂಬಾಪರಮೇಶ್ವರಿ ಮಂದಿರದ ಮಹಾದ್ವಾರ ಉದ್ಘಾಟನೆ, ಜಗದ್ಗುರು ಸಿದ್ಧಾರೂಢರ ಕಥಾಮೃತದ ಸಾಮೂಹಿಕ ಪಾರಾಯಣ, ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನೆ ನಡೆಯಲಿದೆ. ಡಿ.29 ರಂದು ಬೆಳಗ್ಗೆ 8 ಗಂಟೆಗೆ ಬೈಲಹೊಂಗಲ ಪಟ್ಟಣದ ಗೊಂಬಿಗುಡಿ ದೇವಸ್ಥಾನದಿಂದ ಸಹಸ್ರಾರು ಕುಂಭೋತ್ಸವದೊಂದಿಗೆ ಸರ್ವ ಮಹಾತ್ಮರನ್ನು ಭವ್ಯ ಸ್ವಾಗತ, ಆನೆ ಅಂಬಾರಿ, ವಿವಿಧ ವಾದ್ಯಮೇಳಗಳು, ಬೆಳ್ಳಿ ಸಾರೋಟಿನಲ್ಲಿ ಶ್ರೀಗಳನ್ನು ಶ್ರೀಮಠಕ್ಕೆ ಕರೆತರಲಾಗವುದು ಎಂದರು.ಡಿ.31, ಜ.1 ಮತ್ತು 2 ರಂದು ಅಂತಾರಾಜ್ಯಮಟ್ಟದ ಕೃಷಿ ಮೇಳವನ್ನು ಡಾ.ಶಿವಾನಂದ ಭಾರತಿ ಸ್ವಾಮಿಜಿ ಅವರು ಗೋ ಪೂಜೆದೊಂದಿಗೆ ಚಾಲನೆ ನೀಡುವರು. ಕನ್ನೇರಿಮಠದ ಕಾಡಸಿದ್ದೇಶ್ವರ ಸ್ವಾಮಿಜಿ, ನಿಡಸೋಸಿ ನಿಜಲಿಂಗೇಶ್ವರ ಸ್ವಾಮಿಜಿ ಹಾಗೂ ಕೃಷಿ ಚಿಂತಕರು, ಅಧಿಕಾರಿಗಳು ಸಾವಯವ ಕೃಷಿ ಚಿಂತನಗೋಷ್ಠಿ ನಡೆಯಲಿದೆ. ಅಲ್ಲದೇ ರೈತ ಮಕ್ಕಳ ಅನೂಕೂಲಕ್ಕಾಗಿ ವಧುವರರ ಮಾಹಿತಿ ಕೇಂದ್ರ ತೆರೆಯಲಾಗಿದೆ. ಅಲ್ಲದೇ ಜಗದ್ಗುರು ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಶೋಭಾಯಾತ್ರೆ, ಶ್ರೀಗಳ ತೊಟ್ಟಿಲೋತ್ಸವ, ರಜತ ರಥೋತ್ಸವ ಹಾಗೂ ಮಹಾರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.ಚಿತ್ರನಟ ಶಿವರಂಜನ ಬೋಳನ್ನವರ, ಮಡಿವಾಳಪ್ಪ ಹೋಟಿ, ಮಹಾಂತೇಶ ತುರಮರಿ, ಶಿವಾನಂದ ಬೆಳಗಾವಿ, ಸುನೀಲ ಮರಕುಂಬಿ, ಬಿ.ಬಿ.ಗಣಾಚಾರಿ, ಬಸವರಾಜ ಭರಮಣ್ಣವರ, ಚಂದ್ರನಾಯ್ಕ ರಾಯನಾಯ್ಕರ, ಬಸನಾಯ್ಕ ಮಲ್ಲೂರ, ರುದ್ರಪ್ಪ ಪಟ್ಟಣಶೆಟ್ಟಿ, ಶಿವಾನಂದ ಪೂಜೇರ, ಭರಮನಾಯ್ಕ ಮಲ್ಲೂರ, ಪ್ರಕಾಶ ಕರಿಗಾರ, ಸುರೇಶ ಕರಾಡೆ ಇದ್ದರು.ಸುಕ್ಷೇತ್ರ ಇಂಚಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ವರ್ಷ ವಿಶೇಷವಾಗಿ ಅಂತಾರಾಜ್ಯ ಮಟ್ಟದ ಬೃಹತ್ ಕೃಷಿಮೇಳ ಆಯೋಜಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
-ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿ,
ಸುಕ್ಷೇತ್ರ ಇಂಚಲ.