ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಈ ಬಾರಿ ಭೀಮಾನದಿ ಪಾತ್ರದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಭೀಮಾನದಿ ಪ್ರವಾಹದಿಂದ ಸಮಸ್ಯೆಯಾಗಿದೆ. ಮೂರೂವರೆ ಲಕ್ಷ ಕ್ಯುಸೆಕ್ ನೀರು ಬಂದಿದ್ದರಿಂದ ಇಂಡಿ ತಾಲೂಕಿನ ಎಂಟು, ಆಲಮೇಲ ತಾಲೂಕಿನ ಆರು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಒಟ್ಟು 17 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತು ಅವರು ಮಾಹಿತಿ ನೀಡಿದರು. ಜಿಲ್ಲಾದ್ಯಂತ 185 ಕುಟುಂಬಗಳು ಸೇರಿ ಇಂಡಿ ತಾಲೂಕಿನಲ್ಲಿ 541 ಜನ, ಆಲಮೇಲ ತಾಲೂಕಿನಲ್ಲಿ 319 ಜನ ಸೇರಿ ಒಟ್ಟು 860 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ, ವಸತಿ, ಉಪಹಾರ, ಊಟದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಇಡೀ ರಾಜ್ಯದಲ್ಲೇ ವಿಜಯಪುರದಲ್ಲಿ ಅತಿಹೆಚ್ಚು ಮಳೆಯಾಗಿದೆ. ಈ ಬಾರಿ ರಾಜ್ಯದಲ್ಲೇ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.60ರಷ್ಟು ಹೆಚ್ಚಿಗೆ ಮಳೆಯಾಗಿದ್ದರಿಂದ ಅತಿವೃಷ್ಠಿಯಾಗಿದೆ ಎಂದು ತಿಳಿಸಿದರು.
ಸಿಂದಗಿ, ಇಂಡಿ ತಾಲೂಕುಗಳಲ್ಲಿ ಹೆಚ್ಚಿಗೆ ಪ್ರವಾಹವಾಗಿದೆ. ಕುಮಸಗಿಯಲ್ಲಿ 100ಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿವೆ. ದೇವಣಗಾಂವನಲ್ಲೂ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂಡಿ ತಾಲೂಕಿನ ರೂಡಗಿ, ಖೇಡಗಿಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಜೊತೆ ಆ ಗ್ರಾಮಗಳಿಗೆ ಭೇಟಿಯಾಗಿದ್ದೇವೆ. ಎರಡೂ ಗ್ರಾಮಗಳು ಸ್ಥಳಾಂತರ ಮಾಡಬೇಕಿದೆ ಎಂದರು.ತೊಗರಿ, ಹತ್ತಿ, ಈರುಳ್ಳಿ, ಉದ್ದಿನ ಬೆಳೆಗಳು ಶೇ.100ರಷ್ಟು ಹಾನಿಯಾಗಿವೆ. ಕಬ್ಬು ಬೆಳೆ ಶೇ.60 ಹಾನಿಯಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ಇದುವರೆಗೂ 1.45 ಲಕ್ಷ ಹೆಕ್ಟೇರ್ ಬೆಳೆಗಳು ಹಾನಿಯಾಗಿರುವ ವರದಿಯಾಗಿದೆ ಎಂದರು.
ನಮ್ಮ ಸರ್ಕಾರ, ಜಿಲ್ಲಾಡಳಿತ ದಕ್ಷತೆಯಿಂದ ಕೆಲಸ ಮಾಡುತ್ತಿವೆ. ನಮ್ಮ ಮೊದಲ ಗುರಿ ಜೀವ, ಪ್ರಾಣಹಾನಿ ಆಗದಂತೆ ನೋಡಿಕೊಳ್ಳುವುದು. ಏಪ್ರಿಲ್‌ನಿಂದ ಇದುವರೆಗೂ 10 ಮಾನವ ಜೀವ ಹಾನಿಯಾಗಿದ್ದು, ಜೀವ ಹಾನಿಯಾದ ಕುಟುಂಬಸ್ಥರಿಗೆ ತಲಾ ₹5ಲಕ್ಷ ಪರಿಹಾರ ಧನ ವಿತರಿಸಲಾಗಿದೆ. 27 ದೊಡ್ಡ ಮತ್ತು 42 ಸಣ್ಣ, ಒಟ್ಟು 69 ಜಾನುವಾರುಗಳ ಜೀವಹಾನಿಗೆ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಇದುವರೆಗೆ 1041 ಮನೆಗಳಿಗೆ ಹಾನಿಯಾಗಿದ್ದು, ಅವುಗಳಿಗೆ ಹಾನಿಯಾದ ಪ್ರಮಾಣ ಆಧರಿಸಿ 675 ಮನೆಗಳಿಗೆ ಪರಿಹಾರ ವಿತರಿಸಲಾಗಿದ್ದು, 366 ಮನೆಗಳಿಗೆ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು ಎಂದು ಹೇಳಿದರು.ಸಿಎಂ ವೈಮಾನಿಕ ಸಮೀಕ್ಷೆ:
ಸೆ.30ರಂದು ಬೆಳಗ್ಗೆ 11ಗಂಟೆ ವೇಳೆಗೆ ಸಿಎಂ ಸಿದ್ದರಾಮಯ್ಯನವರು ಕಲಬುರಗಿಗೆ ಆಗಮಿಸಿ, ಅಲ್ಲಿಂದ ಅವರು ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ. ನಾವು, ಶಾಸಕರು ನಿರಂತರವಾಗಿ ಜನ ಸಂಪರ್ಕದಲ್ಲಿದ್ದು, ಸ್ಪಂದಿಸಲಿದ್ದೇವೆ. ಪ್ರವಾಹ ಭೀತಿ, ಮಳೆ ಕಡಿಮೆ ಆಗುವ ವರೆಗೂ ಜನರು ನದಿಪಾತ್ರಕ್ಕೆ ಹೋಗಬಾರದು ಎಂದು ಸೂಚಿಸಿದರು.ಕೇಂದ್ರ ಪರಿಹಾರ ಹೆಚ್ಚಿಸಲಿ:
ಸಂತ್ರಸ್ತರಿಗೆ ತಕ್ಷಣದಲ್ಲಿ ರಾಜ್ಯ ಸರ್ಕಾರದಿಂದ ₹5 ಸಾವಿರ ಪ್ರಾಥಮಿಕ ಸಹಾಯಧನ ಕೊಡಲಾಗುತ್ತಿದೆ. ಆದರೆ ಹಳೆಯ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಕೇಂದ್ರ ಸರ್ಕಾರ ಕೊಡುವ ಪರಿಹಾರ ರೈತರು ಹಾಕಿದ್ದ ಬೀಜ, ಗೊಬ್ಬರದ ಖರ್ಚು ಸಹ ಆಗುವುದಿಲ್ಲ. ತಕ್ಷಣವೇ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರಚಿಸಿ ಈಗಿರುವ ಎನ್‌ಡಿಆರ್‌ಎಫ್ ಪರಿಹಾರಕ್ಕೆ ಕನಿಷ್ಟ ಎರಡುಪಟ್ಟು ಹೆಚ್ಚುಮಾಡಿ ಪರಿಹಾರ ಕೊಡುವ ಕೆಲಸ ಮಾಡಬೇಕು ಎಂದರು. ಬಚಾವತ್ ಆಯೋಗದ ಪ್ರಕಾರ ಮಹಾರಾಷ್ಟ್ರಕ್ಕೆ 95 ಟಿಎಂಸಿ ಗಿಂತ ಹೆಚ್ಚಿಗೆ ನೀರು ಬಳಸಿಕೊಳ್ಳಲು ಅವಕಾಶ ಇಲ್ಲದಿದ್ದರೂ ಸಹ ಮಹಾರಾಷ್ಟ್ರದವರು ಸೀನಾನದಿ, ಭೀಮಾನದಿ ಹಾಗೂ ವಿವಿಧ ಬ್ಯಾರೇಜ್‌ಗಳ ಮೂಲಕ ಹೆಚ್ಚುವರಿಯಾಗಿ 50 ಟಿಎಂಸಿ ನೀರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ನಿಗಮ ಮಂಡಳಿ ಅಧ್ಯಕ್ಷೆ ಕಾಂತಾ ನಾಯಕ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಸಿಇಒ ರಿಶಿ ಆನಂದ, ಎಸ್.ಪಿ.ಲಕ್ಷ್ಮಣ ನಿಂಬರಗಿ ಇದ್ದರು.