20 ರಿಂದ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

| Published : Dec 16 2024, 12:45 AM IST

ಸಾರಾಂಶ

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಇದೇ ಡಿ. 20, 21, 22ರಂದು ಮಂಡ್ಯದಲ್ಲಿ ನಡೆಯಲಿದೆ. ವಿವಿಧ ವಿಚಾರ, ಸಮಸ್ಯೆಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.

ಮಡಿಕೇರಿ: ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ಡಿಸೆಂಬರ್ 20, 21 ಮತ್ತು 22 ರಂದು ಮಂಡ್ಯದಲ್ಲಿ ನಡೆಯಲಿದೆ.

ಈ ಸಮ್ಮೇಳನದಲ್ಲಿ ಮೂರು ವೇದಿಕೆಗಳಿದ್ದು 27 ವಿಚಾರಗೋಷ್ಠಿಗಳಲ್ಲಿ 150 ವಿದ್ವಾಂಸರು ನಾಡಿಗೆ ಸಂಬಂಧಿಸಿದ ವಿವಿಧ ವಿಚಾರಗಳ, ಸಮಸ್ಯೆಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ‘ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಮಹನೀಯರ ಕುರಿತು’, ಕನ್ನಡ ನಾಡಿನ ಜಲ ನೆಲ ಸಾಕ್ಷರತೆಯ ಕುರಿತು ಅವಲೋಕನ, ‘ಸಾಹಿತ್ಯದಲ್ಲಿ ರಾಜಕೀಯ - ರಾಜಕೀಯದಲ್ಲಿ ಸಾಹಿತ್ಯ‘ ಕರ್ನಾಟಕ 50 ಹಿನ್ನೋಟ- ಮುನ್ನೋಟ, ಕರ್ನಾಟಕದ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ, ಸಮ್ಮೇಳನ ಅಧ್ಯಕ್ಷರ ಜೊತೆಗೆ ಸಂವಾದ, ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗ್ಗೆ, ಸರ್ಕಾರಿ ಶಾಲೆಗಳ ಸಬಲೀಕರಣ ಹೀಗೆ ಹತ್ತು ಹಲವು ವಿಷಯದಲ್ಲಿ ವಿಚಾರಗೋಷ್ಠಿ ಯೋಜನೆಗೊಂಡಿವೆ.

ನಾಲ್ಕು ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು, 83 ಕವಿಗಳು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ವಿಶೇಷವಾಗಿ ಅಂಧರ ಕವಿಗೋಷ್ಠಿ ಏರ್ಪಡಿಸಲಾಗಿದ್ದು 10 ಮಂದಿ ಅಂಧ ಕವಿಗಳು ಕವನವಾಚನ ಮಾಡಲಿದ್ದಾರೆ. ಮಹಿಳಾ ಕವಿಗಳ ಕವಿಗೋಷ್ಠಿ ನಡೆಯಲಿದೆ.

87ನೇ ಸಾಹಿತ್ಯ ಸಮ್ಮೇಳನವಾದ್ದರಿಂದ 87 ಸಾಧಕರನ್ನು ಮತ್ತು ಕರ್ನಾಟಕ ಸುವರ್ಣ ಸಂಭ್ರಮದ ಕುರಿತು 50 ಸಾಧಕರನ್ನು ಒಟ್ಟಾಗಿ 137 ಸಾಧಕರನ್ನು ಸನ್ಮಾನಿಸಲಾಗುತ್ತಿದೆ.

ಕೊಡಗು ಜಿಲ್ಲೆಯಿಂದ ವಿಶೇಷ ಆಹ್ವಾನಿತರು, ನೋಂದಾಯಿತ ಪ್ರತಿನಿಧಿಗಳು, ಸಾಹಿತ್ಯ ಪರಿಷತ್ತಿನ ಸದಸ್ಯರು, ಕನ್ನಡ ಅಭಿಮಾನಿಗಳು ಸೇರಿದಂತೆ 300 ಕ್ಕೂ ಹೆಚ್ಚು ಮಂದಿ ಸಮ್ಮೇಳನಕ್ಕೆ ಹೋಗುವ ತಯಾರಿ ನಡೆಸಿದ್ದಾರೆ.

ಶತಮಾನ ರಜತ ಸುವರ್ಣ ಸಂಭ್ರಮ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನಡೆಯಲಿದ್ದು, ಭಾರತದ ಸಂವಿಧಾನ 75 ಕುರಿತು ಕೊಡಗಿನ ಹಿರಿಯ ಸಾಹಿತಿಗಳಾದ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಉಪನ್ಯಾಸ ನೀಡಲಿದ್ದಾರೆ. ಪ್ರತಿ ಜಿಲ್ಲೆಯಿಂದ ಒಬ್ಬ ಸಾಧಕರನ್ನು ಸನ್ಮಾನಿಸಲಾಗುತ್ತಿದ್ದು ಕೊಡಗು ಜಿಲ್ಲೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಕಾಶವಾಣಿ ಉದ್ಘೋಷಕರು, ಯಕ್ಷಗಾನ ತಾಳಮದ್ದಳೆ ಪ್ರವೀಣರು, ಸಾಹಿತಿಗಳು ಆದ ಸುಬ್ರಾಯ ಸಂಪಾಜೆ ಅವರನ್ನು ಸನ್ಮಾನಿಸಲಾಗುತ್ತಿದೆ. ಕೊಡಗು ಜಿಲ್ಲೆಯಿಂದ ಕವಿಗೋಷ್ಠಿಗೆ ಕವಯಿತ್ರಿ, ಸಾಹಿತಿ ರಮ್ಯ ಕೆ.ಜಿ ಅವರನ್ನು ಆಯ್ಕೆ ಮಾಡಲಾಗಿದೆ. ಇದು ಕನ್ನಡಿಗರ ಹಬ್ಬವಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ತಿಳಿಸಿದ್ದಾರೆ.