ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ₹ 89.50 ಲಕ್ಷ ಲಾಭ

| Published : Sep 24 2025, 01:02 AM IST

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು 2024-25 ನೇ ಸಾಲಿನಲ್ಲಿ ಗೊತ್ತುಪಡಿಸಿದ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುವ ಮೂಲಕ ನಿರೀಕ್ಷಿತ ಮಟ್ಟದಲ್ಲಿ ಸಾಲ ವಸೂಲಾತಿ ಮಾಡಿದೆ. ₹ 89.50 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು 2024-25 ನೇ ಸಾಲಿನಲ್ಲಿ ಗೊತ್ತುಪಡಿಸಿದ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುವ ಮೂಲಕ ನಿರೀಕ್ಷಿತ ಮಟ್ಟದಲ್ಲಿ ಸಾಲ ವಸೂಲಾತಿ ಮಾಡಿದೆ. ₹ 89.50 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.ಪಟ್ಟಣದ ಯಲ್ಲಾಲಿಂಗ ಮಠದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ವರ್ಷಾಂತ್ಯಕ್ಕೆ ಸಂಘದ ಸ್ವಂತ ಬಂಡವಾಳ ₹ 1442.13 ಲಕ್ಷ, ಒಟ್ಟು ಠೇವಣಿ ₹ 5075.01 ಲಕ್ಷ, ಪಡೆದ ಸಾಲಗಳ ಬಾಕಿ ₹ 1418.55 ಲಕ್ಷಗಳಷ್ಟಿದ್ದು, ದುಡಿಯುವ ಬಂಡವಾಳ ₹ 7936.41 ಲಕ್ಷ. ಮಾ.31ಕ್ಕೆ ಬರತಕ್ಕ ಸಾಲಗಳ ಬಾಕಿ ₹ 4026.48 ಲಕ್ಷ. ಸಂಘವು ಹೂಡಿಕೆಯ ಮೊತ್ತ ₹3387.42 ಲಕ್ಷ. ಸಂಘವು ಅಪೆಕ್ಸ ಬ್ಯಾಂಕ್‌ ಹಾಗೂ ವಿಡಿಸಿಸಿ ಬ್ಯಾಂಕ್‌ನಿಂದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ಭಾಜನವಾಗಿದೆ ಎಂದು ತಿಳಿಸಿದರು.

ಪಟ್ಟಣದ ಎಪಿಎಂಸಿಯಲ್ಲಿ ಸಂಘವು ಎರಡು ಜಾಗ ತೆಗೆದುಕೊಂಡಿದೆ. ಇದರಲ್ಲಿ ಕೃಷಿ ಉಪಕರಣಗಳ ಅಗ್ರಿಮಾರ್ಟ್ ಮಾಡುವ ಉದ್ದೇಶ ಹೊಂದಿದೆ. ಈಗಾಗಲೇ ಸಂಘದಿಂದ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್, ಗೊಬ್ಬರ ಮಳಿಗೆ ಆರಂಭಿಸಿದೆ. ಇದರ ಪ್ರಯೋಜನವನ್ನು ರೈತ ಬಾಂಧವರು ಪಡೆದುಕೊಳ್ಳಬೇಕು. ಸಂಘದಿಂದ ಮುಂಬರುವ ದಿನಗಳಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆ ಕೇಂದ್ರ, ಶೀತಲ ಶೇಖರಣಾ ಗೋದಾಮು, ಕುಸಬಿ ಎಣ್ಣೆ ಗಾಣ ಸೇರಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು.

ಸಭೆಯಲ್ಲಿ ಠೇವಣಿಗಳ ಆಕರ್ಷಣೆಗಾಗಿ ಬಡ್ಡಿ ದರ ಹೆಚ್ಚಿಸುವಂತೆ, ಬಿನ್ ಶೇತ್ಕಿ ಸಾಲಕ್ಕಾಗಿ ರೈತರ ಬೆಳೆ ಸಾಲ ಇದ್ದವರ ಜಾಮೀನು ಪಡೆಯುವ ಬದಲು ವ್ಯಾಪಾರಸ್ಥರ ಜಾಮೀನು ಪಡೆಯುವುದು. ರೈತರ ಬೆಳೆ ಸಾಲದ ಪ್ರಮಾಣವನ್ನು ಹೆಚ್ಚಿಸುವಂತೆ, ರೈತರ ಜಮೀನಿನಲ್ಲಿ ಮನೆ ಕಟ್ಟಲು ಸಾಲ ಸೌಲಭ್ಯ ಒದಗಿಸುವಂತೆ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಚಿಕ್ಕೊಂಡ 2024-25ರ ಜಮಾ-ಖರ್ಚು, ಸಂಘದ ವರದಿ ವಾಚಿಸಿ ಕೃಷಿಯೇತರ ಸಾಲ ಪಡೆದ ಸಾಲಗಾರರು ಸಕಾಲಿಕವಾಗಿ ಸಾಲವನ್ನು ತುಂಬುವ ಮೂಲಕ ಸಂಘದ ಅಭಿವೃದ್ಧಿ ಸಹಕಾರ ನೀಡಬೇಕೆಂದರು. ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಎಂ.ಹಂಗರಗಿ, ಸಂಘದ ವೃತ್ತಿಪರ ನಿರ್ದೇಶಕ, ನಿವೃತ್ತ ಸಹಕಾರ ಸಂಘದ ಸಹಾಯಕ ನಿಬಂಧಕ ಎ.ಎಂ.ಚಂದವಾಲಿ ಮಾತನಾಡಿದರು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ನಿರ್ದೇಶಕ ಶ್ರೀಶೈಲ ಪರಮಗೊಂಡ, ಈರಣ್ಣ ವಂದಾಲ, ಸುರೇಶ ನಾಯಕ, ನಿಂಗಪ್ಪ ,ಕುಳಗೇರಿ, ಸಂತೋಷ ಹಾರಿವಾಳ, ಸಂಗನಬಸಪ್ಪ ನಾಯ್ಕೋಡಿ, ಮುತ್ತಪ್ಪ ಉಕ್ಕಲಿ, ಮಾದೇವಿ ಮೈಲೇಶ್ವರ, ಜಯಶ್ರೀ ಪಾಟೀಲ ಇದ್ದರು. ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಸ್ವಾಗತಿಸಿದರು. ಸಹ ಮುಖ್ಯಕಾರ್ಯನಿರ್ವಾಹಕ ಶಂಕರಗೌಡ ಚಿಕ್ಕೊಂಡ, ಸಿಬ್ಬಂದಿ ಮಹೇಶ ಅವಟಿ, ಶ್ರೀಶೈಲ ಮುರಾಳ, ವಿಶ್ವನಾಥ ಕಡಕೋಳ, ಶಂಕರಲಿಂಗ ಅಡಗಿಮನಿ, ಸುರೇಶ ಕುಳಗೇರಿ ಇತರರು ಇದ್ದರು. ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.