೮೯ ಲಕ್ಷ ರು. ಬಳಕೆಯಾಗದೆ ಅನುದಾನ ವಾಪಸ್.!

| Published : May 23 2024, 01:01 AM IST

ಸಾರಾಂಶ

ಯಳಂದೂರು ತಾಲೂಕು ಪಂಚಾಯಿತಿಗೆ ಬಂದಿದ್ದ ವಿಶೇಷ ಅನುದಾನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಳಕೆಯಾಗದೆ ೮೯ ಲಕ್ಷ ರು. ಸರ್ಕಾರಕ್ಕೆ ವಾಪಸ್ಸಾಗಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿ ಪರಿಣಮಿಸಿದೆ.

ಕನ್ನಡಪ್ರಭ ವಾರ್ತೆ ಯಳಂದೂರು

ಯಳಂದೂರು ತಾಲೂಕು ಪಂಚಾಯಿತಿಗೆ ಬಂದಿದ್ದ ವಿಶೇಷ ಅನುದಾನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಳಕೆಯಾಗದೆ ೮೯ ಲಕ್ಷ ರು. ಸರ್ಕಾರಕ್ಕೆ ವಾಪಸ್ಸಾಗಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿ ಪರಿಣಮಿಸಿದೆ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಳಕೆಯಾಗುತ್ತಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ಮೂಲ ಸೌಲಭ್ಯಕ್ಕೆ ಅನುದಾನವನ್ನು ನೀಡುತ್ತಿಲ್ಲ ಎಂಬ ಆರೋಪದ ನಡುವೆಯೂ ತಾಲೂಕಿಗೆ ಹೆಚ್ಚುವರಿ ಅನುದಾನ ಲಭಿಸಿತ್ತು. ಹೆಚ್ಚುವರಿಯಾಗಿ ತಾಲೂಕಿಗೆ ಒಟ್ಟು ೧.೧೨ ಕೋಟಿ ರು. ಹಣ ಬಿಡುಗಡೆಯಾಗಿತ್ತು. ಅದರಲ್ಲಿ ಒಟ್ಟು ೩೫ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಕಾಮಗಾರಿಯನ್ನು ಮಾಡದೇ ಕೇವಲ ೩೩ ಲಕ್ಷ ರು.ಗಳ ಅನುದಾನವನ್ನು ಬಳಕೆ ಮಾಡಿ ಉಳಿದ ೮೯ ಲಕ್ಷ ರು. ಬಳಸದೇ ಇರುವುದರಿಂದ ಈ ಹಣ ಸರ್ಕಾರಕ್ಕೆ ವಾಪಸ್ಸಾಗಿದೆ. ತಾಲೂಕಿನ ಶಾಲಾ ಕಟ್ಟಡಗಳ ದುರಸ್ತಿ, ಕೌಂಪೌಂಡ್, ಶೌಚಗೃಹ, ರಸ್ತೆ, ಚರಂಡಿ, ಗ್ರಂಥಾಲಯ ಅಭಿವೃದ್ಧಿ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ, ಕೆರೆ ಅಭಿವೃದ್ಧಿ, ತಡೆಗೋಡೆ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಕಳೆದ ಮಾ. 3 ರಂದು ತಾಲೂಕು ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಅನುದಾನವನ್ನು ಅದಷ್ಟು ಬೇಗ ಮಾಡಿ ಮುಗಿಸಬೇಕೆಂದು ತಿರ್ಮಾನ ಮಾಡಲಾಗಿತ್ತು.ಈ ಬಗ್ಗೆ ಸಂಬಂಧಪಟ್ಟ ಜಿಪಂ ಎಇಇ ಹಾಗೂ ಜೆಇ ಅಧಿಕಾರಿಗಳು ೧.೧೨ ಕೋಟಿ ರು.ನ ೩೫ ಕಾಮಗಾರಿಗಳನ್ನು ತಮಗೆ ಆಪ್ತರಾದ ೩ ಜನ ಗುತ್ತಿಗೆದಾರರಿಗೆ ಪೂರ್ತಿ ಕೆಲಸವನ್ನು ಮಾಡುವಂತೆ ತುಂಡು ಗುತ್ತಿಗೆ ನೀಡಿ ಕೈ ತೊಳೆದುಕೊಂಡಿದ್ದರು. ಆದರೆ ಈ ಗುತ್ತಿಗೆದಾರರು ಕೇವಲ ೬ ಕಾಮಗಾರಿಗಳನ್ನು ಪೂರ್ಣ ಮಾಡಿ ಇದಕ್ಕೆ ಕೇವಲ ೩೩ ಲಕ್ಷ ರು. ಖರ್ಚು ಮಾಡಿ ಉಳಿದ ಕಾಮಗಾರಿಗಳನ್ನು ಮಾಡದೇ ಬಿಟ್ಟ ಪರಿಣಾಮ ಸರ್ಕಾರದ ಅನುದಾನವು ಸಮಪರ್ಕವಾಗಿ ಬಳಕೆಯಾಗದೆ ವಾಪಸ್ಸಾಗಿದೆ ಎಂಬುದು ಸಾರ್ವಜನಿಕರ ದೂರಾಗಿದೆ. ಈ ಬಗ್ಗೆ ಕ್ರಮವಹಿಸದ ಅಧಿಕಾರಿಗಳು:

ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕು. ತಾಪಂ ಆಡಳಿತಾಧಿಕಾರಿ ಹಾಗೂ ಮೇಲಾಧಿಕಾರಿಗಳು ಈ ರೀತಿಯ ತುಂಡು ಗುತ್ತಿಗೆಯನ್ನು ಎಲ್ಲಾ ಗುತ್ತಿಗೆದಾರರಿಗೂ ಹಂಚಿಕೆ ಮಾಡದೆ ತಮಗೆ ಬೇಕಾದ ೩ ಗುತ್ತಿಗೆದಾರರಿಗೆ ಕೆಲಸವನ್ನು ಹಂಚಿಕೆ ಮಾಡಿರುವುದು ಎಷ್ಟರ ಮಟ್ಟಕ್ಕೆ ಸರಿ. ಈ ಬಗ್ಗೆ ಯಾವುದೇ ರೀತಿಯ ತನಿಖೆ ಮಾಡದೆ ಜಿಪಂ ಸಿಇಒ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂಬುದು ಸಾರ್ವಜನಿಕರ ದೂರಾಗಿದೆ. ತಾಲೂಕಿನಲ್ಲಿ ಹೆಚ್ಚುವರಿ ಅನುದಾನ ಬಂದಿತ್ತು. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಪರ್ಕವಾಗಿ ಕೆಲಸವನ್ನು ನಿರ್ವಹಿಸದ ಪರಿಣಾಮ ಅನುದಾನ ಸರ್ಕಾರಕ್ಕೆ ವಾಪಾಸ್ ಹೋಗಿದೆ. ಈ ಕಾಮಗಾರಿಯಲ್ಲಿ ನಡೆದಿರುವ ಕೆಲಸಗಳು ಗುಣಮಟ್ಟದಿಂದ ಕೂಡಿಲ್ಲ, ಈ ಬಗ್ಗೆ ಸಂಬಂದಪಟ್ಟ ಮೇಲಧಿಕಾರಿಗಳು ಸೂಕ್ತ ತನಿಖೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವಹಿಸಬೇಕು ಎಂದು ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೂ ಇದು ಪ್ರಯೋಜನಕ್ಕೆ ಬಂದಿಲ್ಲ. ಈಗಲಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಿ.ತಾಲೂಕಿನ ಪಂಚಾಯಿತಿ ಅನುದಾನವು ಕೆಲಸ ಮಾಡದೇ ಇರುವ ಪರಿಣಾಮ ವಾಪಸ್ಸಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದು, ಈ ವಿಷಯ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗಿದೆ.

-ಪುಟ್ಟರಾಜು, ಕೊಮಾರನಪುರ