ಸಾರಾಂಶ
ರಾಣಿಬೆನ್ನೂರು: ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ವತಿಯಿಂದ ನಗರದ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟಿಸಿ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಮಯದಲ್ಲಿ ಕರ್ನಾಟಕ ಉತ್ತರ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಲಾಷ ಬದಾಮಿ ಮಾತನಾಡಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಕೇಂದ್ರಗಳಾಗಿದ್ದು, ಅಲ್ಲಿಂದ ಹೊರಡುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳಾಗುತ್ತಾರೆ. ಅಂತಹ ವಿಶ್ವವಿದ್ಯಾಲಯಗಳಿಗೆ ಮೂಲ ಸೌಲಭ್ಯಗಳನ್ನು ನೀಡುವುದು ಸರ್ಕಾರಗಳ ಆದ್ಯ ಕರ್ತವ್ಯ. ಆದರೆ ರಾಜ್ಯ ಸರ್ಕಾರ ಅವುಗಳನ್ನು ಮುಚ್ಚಲು ಹೊರಟಿರುವುದು ಖಂಡನೀಯವಾಗಿದೆ ಎಂದರು.ಆರ್ಥಿಕ ಹಾಗೂ ಮೂಲ ಸೌಲಭ್ಯಗಳ ನೆಪವನ್ನು ಹೇಳಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ. ಸರ್ಕಾರಗಳು ವಿಶ್ವವಿದ್ಯಾಲಯಗಳ ಸ್ಥಾಪನೆ ಹಾಗೂ ಮುಚ್ಚುವ ಮನಸೋ ಇಚ್ಛೆ ಕಾರ್ಯದಿಂದ ವಿಶ್ವವಿದ್ಯಾಲಯಗಳ ಮೇಲೆ ಮತ್ತು ಶೈಕ್ಷಣಿಕ ಕ್ಷೇತ್ರದ ಮೇಲೆ ಇರುವ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ವಿಶ್ವವಿದ್ಯಾಲಯಗಳ ಕುರಿತು ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೆ ಶಿಕ್ಷಣ ತಜ್ಞರ ಸಲಹೆಗಳನ್ನು ತೆಗೆದುಕೊಳ್ಳಬೇಕು ಹೊರತು ರಾಜಕೀಯ ಕೇಂದ್ರಿತ ನಿರ್ಧಾರಗಳು ಆಗಬಾರದು ಎಂದರು.ನಗರ ಕಾರ್ಯದರ್ಶಿ ಪವನಕುಮಾರ ಇಟಗಿ, ಸಹ ಕಾರ್ಯದರ್ಶಿ ಎಲ್ಲಮ್ಮ, ಸುಶ್ಮಿತಾ, ಅಕ್ಷತಾ, ಹರೀಶ, ನಂದೀಶ ಪೂಜಾರ, ದರ್ಶನ ತಗಿನ, ಬಸವರಾಜ ಮತ್ತು ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಅಮೃತ ನಗರೋತ್ಥಾನ ಯೋಜನೆ:ಸಾರ್ವಜನಿಕರಿಗೆ ಸೂಚನೆರಾಣಿಬೆನ್ನೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ(ಮುನಿಸಿಪಾಲಿಟಿ) ಯೋಜನೆ ಹಂತ- 4ರ ಅಡಿ ನಗರ ವ್ಯಾಪ್ತಿಯ ಸಾರ್ವಜನಿಕರು ಆನ್‌ಲೈನ್ ಜಲನಿಧಿ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕಗಳನ್ನು ಪಾವತಿಸಿ ಒಳಚರಂಡಿ ಜೋಡಣೆ ಪಡೆದುಕೊಳ್ಳಬಹುದು.ಇಲ್ಲಿನ ಮೃತ್ಯುಂಜಯ ನಗರ, ಪಂಪಾ ನಗರ, ವಿಕಾಸ ನಗರ, ಕಮಲಾ ನಗರ, ಶ್ರೀರಾಮ ನಗರ, ಗೌರಿಶಂಕರ ನಗರ, ರಾಜೇಶ್ವರಿ ನಗರ, ಬಿರೇಶ್ವರ ನಗರ, ಕಂಠಿ ಬೀರೇಶ್ವರ ನಗರ, ಚೋಳಮರಡೇಶ್ವರ ನಗರ, ವಿದ್ಯಾನಗರ, ಸಿದ್ದೇಶ್ವರ ನಗರ, ಹಳೇ ಬ್ಯಾಡಗಿ ರಸ್ತೆ, ಮಂಡಕ್ಕಿ ಬಟ್ಟಿ ರಸ್ತೆ, ಅಶೋಕ ನಗರ, ವಾಗೀಶ ನಗರ, ಚೌಡೇಶ್ವರಿ ನಗರ, ಚೌಡೇಶ್ವರಿ ಬಡಾವಣೆ, ಚಿದಂಬರ ನಗರ ಹಾಗೂ ವಿಕಾಸ ನಗರಗಳ ಭಾಗಗಳಲ್ಲಿ ಚರಂಡಿ, ರಸ್ತೆ/ ಫೇವರ್ಸ್ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.ಆದ್ದರಿಂದ ಈ ಪ್ರದೇಶಗಳ ನಾಗರಿಕರು ರಸ್ತೆ/ಚರಂಡಿ/ಪೇವರ್ಸ್ ಕಾಮಗಾರಿ ಪ್ರಾರಂಭಿಸುವ ಮುಂಚಿತ ನಗರಸಭೆಯ ನೋಂದಾಯಿತ ಪ್ಲಂಬರ್‌ದಾರರ ಮುಖಾಂತರ ನಗರಸಭೆಗೆ ಆನ್‌ಲೈನ್ ಜಲನಿಧಿ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕಗಳನ್ನು ಪಾವತಿಸಿ ಒಳಚರಂಡಿ ಜೋಡಣೆ ಪಡೆದುಕೊಳ್ಳಬಹುದು ಎಂದು ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.