ಮಂಗಳೂರಲ್ಲಿ ಬಡವರ ಮನೆ ನಿವೇಶನಕ್ಕೆ 9.15 ಎಕರೆ ಭೂಮಿ ಮೀಸಲು

| Published : Jul 29 2024, 12:59 AM IST

ಸಾರಾಂಶ

ಪೂರ್ವಭಾವಿ ಮಂಜೂರಾತಿಯ ಹೊರತಾಗಿಯೂ ಜೂನ್‌ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಂದೂಡಲ್ಪಟ್ಟಿದ್ದ ಟಿಡಿಆರ್‌ ಪ್ರಕರಣವೊಂದಕ್ಕೆ ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್‌ ಅನುಮೋದನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಮರಕಡದಲ್ಲಿ ಬಡವರ ನಿವೇಶನಕ್ಕಾಗಿ 9.15 ಎಕರೆ ಜಾಗವನ್ನು ಟಿಡಿಆರ್‌ ನೀಡಿ ಸ್ವಾಧೀನಪಡಿಸಲು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅನುಮೋದನೆ ಪ್ರಕಟಿಸಿದರು.ಪೂರ್ವಭಾವಿ ಮಂಜೂರಾತಿಯ ಹೊರತಾಗಿಯೂ ಜೂನ್‌ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಂದೂಡಲ್ಪಟ್ಟಿದ್ದ ಟಿಡಿಆರ್‌ ಪ್ರಕರಣವೊಂದಕ್ಕೆ ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್‌ ಅನುಮೋದನೆ ನೀಡಿದ್ದಾರೆ.

ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯ ಆರಂಭದಲ್ಲಿ ವಸತಿ ಯೋಜನೆಗಾಗಿ ಪದವು ಗ್ರಾಮದಲ್ಲಿ ಸುಮಾರು 3.42 ಎಕರೆ ಜಮೀನು ಹಾಗೂ ಮರಕಡದಲ್ಲಿ 9.15 ಎಕರೆ ಭೂಮಿಯನ್ನು ಟಿಡಿಆರ್‌ ಮೂಲಕ ಸ್ವಾಧೀನ ಪಡಿಸಲು ಜೂನ್‌ ತಿಂಗಳಲ್ಲಿ ನಡೆದ ಸಭೆಯಲ್ಲಿ ಮೇಯರ್‌ ಪೂರ್ವಭಾವಿ ಮಂಜೂರಾತಿ ನೀಡಿ ಕಾರ್ಯಸೂಚಿ ಮಂಡನೆಯಾಗಿತ್ತು. ಕಳೆದ ಸಭೆಯಲ್ಲಿ ಕಾರ್ಯಸೂಚಿಯ ಬಗ್ಗೆ ಪ್ರಸ್ತಾವಿಸುವ ವೇಳೆಯಲ್ಲಿಯೇ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅವರು ವಿಷಯವನ್ನು ಮುಂದೂಡುವುದಾಗಿ ತಿಳಿಸಿದ್ದರು. ಆದರೆ ಗುರುವಾರ ನಡೆದ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಯನ್ನು ಸ್ಥಿರೀಕರಿಸುವ ಸಂದರ್ಭ ಮೇಯರ್‌ ಸುಧೀರ್‌ ಶೆಟ್ಟಿ ಅವರು ಮರಕಡದ ಟಿಡಿಆರ್‌ ಭೂಸ್ವಾಧೀನ ಪ್ರಕರಣಕ್ಕೆ ಅನುಮೋದನೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭ ವಿಪಕ್ಷ ಸದಸ್ಯ ಅಬ್ದುಲ್‌ ರವೂಫ್‌ ಆಕ್ಷೇಪ ವ್ಯಕ್ತಪಡಿಸಿ, ಮರಕಡದ ಈ ಜಾಗ ಪಾರ್ಕಿಂಗ್‌ ವ್ಯವಸ್ಥೆಗಾಗಿ ಟಿಡಿಆರ್‌ ನೀಡಿ ಸ್ವಾಧೀನ ಪಡಿಸಿಕೊಳ್ಳಲು ಹಿಂದೆಯೂ ಕಾರ್ಯಸೂಚಿ ಬಂದಿತ್ತು. ಆದರೆ ಜಾಗ ಸರಿ ಇಲ್ಲ ಎಂದು ಕೈಬಿಡಲಾಗಿತ್ತು. ಈಗ ಇದು ಬಡವರಿಗೆ ಮನೆ ಕಟ್ಟಲು ಎಂದು ಸ್ವಾಧೀನ ಪಡಿಸಲಾಗುತ್ತಿದೆ. ಆದರೆ ಮನೆಕಟ್ಟಲು ಅರ್ಹತೆ ಇಲ್ಲದ ಆ ಜಾಗ ಇಳಿಜಾರು ಪ್ರದೇಶ. ಮನೆಕಟ್ಟಲು ಸಾಧ್ಯವಿಲ್ಲ ಎಂದು ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ವರದಿ ನೀಡಿರುವಾಗ ಯಾರ ಲಾಭಕ್ಕಾಗಿ ಅನುಮೋದನೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿ, ಕೆಲ ಸಮಯದಿಂದ ಹಿಂದೆ ನಗರಕ್ಕೆ ಭೇಟಿ ನೀಡಿ ಸಭೆ ನಡೆಸಿದ್ದ ನಗರಾಭಿವೃದ್ಧಿ ಸಚಿವರು 4,000 ಬಡವರಿಗೆ ಮನೆ ನಿರ್ಮಿಸಲು ಅರ್ಜಿ ಬಂದಿದೆ. ಅದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಟಿಡಿಆರ್‌ ಮೂಲಕ ಜಾಗ ನೀಡುವುದಿದ್ದರೆ ಪತ್ರಿಕಾ ಪ್ರಕಟನೆಯ ಮೂಲಕ ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಜಾಗದ ಮಾಲೀಕರು ನೀಡಿರುವ ಪ್ರಸ್ತಾವನೆಯ ಮೇರೆಗೆ ಮರಕಡದ ಭೂಮಿಯನ್ನು ಟಿಡಿಆರ್‌ ಮೂಲಕ ಸ್ವಾಧೀನ ಪಡಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಈ ಜಾಗ ಐಟಿ ಪಾರ್ಕ್‌ಗೆ ಕೇಳಲಾಗಿತ್ತು. ಆದರೆ ಸಾರ್ವಜನಿಕ ಉದ್ದೇಶವಲ್ಲದೆ ಇತರ ಕಾರ್ಯಕ್ಕೆ ಟಿಡಿಆರ್‌ ಮೂಲಕ ಜಾಗ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲದೆ,ಕೈಬಿಡಲಾಗಿತ್ತು. ಈಗ ಬಡವರಿಗೆ ಮನೆ ಅಥವಾ ನಿವೇಶನಕ್ಕಾಗಿ ಈ ಜಾಗ ಬಳಕೆಯಾಗಲಿದೆ ಎಂದು ಸ್ಪಷ್ಟಪಡಿಸಿದರು. ಎಲ್‌ಇಡಿ ಸಮಸ್ಯೆ:ನಗದಲ್ಲಿ ಸುಮಾರು 78 ಕೋಟಿ ರು.ಗಳಲ್ಲಿ ಕೈಗೆತ್ತಿಕೊಂಡಿರುವ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಸಮಸ್ಯೆ ಕಳೆದ ನಾಲ್ಕೈದು ವರ್ಷಗಳಿಂದ ಮುಗಿದಿಲ್ಲ. ಅಳವಡಿಕೆ ಮಾಡಿರುವ ಕೆಲವೆಡೆ ನಿರ್ವಹಣೆಯಾಗುತ್ತಿಲ್ಲ ಎಂದು ವಿಪಕ್ಷ ಸದಸ್ಯ ವಿನಯರಾಜ್‌ ಸಭೆಯ ಗಮನ ಸೆಳೆದರು. ಇದಕ್ಕೆ ಆಡಳಿತ ಸದಸ್ಯೆ ಶ್ವೇತಾ ಪೂಜಾರಿ ಅವರೂ ದನಿಗೂಡಿಸಿದರು.

ಈ ಬಗ್ಗೆ ಕೆಲಹೊತ್ತು ಚರ್ಚೆಯ ಬಳಿಕ ಸ್ಮಾರ್ಟ್‌ ಸಿಟಿ ಅಧಿಕಾರಿ ಅರುಣ್‌ ಪ್ರಭಾ ಮಾತನಾಡಿ, ಕೆಲವು ಸಮಯದ ಹಿಂದಷ್ಟೇ ಎಲ್‌ಇಡಿ ಅಳವಡಿಕೆಯನ್ನು ಫಿಝಾ ಡೆವಲಪರ್ಸ್‌ ಸಂಸ್ಥೆಗೆ ವಹಿಸಲಾಗಿದ್ದು, 50,000 ಎಲ್‌ಇಡಿಗಳನ್ನು ಖರೀದಿಸುತ್ತಿದ್ದಾರೆ. ನವೆಂಬರ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದರು.

ನಗರದ ಕದ್ರಿ ಮಾರುಕಟ್ಟೆ ಡೆಂಘೀ ಉತ್ಪತ್ತಿ ತಾಣವಾಗಿದೆ. ಮೊಣಕಾಲುವರೆಗೆ ಅಲ್ಲಿ ನೀರು ನಿಲ್ಲುತ್ತಿದೆ. ಕಳೆದ ಸಭೆಯಲ್ಲಿಯೂ ಡೆಂಘೀ ಬಗ್ಗೆ ಕ್ರಮಕ್ಕೆ ಆಗ್ರಹಿಸಲಾಗಿತ್ತು ಎಂದು ಸದಸ್ಯ ವಿನಯರಾಜ್‌ ಹೇಳಿದಾಗ, ನಗರ ವ್ಯಾಪ್ತಿಯ 10 ಆರೋಗ್ಯ ಕೇಂದ್ರಗಳ ವೈದ್ಯರ ನೇತೃತ್ವದಲ್ಲಿ ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಮೂಲಕ ನಗರದಲ್ಲಿ ಮನೆಗಳ ಸರ್ವೆ ಕಾರ್ಯ, ಜಾಗೃತಿಯ ನೀಡುತ್ತಿರುವ ಬಗ್ಗೆ ಮೇಯರ್‌ ಸುಧೀರ್‌ ಶೆಟ್ಟಿ ಮಾಹಿತಿ ನೀಡಿದರು.

ಉಪ ಮೇಯರ್‌ ಸುನೀತಾ, ಆಯುಕ್ತ ಆನಂದ್‌, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್‌ ಅಮೀನ್‌, ವರುಣ್‌ ಚೌಟ, ಭರತ್‌ ಕುಮಾರ್‌, ಗಣೇಶ ಇದ್ದರು.