ಸಿಡಿಲಬ್ಬರದ ಮಳೆಗೆ 24 ಗಂಟೆಯಲ್ಲಿ 9 ಬಲಿ

| Published : May 13 2025, 11:47 PM IST

ಸಾರಾಂಶ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ ಮುಂದುವರೆದಿದ್ದು, ರಾಜ್ಯದ ಹಲವೆಡೆ ಗುಡುಗು ಸಹಿತ ಭರ್ಜರಿ ಮಳೆಯಾಗಿದೆ. ಸಿಡಿಲು ಬಡಿದು 24 ಗಂಟೆಗಳ ಅವಧಿಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ ಮುಂದುವರೆದಿದ್ದು, ರಾಜ್ಯದ ಹಲವೆಡೆ ಗುಡುಗು ಸಹಿತ ಭರ್ಜರಿ ಮಳೆಯಾಗಿದೆ. ಸಿಡಿಲು ಬಡಿದು 24 ಗಂಟೆಗಳ ಅವಧಿಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ.ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಹಾವೇರಿ, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ಮಡಿಕೇರಿ, ಹುಬ್ಬಳ್ಳಿ, ದಾವಣೆಗೆರೆ, ರಾಯಚೂರು, ಶಿವಮೊಗ್ಗ, ಧಾರವಾಡ ಸೇರಿದಂತೆ ಹಲವೆಡೆ ಮಂಗಳವಾರ ಮಳೆಯಾಗಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಮಂಗಳವಾರ ರೈತರಾದ ಬೀರಪ್ಪ (45) ಹಾಗೂ ಸುನಿಲ್ (26) ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನೂ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ರೈತ ಯಂಕಪ್ಪ ಜಾಡಿ (45) ಎಂಬವರು ಸಹ ಸಿಡಿಲಿಗೆ ಬಲಿಯಾಗಿದ್ದಾರೆ. ವಿನೋದ (14) ಎಂಬ ಯುವಕ ಸಿಡಿಲಿನಿಂದಾಗಿ ಗಾಯಗೊಂಡಿದ್ದು ಬಳ್ಳಾರಿ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದ ಯುವಕ ಸುನೀಲ ಕಾಳೇರ (29) ಹಾಗೂ ಹಾನಗಲ್ಲ ತಾಲೂಕಿನ ಕೊಂಡೋಜಿ ಗ್ರಾಮದ ವೃದ್ಧೆ ಮರಿಯಮ್ಮ ನಾಯ್ಕರ್ (60) ಎಂಬುವರು ಸೋಮವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗದ್ಲೆಹಳ್ಳಿ ಬಳಿ ಕುರಿ ಕಾಯುತ್ತಿದ್ದ ಲೋಕೇಶಪ್ಪ (48) ಎಂಬುವವರು ಸಿಡಿಲಿಗೆ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಕವಿತಾಳ ಸಮೀಪದ ಹರ್ವಪುರ ಗ್ರಾಮ ನಿಂಗಪ್ಪ ರಾಮಣ್ಣ ನಂಜಲದಿನ್ನಿ (೩೬) ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮಸ್ಕಿ ತಾಲೂಕಿನಲ್ಲಲಿ ಸಿಡಿಲಿನಿಂದಾಗಿ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ, ಜಗಳೂರು ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಜಗಳೂರು ತಾಲೂಕಿನಲ್ಲಿ ಮಳೆಗೆ ಶಾಲಾ ಕಾಂಪೌಂಡ್ ಕುಸಿದು ಬಿದ್ದಿದೆ. ಸೇಂಟ್ ಮೇರಿಸ್ ಶಾಲೆ ಹಾಗೂ ಕಾಲೇಜು ಆವರಣದಲ್ಲಿ ಸಿಡಿಲು ಬಡಿದು ತೆಂಗಿನ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಸುರಿದ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ಮೆಜೆಸ್ಟಿಕ್, ಕೆ.ಆರ್‌ ವೃತ್ತ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು.