ಸಾರಾಂಶ
ಭಟ್ಕಳ: ಖಚಿತ ಮಾಹಿತಿಯ ಮೇರೆಗೆ ಕಾರೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು ೯ ಕೆಜಿ ಗಾಂಜಾವನ್ನು ಕಾರು ಸಹಿತ ಆರೋಪಿಗಳನ್ನು ಹಿಡಿಯುವಲ್ಲಿ ನಗರ ಪೊಲೀಸರು ಸಫಲರಾಗಿದ್ದು, ದಾಳಿಯ ವೇಳೆಯಲ್ಲಿ ಓರ್ವ ಆರೋಪಿ ತಪ್ಪಿಸಿಕೊಂಡಿದ್ದಾನೆ.
ಬಂಧಿತ ಆರೋಪಿಗಳನ್ನು ನಗರದ ಸೆಂಟ್ರಲ್ ಲಾಡ್ಜ್ ಹಿಂಭಾಗದ ನಿವಾಸಿ ಸಯ್ಯದ ಅಕ್ರಮ್ ಮಹ್ಮಮದ ಹುಸೇನ್(೨೪), ಗುಳ್ಮಿಯ ನಿವಾಸಿ ಅಬ್ದುಲ್ ರೆಹಮಾನ್ ಸಲಿಂ ಸಾಬ್ ಶೇಖ್(೨೭), ಕಾರು ಚಾಲಕ ಶಿರಸಿಯ ನಿವಾಸಿ ಅಜರುದ್ದೀನ್ ಮೆಹಬೂಬ್ ಸಾಬ್ ಎಂದು ಗುರುತಿಸಲಾಗಿದೆ.ನಾಪತ್ತೆಯಾದ ಆರೋಪಿಯನ್ನು ಉಸ್ಮಾನ್ ನಗರದ ನಿವಾಸಿ ಖಾಸಿಂ ಅಬುಮಹ್ಮಮದ್ ಎಂದು ತಿಳಿದುಬಂದಿದೆ. ಆರೋಪಿಗಳು ಒಡಿಶಾದಿಂದ ಗಾಂಜಾವನ್ನು ತರಿಸಿಕೊಂಡು ಹೊನ್ನಾವರ ಕಡೆಯಿಂದ ಭಟ್ಕಳದ ಕಡೆಗೆ ಹುಂಡೈ ಕಾರಿನಲ್ಲಿ ಬರುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನವೀನ್ ಎಸ್. ನಾಯ್ಕ ಪೊಲೀಸರ ತಂಡದೊಂದಿಗೆ ತೆಂಗಿನಗುಂಡಿ ಕ್ರಾಸ್ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ೯ ಕೆಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ ಮತ್ತು ಜಗದೀಶ ಎಂ. ಅವರು ಮಾರ್ಗದರ್ಶನ ನೀಡಿದ್ದು, ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ. ಮತ್ತು ಶಹರ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
ಭಟ್ಕಳ ಶಹರ ಪೊಲೀಸ್ ಠಾಣೆಯ ಎಎಸ್‌ಐ ಗೋಪಾಲ ನಾಯ್ಕ, ಸಿಬ್ಬಂದಿಗಳಾದ ಉದಯ ನಾಯ್ಕ, ಗಿರೀಶ ಅಂಕೋಲೆಕರ್, ಮಹಾಂತೇಶ ಹಿರೇಮಠ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಪಿ., ದೀಪಕ ನಾಯ್ಕ, ಮದಾರಸಾಬ ಚಿಕ್ಕೇರಿ, ಕಿರಣ ಪಾಟೀಲ ಹಾಗೂ ಚಾಲಕ ಜಗದೀಶ ನಾಯ್ಕ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪಿಎಸ್‌ಐ ನವೀನ ನಾಯ್ಕ ಪ್ರಕರಣ ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಶಿವಾನಂದ ನಾವದಗಿ ತನಿಖೆ ಕೈಗೊಂಡಿದ್ದಾರೆ.ಆರೋಪಿ ಸಮೇತ ಕಳ್ಳತನವಾಗಿದ್ದ ಬೈಕ್ ಪತ್ತೆ
ಹೊನ್ನಾವರ: ಪಟ್ಟಣದ ದುರ್ಗಾಕೇರಿಯಲ್ಲಿ ಮನೆಯ ಗೇಟ್ ಎದುರು ನಿಲ್ಲಿಸಿಟ್ಟ ಬೈಕ್ ಕಳ್ಳತನವಾಗಿದ್ದನ್ನು ಹೊನ್ನಾವರು ಪೊಲೀಸರು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.ಅ. 5ರಂದು ಗಣಪತಿ ಸತ್ಯನಾರಾಯಣ ಶೇಟ್ ಎಂಬವರು ದುರ್ಗಾಕೇರಿಯ ಮನೆಯ ಗೇಟ್ ಎದುರು ನಿಲ್ಲಿಸಿದ್ದ ಜುಪಿಟರ್ ಮೋಟಾರ ಸೈಕಲ್ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದರು. ಕರ್ಕಿ ನಾಕಾ ಹತ್ತಿರ ಆರೋಪಿತನಾದ ಕರ್ಕಿ ತೊಪ್ಪಲಕೇರಿಯ ನಾಗರಾಜ ವಿಷ್ಣು ಉಪ್ಪಾರ ಎಂಬಾತನನ್ನು ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ. ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಯೋಗೇಶ ಕೆ.ಎಂ., ಪಿಎಸ್‌ಐ ರಾಜಶೇಖರ ವಂದಲಿ ಹಾಗೂ ಸಿಬ್ಬಂದಿಯವರಾದ, ಉದಯ ಹರಿಕಂತ್ರ, ಗಜಾನನ ನಾಯ್ಕ, ರವಿ ನಾಯ್ಕ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.