ಪಾಳು ಭೂಮಿಯಲ್ಲಿ ಬೆಳೆ ವಿಮೆಗಾಗಿ 9 ಈರುಳ್ಳಿ ಸಸಿ ನಾಟಿ ಮಾಡಿ ಫೋಟೋ ಅಪ್ಲೋಡ್ !

| N/A | Published : Apr 24 2025, 12:00 AM IST / Updated: Apr 24 2025, 11:06 AM IST

ಪಾಳು ಭೂಮಿಯಲ್ಲಿ ಬೆಳೆ ವಿಮೆಗಾಗಿ 9 ಈರುಳ್ಳಿ ಸಸಿ ನಾಟಿ ಮಾಡಿ ಫೋಟೋ ಅಪ್ಲೋಡ್ !
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಲೂಟಿ ಮಾಡಲು 9 ಈರುಳ್ಳಿ ಸಸಿ ನಾಟಿ ಮಾಡಿ, ಫೋಟೋ ಅಪ್ಲೋಡ್ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:  ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಲೂಟಿ ಮಾಡಲು 9 ಈರುಳ್ಳಿ ಸಸಿ ನಾಟಿ ಮಾಡಿ, ಫೋಟೋ ಅಪ್ಲೋಡ್ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಪಾಳು ಭೂಮಿಯಲ್ಲಿ ಬೆಳೆ ವಿಮಾ ಕಂತು ಪಾವತಿಸಿ, ಪರಿಹಾರ ಪಡೆಯುತ್ತಿದ್ದ ಖದೀಮರ ಕೈ ಚಳಕ ಈ ಫೋಟೋದಿಂದ ಬಟಾಬಯಲಾಗಿದೆ.

ರೈತರ ಹೆಸರಿನಲ್ಲಿ ಅಕ್ರಮ ನಡೆಸುತ್ತಿರುವ ಗ್ಯಾಂಗ್‌ನವರೇ ಬೆಳೆ ವಿಮೆ ಪಾವತಿಸಿ ಪರಿಹಾರ ಪಡೆಯುತ್ತಾರೆ. ಕೆಲವೊಂದು ಪ್ರಕರಣದಲ್ಲಿ ರೈತರು ಸಹ ಪಾಲುದಾರರಾಗಿದ್ದಾರೆ. ಮತ್ತೆ ಕೆಲ ಪ್ರಕರಣಗಳಲ್ಲಿ ರೈತರಿಗ ಗೊತ್ತಿಲ್ಲದಂತೆ ಅವರ ಹೆಸರಿನ ಪಹಣಿಗೆ ಬೆಳೆ ವಿಮೆ ಕಂತು ಪಾವತಿಸಿ, ಪರಿಹಾರ ಜಮೆಯಾಗುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ಖದೀಮರು ನೀಡಿದ್ದಾರೆ.

ಹನುಮನಾಳ ಹೋಬಳಿಯ ಅನೇಕ ಗ್ರಾಮಗಳಲ್ಲಿ ಪಾಳು ಬಿದ್ದ ಭೂಮಿಗೆ ಲಕ್ಷ ಲಕ್ಷ ಬೆಳೆ ವಿಮೆ ಪರಿಹಾರ ಪಡೆದಿದ್ದಾರೆ. ಈ ಅಕ್ರಮದ ಜಾಡು ಹಿಡಿದು ಹೋದಾಗ ಪಾಳು ಬಿದ್ದ ಭೂಮಿಯ ಮೂಲೆಯೊಂದರಲ್ಲಿ 9 ಈರುಳ್ಳಿ ಸಸಿ ನಾಟಿ ಮಾಡಿ, ಈರುಳ್ಳಿ ಬೆಳೆಯ ಫೋಟೋ ಅಪ್ಲೋಡ್ ಮಾಡಿದ್ದಾರೆ. ಈ ಸಸಿ ಹಾಕಿದ್ದನ್ನು ಬಿಟ್ಟರೇ ಇಡೀ ಹೊಲದಲ್ಲಿ ಒಂದೇ ಒಂದು ಈರುಳ್ಳಿ ಸಸಿ ಮತ್ತು ಬೆಳೆ ಇಲ್ಲವೇ ಇಲ್ಲ. ಹೀಗೆ ಬೆಳೆ ಫೋಟೋ ಅಪ್ಲೋಡ್ ಮಾಡಿ, ನಂತರ ಇದೇ ಈರುಳ್ಳಿ ಬೆಳೆಗೆ ವಿಮಾ ಪರಿಹಾರ ಪಾವತಿಯಾಗುವಂತೆ ಮೊದಲೇ ಡೀಲ್ ಮಾಡಿಕೊಂಡಿದ್ದಾರೆ. ಅದರಂತೆ ಪರಿಹಾರ ಜಮೆಯಾಗುತ್ತದೆ.

ಅಧಿಕಾರಿಗಳಿಗೆ ಮಾಹಿತಿ:

ಬೆಳೆ ಬೆಳೆದ ಫೋಟೋ ಅಪ್ಲೋಡ್ ಮಾಡಿರುವುದನ್ನು ಪರಿಶೀಲಿಸುವ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಅಧಿಕಾರಿಗಳು ಹೊಲಕ್ಕೆ ಹೋಗಿ ಪಾಳು ಭೂಮಿಯಲ್ಲಿ ಬೆಳೆ ಬೆಳೆದಿರುವ ಬಗ್ಗೆ ವರದಿ ಸಲ್ಲಿಸಿದ್ದರೆ ಈ ಅಕ್ರಮ ನಡೆಯುತ್ತಿರಲಿಲ್ಲ. ಇದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಶಾಮೀಲಾಗಿದ್ದರಿಂದ ಅಕ್ರಮ ನಡೆದಿದೆ ಎಂದು ಹೇಳಲಾಗಿದೆ.

ಕ್ರಿಮಿನಲ್ ಪ್ರಕರಣ ದಾಖಲಿಸಲು ಹಿಂದೇಟು:

ಬೆಳೆ ವಿಮಾ ಪರಿಹಾರದಲ್ಲಿ ಆಗಿರುವ ಅಕ್ರಮದ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿದ ಬಳಿಕ ಕೃಷಿ ಇಲಾಖೆ ಅಧಿಕಾರಿಗಳು ಬ್ಯಾಂಕ್‌ನಲ್ಲಿ ಜಮೆಯಾಗಿದ್ದ ಪರಿಹಾರದ ಹಣವನ್ನು ಫ್ರೀಜ್‌ ಮಾಡಿದ್ದಾರೆ. ಅದು ಕೆಲವೊಂದು ಖಾತೆಗಳನ್ನು ಮಾತ್ರ. ಇನ್ನುಳಿದಂತೆ ಅನೇಕರು ಬೆಳೆ ವಿಮಾ ಪರಿಹಾರ ಪಡೆದುಕೊಂಡಿದ್ದಾರೆ. ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗುತ್ತಿಲ್ಲ. ತಪ್ಪಿತಸ್ಥರು ಯಾರೆಂದು ಮಾಹಿತಿ ಇದ್ದರೂ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿಲ್ಲ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದರಿಂದಲೇ ಪ್ರಕರಣ ದಾಖಲಿಸಲು ಹಿಂದೇಟು ಹಾಕಲಾಗುತ್ತಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿಗಳೇ ಗಮನಿಸಿ

ಬೆಳೆ ವಿಮೆ ಪರಿಹಾರದಲ್ಲಿ ಅಕ್ರಮ ಸಾಬೀತಾಗಿದ್ದು ಕೃಷಿ ಅಧಿಕಾರಿಗಳು ಲೂಟಿ ಹೊಡೆದವರ ಬ್ಯಾಂಕ್‌ ಖಾತೆ ಫ್ರೀಜ್‌ ಮಾಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳ ಕೈಚಳಕವು ಈ ಅಕ್ರಮದಲ್ಲಿ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬೆಳೆ ದೃಢೀಕರಣ ಮತ್ತು ಬೆಳೆ ಬದಲಾಯಿಸುವ ವೇಳೆಯಲ್ಲಾದ ಅಕ್ರಮವೇ ಇದೆಲ್ಲಕ್ಕೂ ಕಾರಣ. ಈ ಹೊಣೆಯನ್ನು ಹನುಮನಾಳ ಹೋಬಳಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಜಿಲ್ಲಾಧಿಕಾರಿ ನಳಿನ್ ಅತುಲ್ ಅವರು ಕೇವಲ ಕೃಷಿ ಇಲಾಖೆ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಿದರೇ ಸಾಲದು, ಅಕ್ರಮದ ಜಾಡು ದೊಡ್ಡದಿದ್ದು ಇಲಾಖಾ ವಿಚಾರಣೆ ಏಕೆ ಮಾಡುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ.