ಸಾರಾಂಶ
ಗೋಕರ್ಣ:
ಇಲ್ಲಿನ ಮುಖ್ಯ ಕಡಲತೀರದ ಬಳಿ ಬೋಟ್‍ನಲ್ಲಿ ಬರುತ್ತಿದ್ದ ಒಟ್ಟು 9 ಜನ ಆಗುಂತಕರನ್ನು ಕರಾವಳಿ ಕಾವಲು ಪೊಲೀಸ್ ಪಡೆ ವಶಕ್ಕೆ ಪಡೆದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಆದರೆ ಇದು ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಗರ ಕವಚ ಅಣಕುಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಸೂಗಿನಲ್ಲಿ ಬಂದ ರೆಡ್‍ಪೋಸ್ ಸಿಬ್ಬಂದಿಗಳಾಗಿದ್ದಾರೆ.ಸೋಮವಾರ ಮುಂಜಾನೆಯಿಂದ ವಿವಿಧ ಆಯಕಟ್ಟಿನ ಸ್ಥಳ ಸೇರಿದಂತೆ ಎಲ್ಲೆಡೆ ಪೊಲೀಸ್ ಸಿಬ್ಬಂದಿ ನಿಗಾವಹಿಸಿದ್ದರು. ಇದರಂತೆ ಸಮುದ್ರದಲ್ಲಿ ಇಲಾಖೆಯ ಕದಂಬ ಬೋಟ್‍ನಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಅನುಮಾನಸ್ಪದವಾಗಿ ತಿರುಗಾಡುತ್ತಿರುವ ಮೀನಾಗರಿಕಾ ಬೋಟ್ ಕಂಡಿದ್ದು, ತಕ್ಷಣ ತಡೆದು ಪರಿಶೀಲನೆ ನಡೆಸಿದ್ದಾರೆ. ನಂತರ ವಿಚಾರಿಸಿದಾಗ ಆಗುತಂಕರಾಗಿ ಬಂದ ಕೋಸ್ಟ್‌ಗಾರ್ಡ್ ಸಿಬ್ಬಂದಿ ಎಂದು ತಿಳಿದಿದ್ದು, ಇವರು ಬೆಲೇಖಾನ ಲೈಟ್ ಹೌಸ್ ಮತ್ತು ತದಡಿ ಮೀನುಗಾರಿಕಾ ಜಟ್ಟಿಗೆ ದಾಳಿ ಮಾಡಲು ತೆರಳುತ್ತಿರುವುದು ಬೆಳಕಿಗೆ ಬಂದಿದೆ. ನಂತರ ಜಟ್ಟಿಗೆ ಕರೆತಂದಿದ್ದು ಕರಾವಳಿ ಕಾವಲು ಪೊಲೀಸ್ ಪಡೆಯ ಡಿವೈಎಸ್‌ಪಿ ಟಿ. ಸುಲ್ಪಿ, ಪಿಐ ವಿಕ್ಟರ್ ಸೈಮನ್, ಪಿಎಸ್‌ಐ ಅನೂಪ ಹೆಚ್ ನಾಯಕ, ಎಎಸ್‌ಐ ಮಂಜುನಾಥ ಪಟಗಾರ ಲಕ್ಷೀಶ ನಾಯಕ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆ ಸಿಬ್ಬಂದಿಗಳಾದ ಗಣಪತಿ ನಾಯ್ಕ, ಗಣರಾಜ ಪಟಗಾರ, ಸುಜ್ಣಾನ ನಾಯ್ಕ ಕೆಎನ್‌ಡಿ ಸಿಬ್ಬಂದಿ ಬಾಲಚಂದ್ರ ಅಡಪೇಕರ, ಕುಮಾರ ಹರಿಕಂತ್ರ, ನಾಗರಾಜ ತಂಡೇಲ್, ತಾಂತ್ರಿಕ ಸಿಬ್ಬಂದಿಗಳಾದ ಬೋಟ್ ಕ್ಯಾಪ್ಟನ್ ಆನಂದು ಗಾಂವ್ಕರ. ಸಹಾಯಕ ಬೋಟ್ ಕ್ಯಾಪ್ಟನ್ ಶ್ರೀನಿವಾಸ ದುರ್ಗೆಕರ, ಸಂಜೀವ ನಾಯಕ ಎಂ.ಎಲ್.ಎಂ. ಸಂತೋಷ ಹರಿಕಂತ್ರ, ಯೋಗೇಶ ನಾಯಕ, ಗಣೇಶ ಪಟಗಾರ ,ಪುನಿತ ನಾಯ್ಕ ಪಾಲ್ಗೊಂಡಿದ್ದರು.
ದೇವಸ್ಥಾನಗಳಲ್ಲಿ ಬೀಗಿಭದ್ರತೆ:ಕರಾವಳಿ ಕಾವಲು ಪೊಲೀಸ್ ಪಡೆ, ನೆವ್ವಿ, ಕೋಸ್ಟಲ್ ಗಾರ್ಡ್ ಜಂಟಿಯಾಗಿ ಹಮ್ಮಿಕೊಂಡಿರುವ ಸಾಗರ ಕವಚ ಅಣಕು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸೋಮವಾರದಿಂದ ಇಲ್ಲಿನ ಪ್ರಮುಖ ಸ್ಥಳದಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ತಪಾಸಣೆ ತೀವ್ರಗೊಳಿಸಿದ್ದಾರೆ. ಮಹಾಬಲೇಶ್ವರ ಮಂದಿರದಲ್ಲಿ ದೇವರ ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಒಮ್ಮೆಲೆ ಪೊಲೀಸ್ ವಿಚಾರಣೆ ಕಂಡು ಏನಾಗಿದೆ ಎಂದು ಗಲಿಬಿಲಿಗೊಂಡರು. ನಂತರ ವಿಷಯ ಅರಿತು ಸಹಕರಿಸಿದರು. ಮಹಾಗಣಪತಿ ಮಂದಿರ, ಮುಖ್ಯ ಕಡಲತೀರ ಸೇರಿದಂತೆ ಆಯಕಟ್ಟಿನ ಸ್ಥಳವಾದ ತದಡಿ ಬಂದರು ಮತ್ತಿತರ ಕಡೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿನ ಪೊಲೀಸ್ ಸಿಬ್ಬಂದಿಗಳನ್ನು ಬೇರೆಡೆಗೆ ಬಂದೋಬಸ್ತ್ ಕಳುಹಿಸಿದ ಪರಿಣಾಮ ಸಿಬ್ಬಂದಿಗಳ ಕೊರತೆಯಿಂದ ಇದ್ದ ಸಿಬ್ಬಂದಿಗಳೇ ಹರಸಾಹಸ ಪಡುತ್ತಿದ್ದು, ಕರಾವಳಿ ಕಾವಲು ಪೊಲೀಸ್ ಪಡೆ ಸಿಬ್ಬಂದಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಾಚರಣೆ ಮಂಗಳವಾರ ಸಂಜೆ ಕೊನೆಗೊಳ್ಳಲಿದೆ.