90 ಸಾವಿರ ಬುಡಕಟ್ಟು ಸಮುದಾಯದವರಿಗೆ ಹಕ್ಕುಪತ್ರ, ಪಹಣಿ ಕೊಡಿಸಲು ಮನವಿ

| Published : Jun 21 2024, 01:02 AM IST

90 ಸಾವಿರ ಬುಡಕಟ್ಟು ಸಮುದಾಯದವರಿಗೆ ಹಕ್ಕುಪತ್ರ, ಪಹಣಿ ಕೊಡಿಸಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪಹಣಿ ಇಲ್ಲದೇ, ಜಮೀನು ಅಭಿವೃದ್ಧಿಗಾಗಿ ಹಾಗೂ ಇಳುವರಿ ಹೆಚ್ಚಿಸಿಕೊಳ್ಳಲು ಇರುವ ಸರ್ಕಾರದ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಮುಂಡಗೋಡ: ಜಿಲ್ಲೆಯ ೯೫,೦೦೦ಕ್ಕಿಂತ ಹೆಚ್ಚಿನ ಬುಡಕಟ್ಟು ಸಮುದಾಯ, ಭೂರಹಿತರು, ಅರಣ್ಯ ಹಾಗೂ ಕಂದಾಯ ಜಮೀನು ಅವಲಂಬಿತರು ಜೀವನೋಪಾಯಕ್ಕೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಜಮೀನನ್ನೇ ೫೦- ೬೦ ವರ್ಷದಿಂದ ಆಶ್ರಯಿಸಿರುವ ಜಮೀನಿನ ಹಕ್ಕುಪತ್ರ ಹಾಗೂ ಪಹಣಿ ಕೊಡಿಸಿ ಎಂದು ನೂತನ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗೆಡೆ ಕಾಗೇರಿಯವರಿಗೆ ಭೂಹಕ್ಕುದಾರರ ಹಿತರಕ್ಷಣಾ ಸಮಿತಿಯವರು ಮನವಿ ಸಲ್ಲಿಸಿ ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮೋದನೆ ಪಡೆದ ೧೯೭೮ರ ಪೂರ್ವದ ಅಕ್ರಮ ಅರಣ್ಯ ಜಮೀನು ಸಾಗುವಳಿ ಸಕ್ರಮೀಕರಣ ಪ್ರಕರಣದ ಅಡಿ, ಜಿಲ್ಲೆಯ ೨,೫೧೩ ಫಲಾನುಭವಿ ರೈತರಿಗೆ ೨೫ ವರ್ಷಗಳಾದರೂ ಕಂದಾಯ ಇಲಾಖೆ ಕಾಲಂ ನಂಬರ್‌ ೯ರ ಅಡಿ ಹೆಸರು ದಾಖಲಿಸಿ, ಪಹಣಿ ನೀಡಿಲ್ಲ. ಪಹಣಿ ಇಲ್ಲದೇ, ಜಮೀನು ಅಭಿವೃದ್ಧಿಗಾಗಿ ಹಾಗೂ ಇಳುವರಿ ಹೆಚ್ಚಿಸಿಕೊಳ್ಳಲು ಇರುವ ಸರ್ಕಾರದ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪರಿಸರ ವಿಕೋಪ, ನೆರೆ ಹಾವಳಿ, ಬರಗಾಲದಿಂದ ಬೆಳೆ ಹಾನಿಯಾದರೂ ಕಾಡುಪ್ರಾಣಿ, ಆನೆಗಳಿಂದ ಕಟಾವಿಗೆ ಬಂದ ಇಳುವರಿ ಕಳೆದುಕೊಂಡರೂ ಸರ್ಕಾರದಿಂದ ಯಾವ ಪರಿಹಾರವೂ ಸಿಗುವುದಿಲ್ಲ.

ಅರಣ್ಯ ಹಕ್ಕು ಕಾಯ್ದೆ ೨೦೦೬ರ ಅಡಿ ಮುಂಡಗೋಡ ತಾಲೂಕಿನಲ್ಲಿ, ೬,೫೦೯ ವೈಯಕ್ತಿಕ ಅರ್ಜಿಗಳಲ್ಲಿ ಕೇವಲ ೨೪೫ ಕ್ಲೇಮುದಾರರಿಗೆ ಮಾತ್ರ ಇಲ್ಲಿಯವರೆಗೆ ಅರಣ್ಯ ಹಕ್ಕು ಮಂಜೂರಾಗಿದ್ದು, ೩,೨೦೯ ಅರ್ಜಿಗಳನ್ನು, ಇತರೇ ಪಾರಂಪರಿಕ ಅರಣ್ಯ ವಾಸಿ ಎಂದು ದೃಢೀಕರಿಸುವ ಅಧಿಕೃತ ದಾಖಲೆ ಒದಗಿಸದ್ದರಿಂದ ಉಪವಿಭಾಗ ಮಟ್ಟದಲ್ಲಿ ತಿರಸ್ಕರಿಸಲಾಗಿದ್ದು, ಬಾಕಿ ಉಳಿದ ೩,೦೦೦ಕ್ಕಿಂತ ಹೆಚ್ಚಿನ ಅರ್ಜಿಗಳು ಹತ್ತು ವರ್ಷಗಳಿಂದ ಪರಿಶೀಲನೆ ಆಗಿಲ್ಲ.

ಹಕ್ಕುಪತ್ರ ಪಡೆದ ಯಾರಿಗೂ ಪಹಣಿ ನೀಡಿಲ್ಲ. ಇದರಿಂದ ಭೂಮಿಯ ಅಭಿವೃದ್ಧಿಗೆ ಹಾಗೂ ಇಳುವರಿ ಹೆಚ್ಚಳಕ್ಕೆ ಸರ್ಕಾರದ ಯಾವ ಸವಲತ್ತೂ ದೊರಕುತ್ತಿಲ್ಲ. ಜಿಪಿಎಸ್, ಮಾಡುವಾಗ ಅರಣ್ಯ ಇಲಾಖೆ, ಕಡಿಮೆ ಜಮೀನು ನಮೂದಿಸಿದೆ, ಇದರಿಂದ ಅವರ ಅರಣ್ಯ ಜಮೀನಿನ ಹಕ್ಕಿಗೆ ಅನ್ಯಾಯವಾಗಿದ್ದು, ಹೊಸದಾಗಿ ಕ್ಲೇಮುದಾರರ ಉಪಸ್ಥಿತಿಯಲ್ಲಿ ಜಿಪಿಎಸ್, ನಡೆಸಬೇಕು.

ಸರ್ಕಾರದ ಸುತ್ತೋಲೆಯನ್ವಯ ತಿರಸ್ಕೃತಗೊಂಡ ಅರ್ಜಿಗಳು ಪುನರ್ ಪರಿಶೀಲನೆಗೆ ಅರ್ಹತೆ ಪಡೆದರೂ, ತಮ್ಮ ಕ್ಲೇಮಿಗೆ ಸಂಬಂಧಿಸಿದಂತೆ ಅರ್ಜಿದಾರರು ಯಾವ ಸಾಕ್ಷ್ಯ, ದಾಖಲೆಗಳನ್ನು ಒದಗಿಸಬೇಕೆಂಬ ಬಗ್ಗೆ ಅರಿವಿಲ್ಲದ್ದರಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕೋರಲಾಯಿತು.