ಸಾರಾಂಶ
ಬೆಂಗಳೂರು : ಮಹರ್ಷಿ ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ಹೈದರಾಬಾದ್‌ನ ಸಹಕಾರಿ ಬ್ಯಾಂಕ್‌ನ 17 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ಹಣವನ್ನು ಡ್ರಾ ಮಾಡಿಕೊಂಡು ಬಳ್ಳಾರಿ ಹಾಗೂ ಬೆಂಗಳೂರಿನ ವ್ಯಕ್ತಿಗಳಿಗೆ ನಗದು ರೂಪದಲ್ಲಿ ರವಾನೆ ಮಾಡಿರುವ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಪತ್ತೆಹಚ್ಚಿದೆ ಎಂದು ತಿಳಿದುಬಂದಿದೆ.
ಹೈದರಾಬಾದ್‌ನ ‘ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ಯ (ಎಫ್‌ಎಫ್‌ಸಿಸಿಎಸ್‌ಎಲ್) 18 ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ಅಕ್ರಮವಾಗಿ 94.73 ಕೋಟಿ ರು. ಹಣ ವರ್ಗಾವಣೆಯಾಗಿತ್ತು. ಈ ಪೈಕಿ ಒಂದು ಖಾತೆದಾರ ಡ್ರಾ ಮಾಡಿದ್ದ 5 ಕೋಟಿ ರು. ಹಣವನ್ನು ಮತ್ತೆ ಬ್ಯಾಂಕ್‌ಗೆ ಮರಳಿಸಿದ್ದ. ಇನ್ನುಳಿದ 17 ಖಾತೆಗಳಿದ್ದ 89.73 ಕೋಟಿ ರು ಹಣದಲ್ಲಿ ಕೆಲವು ಖಾತೆದಾರರು ಡ್ರಾ ಮಾಡಿದ್ದರು. ಆನಂತರ ಆ ಹಣವನ್ನು ನಗದು ರೂಪದಲ್ಲಿ ಬಳ್ಳಾರಿ ಹಾಗೂ ಬೆಂಗಳೂರಿನ ವ್ಯಕ್ತಿಗಳಿಗೆ ರವಾನಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
ಈ ಹಣ ವರ್ಗಾವಣೆಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್ ಹಾಗೂ ಆತನ ಬಾಮೈದ ನಾಗೇಶ್ವರ್ ರಾವ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಹಣದ ವಿಚಾರವಾಗಿ ಬಂಧಿತನಾಗಿರುವ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸತ್ಯನಾರಾಯಣ್ ಬಾಯ್ಬಿಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಇನ್ನು ಈ 17 ನಕಲಿ ಖಾತೆಗಳನ್ನು ತೆರೆದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ಕೃತ್ಯ ಬೆಳಕಿಗೆ ಬಂದ ನಂತರ ಕೆಲವರು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ನಕಲಿ ಖಾತೆದಾರರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.