ಸಾರಾಂಶ
ಕಳೆದ ಒಂದು ವರ್ಷದಲ್ಲಿ ಉಡುಪಿ ಜಿಲ್ಲೆಯಲ್ಲಿ ೯೭ಕ್ಕೂ ಹೆಚ್ಚು ಮಾದಕ ದೃವ್ಯ ಪ್ರಕರಣಗಳು ದಾಖಲಾಗಿದ್ದು, ಶೇ.೯೦ರಷ್ಟು ಪ್ರಕರಣಗಳು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆತಂಕ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಮಾದಕ ದೃವ್ಯ ಸಮನ್ವಯ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಮಣಿಪಾಲಕಳೆದ ಒಂದು ವರ್ಷದಲ್ಲಿ ಉಡುಪಿ ಜಿಲ್ಲೆಯಲ್ಲಿ ೯೭ಕ್ಕೂ ಹೆಚ್ಚು ಮಾದಕ ದೃವ್ಯ ಪ್ರಕರಣಗಳು ದಾಖಲಾಗಿದ್ದು, ಶೇ.೯೦ರಷ್ಟು ಪ್ರಕರಣಗಳು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆತಂಕ ವ್ಯಕ್ತಪಡಿಸಿದ್ದಾರೆ.ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಾದಕ ದೃವ್ಯ ಸಮನ್ವಯ ಸಮಿತಿ (ಎನ್.ಸಿ.ಒ.ಆರ್.ಡಿ.) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾಹೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯವರು ತಮ್ಮ ಪರಿಸರವನ್ನು ನಶಾ ಮುಕ್ತ ಮಾಡಲು ಕಾಳಜಿ ತೆಗೆದುಕೊಳ್ಳಬೇಕು. ಈ ಬಗ್ಗೆ ಕೇರ್ ಟೇಕರ್‌ಗಳನ್ನು ಹೆಚ್ಚು ನಿಯೋಜಿಸಬೇಕು ಹಾಗೂ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಪೊಲೀಸರು ಮಣಿಪಾಲದ ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಅಳವಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಮಾದಕ ವಸ್ತುಗಳ ಬಳಕೆ ಉತ್ತೇಜಿಸುವವರ ಮೇಲೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದವರು ಆದೇಶಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಮಾತನಾಡಿ, ಜಿಲ್ಲೆಯ ಹೆದ್ದಾರಿ ಫಲಕಗಳಲ್ಲಿ ಮೌತ್ ಫ್ರೆಶ್ನರ್ ಎಂದು ಹೇಳಿ ತಂಬಾಕು ಉತ್ಪನ್ನಗಳನ್ನು ಜಾಹೀರಾತು ಪಡಿಸಿ, ಮಾರಾಟ ಮಾಡುತ್ತಿದ್ದಾರೆ. ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು ಎಂದರು.ಒಂದೆರಡು ಬಾರಿ ಸೂಚನೆಯ ನಂತರವೂ ಮಾದಕ ವಸ್ತುಗಳ ವ್ಯಸನ ಮುಂದುವರಿಸಿದರೆ ಅಂತಹ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ತೆಗೆದು ಹಾಕಬೇಕು. ವಾರದ ಕೊನೆಯ ದಿನಗಳಲ್ಲಿ ಪಾರ್ಟಿಗಳ ನೆಪದಲ್ಲಿ ಮಾದಕ ವಸ್ತುಗಳ ಸೇವನೆಯ ಸಾಧ್ಯತೆ ಇರುತ್ತದೆ. ಅನುಮಾನಾಸ್ಪದ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆಗೊಳಪಡಿಸಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ಎಎಸ್ಪಿ ಪಿ.ಎ. ಹೆಗಡೆ , ಡಿಎಫ್ಓ ಗಣಪತಿ, ಡಿಎಚ್‌ಓ ಡಾ. ಐ.ಪಿ. ಗಡಾದ್, ಡಿಡಿಪಿಐ ಗಣಪತಿ, ಡಿಡಿಪಿಯು ಮಾರುತಿ, ವಿವಿಧ ಜಿಲ್ಲಾಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.------------ತೋಟದಲ್ಲಿ ಗಾಂಜಾ ಬೆಳೆ!
ಕಾಡಂಚಿನ ಪ್ರದೇಶದಲ್ಲಿ, ತೋಟಗಳಲ್ಲಿ ಗಾಂಜಾ ಬೆಳೆಯುವ ಸಾಧ್ಯತೆ ಇದ್ದು, ಈ ಬಗ್ಗೆ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯಿಂದ ನಿರಂತರ ನಿಗಾ ಇಡಬೇಕು. ಅಂಚೆಯ ಮೂಲಕ ಮಾದಕ ವಸ್ತುಗಳ ಸರಬರಾಜು ಆಗುತ್ತದೆ. ಅನುಮಾನಾಸ್ಪದ ಕವರ್‌ಗಳನ್ನು ಮಾಲಕರ ಸಮ್ಮುಖದಲ್ಲಿ ತೆರೆದು ಪರಿಶೀಲಿಸಬೇಕು. ರೈಲ್ವೆ ಇಲಾಖೆಯ ಸಿಬ್ಬಂದಿ ಸಹ ನಿಲ್ದಾಣದಲ್ಲಿ ಮಾದಕ ವಸ್ತುಗಳ ಸರಬರಾಜು ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.