ಮೈಸೂರು ಆಕಾಶವಾಣಿಗೆ ಇಂದು 90ರ ಸಂಭ್ರಮ

| Published : Sep 10 2024, 01:39 AM IST

ಸಾರಾಂಶ

ನಂತರ ಈಗಿನ ಮೈಸೂರು ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರವಾಯಿತು.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ದೇಶದ ಪ್ರಸಾರ ವ್ಯವಸ್ಥೆಗೆ ''''ಆಕಾಶವಾಣಿ'''' ಎಂಬ ಹೆಸರು ನೀಡಿದ ಮೈಸೂರು ಆಕಾಶವಾಣಿ ಕೇಂದ್ರಕ್ಕೆ ಮಂಗಳವಾರ [ಸೆ.10] 90 ರ ಸಂಭ್ರಮ.

ದೇಶದ ಮೊದಲ ರೇಡಿಯೋ ಬಾನುಲಿ ಕೇಂದ್ರ ಆರಂಭವಾಗಿದ್ದು ಮೈಸೂರಿನಲ್ಲಿ. ಮಹಾರಾಜ ಕಾಲೇಜಿನಲ್ಲಿ ಮನೋವಿಜ್ಞಾನ ಪ್ರಾಧ್ಯಾಪಕರಾಗಿದ್ದ ಎಂ.ವಿ. ಗೋಪಾಲಸ್ವಾಮಿ ಅವರು ಇದಕ್ಕೆ ಕಾರಣ. ಕುವೆಂಪು ಅವರ ಕವಿವಾಣಿಯ ಮೂಲಕ ಅವರು ಕಾರ್ಯಕ್ರಮ ಆರಂಭಿಸಿದರು. ಮೈಸೂರು ವಾಸುದೇವಾಚಾರ್ಯರ ಗಾಯನ ಮೊದಲ ಸಂಗೀತ ಕಾರ್ಯಕ್ರಮ.

ಈ ಬಾನುಲಿ ಕೇಂದ್ರವು ಮೊದಲು ಖಾಸಗಿಯಾಗಿ ಎಂ.ವಿ. ಗೋಪಾಲಸ್ವಾಮಿ ಅವರ ಮನೆಯಲ್ಲಿ ಆರಂಭವಾಗಿ, ನಂತರ ಈಗಿನ ಮೈಸೂರು ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರವಾಯಿತು. ಇದನ್ನು ಮೈಸೂರು ನಗರಪಾಲಿಕೆಗೆ ವಹಿಸಿಕೊಟ್ಟರು. ಮುಂದೆ ಮೈಸೂರು ಸಂಸ್ಥಾನದ ಮಹಾರಾಜರ ಸರ್ಕಾರದ ವ್ಯಾಪ್ತಿಗೆ ಸೇರಿತು.

ಗೋಪಾಲಸ್ವಾಮಿ ಅವರ ನಂತರ ನಾ. ಕಸ್ತೂರಿ ಅವರು ಕೇಂದ್ರದ ಮುಖ್ಯಸ್ಥರಾಗಿ ನವನವೀನ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಹೆಚ್ಚಿಸಿದರು. ಮುಂದೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿತು. ಪ್ರೊ.ಎ.ಎನ್‌. ಮೂರ್ತಿರಾಯರು ಕೇಂದ್ರದ ಮುಖ್ಯಸ್ಥರಾಗಿ ತಮ್ಮ ಸೃಜನಶೀಲತೆಯ ಬೆಳಕಿನಲ್ಲಿ ಮುನ್ನಡೆಸಿದರು. ನಂತರ ಬಂದ ಡಾ.ಎ.ಎಂ. ನಟೇಶ್‌ ಅವರು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರು.

ವಿಶಾಲ ಕರ್ನಾಟಕ ರಚನೆಯ ನಂತರ 1955 ನ.2 ರಿಂದ ಬೆಂಗಳೂರಿಗೆ ಸ್ಥಳಾಂತರವಾಗಿದ್ದ ಕೇಂದ್ರವು 1974ರ ನ.14 ರಂದು ಮತ್ತೆ ಮೈಸೂರಿನಿಂದ ಕಾರ್ಯಾರಂಭ ಮಾಡಿತು. ಹೆಸರಾಂತ ನಾಟಕಕಾರರು, ಸಂಗೀತಗಾರರು, ಸಾಹಿತಿಗಳು, ವಿಜ್ಞಾನಿಗಳ ಸಂದರ್ಶನಗಳನ್ನು ಕೇಂದ್ರ ದಾಖಲು ಮಾಡಿದೆ. ಅವುಗಳಲ್ಲಿ ಸಾಹಿತಿಗಳಾದ ಕುವೆಂಪು, ಎ.ಎನ್‌. ಮೂರ್ತಿರಾವ್, ಪುತಿನ, ಆರ್‌.ಕೆ. ನಾರಾಯಣ್, ಹಾಸನದ ರಾಜಾರಾವ್‌, ಹಾ.ಮಾ. ನಾಯಕ, ಎಚ್ಚೆಸ್ಕೆ, ಎಸ್.ಎಲ್. ಭೈರಪ್ಪ, ಯು.ಆರ್‌. ಅನಂತಮೂರ್ತಿ, ಸೇನಾನಿ ಜನರಲ್‌ ಕಾರ್ಯಪ್ಪ, ವಿಜ್ಞಾನಿ ರಾಜಾರಾಮಣ್ಣ,ವ್ಯಂಗ್ಯಚಿತ್ರಕಾರ ಆರ್‌.ಕೆ. ಲಕ್ಷ್ಮಣ್‌, ಸಂಗೀತಗಾರರಾದ ಆರ್‌.ಕೆ. ಶ್ರೀಕಂಠನ್‌, ಟಿ. ನಾಗಮ್ಮ, ತಿಟ್ಟೆ ಕೃಷ್ಣ ಅಯ್ಯಂಗಾರ್‌, ಚಲನಚಿತ್ರ ನಿರ್ದೇಶಕ ಜಿ.ವಿ. ಅಯ್ಯರ್‌, ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್‌. ಜೋಯಿಸ್‌ ಮುಖ್ಯವಾದವು.

ನಾ. ಕಸ್ತೂರಿ, ಎಚ್.ಕೆ. ರಂಗನಾಥ್‌, ಎಸ್. ಪುಟ್ಟತಾಯಮ್ಮ, ವೈ. ವೆಂಕಟರಾಮಯ್ಯ, ದೇಜಗೌ, ವಿ. ಬಸವರಾಜ್‌, ತ.ಸು. ಶಾಮರಾವ್‌, ಸರ್‌ಸಿ.ವಿ. ರಾಮನ್‌, ತರಾಸು, ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರ ಭಾಷಣಗಳು ಆಕಾಶವಾಣಿಯ ಭಂಡಾರದಲ್ಲಿವೆ.

ಜಿ.ಪಿ. ರಾಜರತ್ನಂ, ಜಿ. ವೆಂಕಟಸುಬ್ಬಯ್ಯ, ಪ್ರಭುಶಂಕರ, ಕೆ.ಬಿ. ಪ್ರಭುಪ್ರಸಾದ್‌, ನ. ರತ್ನ, ಎಂ.ಎಸ್. ನಾಗರಾಜರಾವ್‌, ಬಿ.ವಿ. ಸುಂದರೇಶನ್‌, ಸಿ. ನಾಗಣ್ಣ, ಸಿ. ಶರತ್‌ಕುಮಾರ್‌ ಮೊದಲಾದವರು ಆಕಾಶವಾಣಿಯೊಂದಿಗೆ ತಮ್ಮ ಮಧುರ ಬಾಂಧವ್ಯವನ್ನು ಮೆಲುಕು ಹಾಕಿದ್ದಾರೆ. ಹಲವಾರು ಖ್ಯಾತನಾಮರು ಇಲ್ಲಿಗೆ ಭೇಟಿ ನೀಡಿದ್ದಾರೆ.

ಹಲವಾರು ಕಾರ್ಯಕ್ರಮಗಳು ಮೈಸೂರಿನಿಂದ ಆರಂಭವಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿವೆ. ಅದೇ ರೀತಿ ಮೈಸೂರು ಆಕಾಶವಾಣಿ ಕೇಂದ್ರವು ಹಲವಾರು ಪ್ರಯೋಗಳನ್ನು ಮಾಡಿದ್ದು, ಅವುಗಳಲ್ಲಿ ಬಹುತೇಕ ಯಶಸ್ವಿಯಾಗಿವೆ.ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೂ ಭಾಜನವಾಗಿವೆ.

ಎಫ್‌ಎಂ ಪ್ರಸಾರದ ನಂತರ ತಂತ್ರಜ್ಞಾನ ಬದಲಾವಣೆಯಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಮೂಹ ಮಾಧ್ಯಮಗಳಲ್ಲಿ ಇವತ್ತಿಗೂ ಕೂಡ ಆಕಾಶವಾಣಿ ತನ್ನತನವನ್ನು ಕಾಯ್ದುಕೊಂಡಿದೆ. ''''ಬಹುಜನ ಹಿತಾಯ, ಬಹುಜನ ಸುಖಾಯ'''' ಎಂಬ ಧ್ಯೇಯ ವಾಕ್ಯ ಹೊಂದಿದೆ. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಅಚ್ಚುಮೆಚ್ಚು. ಸಾಹಿತ್ಯ, ಸಂಗೀತ, ರೂಪಕ, ನಾಟಕ, ಶಿಕ್ಷಣ, ಆರೋಗ್ಯ, ಚಲನಚಿತ್ರ, ಕ್ರೀಡೆ, ಕೃಷಿ ಸೇರಿದಂತೆ ಹತ್ತು ಹಲವು ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಕೇಳುಗರ ಮನತಣಿಸುತ್ತಿದೆ. ಮೌಲಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.

ಕಾಫಿ ತಿಂಡಿ, ಬೆಳ್ಳಿ ಬೆರಗು, ವೀಣೆಯ ಬೆಡಗು ನಾದದ ಸೊಬಗು, ಅರಿವಿನ ಶಿಖರ, ಲಯ ಸಂಭ್ರಮ, ಹಾಡು ಹೇಳಿದ ಕಥೆ, ತೋರಣ ಹೂರಣ, ಡಾಕ್ಟರ್‌ಸಮಯ, ಮಹಿಳಾ ರಂಗ, ಯುವ ರಂಗ, ಬಾಲಜಗತ್‌, ರಸಪ್ರಶ್ನೆ, ರಂಗಬಾನುಲಿ, ಚಿಲಿಪಿಲಿ, ಚಟ್‌ಪಟ್‌ ಚುರುಮುರಿ, ಉದ್ಯೋಗವಾರ್ತೆ, ಫೋನ್‌ಇನ್‌ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ.

ಕೃಷಿ ರಂಗವಂತೂ ಅತ್ಯಂತ ಜನಪ್ರಿಯ. ಅದೇ ರೀತಿ ಕೇಳುಗರ ಕೋರಿಕೆ- ನಿಮ್ಮ ಮೆಚ್ಚಿನ ಚಿತ್ರಗಳು ಕಾರ್ಯಕ್ರಮವೂ ಜನಪ್ರಿಯವಾಗಿತ್ತು. ನಾಟಕಗಳ ಪ್ರಸಾರ ಈಗಲೂ ಮುಂದುವರಿದಿದೆ. ಚಲನಚಿತ್ರ ಧ್ವನಿವಾಹಿನಿ ಪ್ರಸಾರ ಕೂಡ ಇದೆ. ಕ್ರಿಕೆಟ್‌ ಕಾಮೆಂಟರಿ, ದಸರಾ ವೀಕ್ಷಕ ವಿವರಣೆ ಈಗಲೂ ಜನಪ್ರಿಯ.

ಇದೀಗ ನಿಮ್ಮೊಂದಿಗೆ ಆಕಾಶವಾಣಿ- ದಿನಕ್ಕೊಂದು ವಿಭಿನ್ನ ಕಾರ್ಯಕ್ರಮಗಳ ಸುಗ್ಗಿ. ಕೇಳುಗರು ಕೂಡ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಮಿಶ್ರ ಮಾಧುರ್ಯ, ಗೇಮ್‌ ಶೋ, ಕಥೆಯಲ್ಲಿದೆ ಉತ್ತರ, ಕೇಳುಗರೊಂದಿಗೆ ಅನಿಸಿಕೆ, ಕಾಡಿನ ರೋಚಕ ಕಥೆಗಳು, ಸಂಗೀತ ಸಂಭ್ರಮ, ಟ್ರಿಣ್‌ಟ್ರಿಣ್‌ ಸೈಕಲ್‌ಸವಾರಿ- ಮಾತಿನ ಲಹರಿ, ನಮ್ಮೂರ ಹೆಸರು

ಇದಲ್ಲದೇ ಕಾದಂಬರಿ ವಿಹಾರ, ಹೀಗಿದೆ ನಮ್‌ ಜೋಡಿ, ಹಾದಿಯಲ್ಲಿ ಕಂಡ ಮುಖ... ವಿಭಿನ್ನ ಪ್ರಯೋಗಗಳು ನಡೆದಿವೆ. ಕೃಷಿ ರಂಗ, ಮಹಿಳಾ ರಂಗ, ಕೇಳಿ ಗಿಳಿಗಳೇ, ಮಕ್ಕಳ ಮಂಟಪ, ನೆನಪಿನಂಗಳ- ಧ್ವನಿಮುದ್ರಣ ಪ್ರಸಾರ, ಸಂಧ್ಯಾರಾಗ, ವೈದ್ಯರೊಂದಿಗೆ ಭೇಟಿ, ಆರೋಗ್ಯ ಕಾರ್ಯಕ್ರಮ, ನೇರ ಪೋನ್‌ ಇನ್‌ ಕಾರ್ಯಕ್ರಮ,

ಕನ್ನಡ ಭಾರತಿ, , ಚಟ್‌ಪಟ್‌ ಚುರುಮುರಿ, ಬಾನುಲಿ ಕೃಷಿ ಬೆಳಗು ಗಮನ ಸೆಳೆಯುತ್ತಿವೆ.

ಪರಿಸರದ ಜಾಗೃತಿ, ಆರೋಗ್ಯದ ಬಗ್ಗೆ ಕಾಳಜಿ, ಸ್ವಚ್ಛತೆಯ ಬಗ್ಗೆ ಅರಿವು, ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ನವೆಂಬರ್‌ನಲ್ಲಿ ಮೈಸೂರು ಆಕಾಶವಾಣಿ ಕೇಂದ್ರದಲ್ಲಿ ಎಲ್ಲಾ ಉದ್ಯೋಗಿಗಳು ಸೇರಿ ಕನ್ನಡ ರಾಜ್ಯೋತ್ಸವ ಆಚರಿಸಿ, ಕನ್ನಡ ಜಾಗೃತಿ ಮೂಡಿಸಿ, ಇತರರಿಗೆ ಮಾದರಿಯಾಗಿದ್ದಾರೆ.

ಕೋವಿಡ್‌ ಕಾಲದಲ್ಲಿ ನೆರವು, ನಾಲ್ಕು ತಾಸು ನೇರ ಸಂವಾದ- ಪೊಲೀಸ್, ಆರೋಗ್ಯ ಇಲಾಖೆಯಿಂದ ನೆರವು ಔಷಧಿ, ಬ್ಯಾಂಕ್‌ಗಳಿಂದ ಹಣ ಡ್ರಾ, ಊಟ ಪೂರೈಕೆ ಮಾಡಲು ನೆರವಾಗಿದೆ. ಅಲ್ಲದೇ ಕೇಳುಗರಿಂದ ಕಥೆಗಳನ್ನು ಬರೆಸಿ, ಪ್ರಸಾರ ಮಾಡಿದೆ. ಇದು ಕೋವಿಡ್‌ ಕಥೆಗಳು ಶೀರ್ಷಿಕೆಯಲ್ಲಿ ಪುಸ್ತಕವಾಗಿಯೂ ಪ್ರಕಟವಾಗಿದೆ.

ಮೈಸೂರು ದಸರಾ, ಮೈಸೂರು ಮಲ್ಲಿಗೆ, ಮೈಸೂರು ಶ್ರೀಗಂಧ, ಮೈಸೂರು ಪಾಕ್‌, ಮೈಸೂರು ರೇಷ್ಮೆ ರೀತಿಯಲ್ಲಿಯೇ ಮೈಸೂರು ಆಕಾಶವಾಣಿ ಕೂಡ ಮೈಸೂರು ಬ್ರ್ಯಾಂಡ್‌ಎನಿಸಿಕೊಂಡಿದೆ. ಯಾದವಗಿರಿಯ ಪಾರಂಪರಿಕ ಕಟ್ಟಡದಲ್ಲಿ ಬೆಳಗಿನ ಜಾವ 5.55 ರಿಂದ ರಾತ್ರಿ 11 ರವರೆಗೆ ನಿರಂತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಶಿಕ್ಷಣ, ಮಾಹಿತಿ, ಮನರಂಜನೆ ಮೂಲಕ ಕೇಳುಗರ ಬದುಕನ್ನು ಹಸನಾಗಿಸಿದೆ.

ರೇಡಿಯೋದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಅಡುಗೆ ಮಾಡುತ್ತಾ, ಡ್ರೈವಿಂಗ್‌, ವಾಕಿಂಗ್‌... ಹೀಗೆ

ಯಾವುದೇ ಕೆಲಸ ಮಾಡುತ್ತಾ ಕೇಳಿಸಿಕೊಳ್ಳಬಹುದು. ಬೆಳಗಿನ ಜಾವ ವಾಯುವಿಹಾರದಲ್ಲಿ ಹಲವಾರು ಮಂದಿ ಆಕಾಶವಾಣಿ ಕೇಳುತ್ತಾರೆ. ಅದೇ ರೀತಿ ಕಾರುಗಳಲ್ಲಿ ಪ್ರಯಾಣಿಸುವವರು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುತ್ತಿರುತ್ತಾರೆ.

ಅತಿ ರಂಜನೆ ಇಲ್ಲ, ಸತ್ಯಸುದ್ದಿಗಳನ್ನು ಮಾತ್ರ ಪ್ರಸಾರ ಮಾಡುತ್ತದೆ. ಮಾಹಿತಿ ಪೂರ್ಣ ಕಾರ್ಯಕ್ರಮಗಳಿರುತ್ತಿವೆ. ಕೇಳುಗರಲ್ಲಿ ಯಾವುದೇ ಆತಂಕ ಮೂಡಿಸುವುದಿಲ್ಲ, ಬದಲಿಗೆ ಧೈರ್ಯ, ಸ್ಥೈರ್ಯ ಹೇಳುವ, ಭರವಸೆ, ವಿಶ್ವಾಸ ಮೂಡಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.

ಮೈಸೂರು ಆಕಾಶವಾಣಿ ಕಾರ್ಯಕ್ರಮಗಳನ್ನು ಮೆಚ್ಚಿ ಸಮುದ್ಯತಾ ಶ್ರೋತೃ ಬಳಗ ರಚನೆಯಾಗಿದೆ. ಆಸಕ್ತ ಕೇಳುಗರು ಸೇರಿ ರಚಿಸಿಕೊಂಡಿರುವ ಈ ಬಳಗವು ಮೈಸೂರು ಆಕಾಶವಾಣಿಯ ಮುಖ್ಯಸ್ಥರ ಗಮನಕ್ಕೆ ತಂದು, ಸಾರ್ವಜನಿಕ ಕಾರ್ಯಕ್ರಮಗಳನ್ನು ಕೂಡ ಸಂಘಟಿಸುತ್ತಿದೆ.

ರೇಡಿಯೋ ಅತ್ಯಂತ ತ್ವರಿತಗತಿಯಲ್ಲಿ ಜನರನ್ನು ತಲುಪಬಹುದಾದ ಏಕೈಕ ಮಾಧ್ಯಮ. ನೈಸರ್ಗಿಕ ವಿಕೋಪ ಉಂಟಾಗಿ ಸಂಪರ್ಕ ಕಡಿತವಾದಾಗ ಜನರನ್ನು ರೇಡಿಯೋ ಮೂಲಕ ತಲುಪಬಹುದು. ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಅವರನ್ನು ಕುಖ್ಯಾತ ಕಾಡುಗಳ್ಳ ವೀರಪ್ಪನ್‌ ಅಪಹರಿಸಿ, ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ವ್ಯಾಪಿಸಿರುವ ದಟ್ಟಡವಿಯಲ್ಲಿ ಇಟ್ಟಿದ್ದಾಗ ಕುಟುಂಬದವರು ಹಾಗೂ ಸರ್ಕಾರದ ಸಂದೇಶಗಳನ್ನು ತಲುಪಿಸಿದ್ದು ಇದೇ ರೇಡಿಯೋ ಮಾಧ್ಯಮ ಎಂಬುದು ಇಲ್ಲಿ ಉಲ್ಲೇಖಾರ್ಹ.

ವಾಣಿಜ್ಯೀಕರಣ, ಜಾಗತೀಕರಣ, ಬಹುಮಾಧ್ಯಮ ಸವಾಲುಗಳನ್ನು ಎದುರಿಸಿ ಆಕಾಶವಾಣಿ ಮುನ್ನಡೆಯುತ್ತಿದೆ.

ಈ ಕೇಂದ್ರ ಶತಕಗಳ ಕಾಲ ಹೀಗೆ ನಿರಂತರವಾಗಿ ಕೇಳುಗರ ಮೆಚ್ಚಿನ ಮಾಧ್ಯಮವಾಗಿ ಉಳಿದು, ಬೆಳೆಯಲಿ.