914 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ

| Published : Sep 17 2025, 01:08 AM IST / Updated: Sep 17 2025, 01:09 AM IST

ಸಾರಾಂಶ

ರಾಷ್ಟ್ರೀಯ ಲೋಕ್‍ ಅದಾಲತ್‍ನಲ್ಲಿ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿನ 8563 ಬಾಕಿವಿರುವ ಪ್ರಕರಣಗಳ ಪೈಕಿ ಒಟ್ಟು 2458 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 914 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಸಿದ್ದರಾಮ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರೀಯ ಲೋಕ್‍ ಅದಾಲತ್‍ನಲ್ಲಿ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿನ 8563 ಬಾಕಿವಿರುವ ಪ್ರಕರಣಗಳ ಪೈಕಿ ಒಟ್ಟು 2458 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 914 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಸಿದ್ದರಾಮ ಹೇಳಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸವದತ್ತಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದೊಂದಿಗೆ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್‍ ಅದಾಲತ್‍ನಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಪಕ್ಷಗಾರರ ನ್ಯಾಯಾಲಯದ ದೀರ್ಘಾವಧಿಯ ಪ್ರಕ್ರಿಯೆ ಮತ್ತು ವೆಚ್ಚವನ್ನು ತಪ್ಪಿಸಬಹುದು. ಇದು ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪಕ್ಷಗಾರರಿಗೆ ತ್ವರಿತ ಮತ್ತು ಸುಲಭವಾದ ಪರಿಹಾರ ಒದಗಿಸುತ್ತದೆ ಎಂದು ತಿಳಿಸಿದರು.ಪ್ರಧಾನ ಸಿವಿಲ್‍ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಸಿದ್ರಾಮ ರೆಡ್ಡಿ ಮಾತನಾಡಿ, ಈ ಬಾರಿ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು 90 ದಿನಗಳ ಮಧ್ಯಸ್ಥಿಕೆ ಅಭಿಯಾನ ಆರಂಭಿಸಲಾಗಿತ್ತು. ಮಧ್ಯಸ್ಥಿಕೆ ಮೂಲಕ ರಾಜೀ ಮಾಡಿಕೊಂಡ ಪ್ರಕರಣಗಳನ್ನು ಸಹ ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ ಎಂದರು. ರಾಷ್ಟ್ರೀಯ ಲೋಕ್‍ ಅದಾಲತನಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಪ್ಪ ಪಮ್ಮಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜೆ.ಬಿ,ಮುನವಳ್ಳಿ, ಉಪಾಧ್ಯಕ್ಷ ಎಂ.ಎಸ್.ಹುಬ್ಬಳ್ಳಿ, ಕಾರ್ಯದರ್ಶಿಗಳಾದ ಎಸ್.ಎಸ್.ಕಾಳಪ್ಪನವರ ಸಹಾಯಕ ಸರ್ಕಾರಿ ಅಭಿಯೋಜಕರಾದ ಮಂಜುನಾಥ ಸನ್ನಿಂಗನವರ, ಎಸ್.ಎಸ್.ಅಂಗಡಿ, ವಕೀಲ ಸಂಧಾನಕಾರರಾದ ಎಸ್.ಎಂ.ಗೊಂದಕರ, ಎಸ್.ವಿ.ಶಿರಹಟ್ಟಿಮಠ, ಜೆ.ಎಂ.ತಾಂಬೋಳಿ ಹಾಗೂ ನ್ಯಾಯವಾದಿಗಳಾದ ಎಂ.ಬಿ.ದ್ಯಾಮನಗೌಡರ, ಎಂ.ಎನ್.ಮುತ್ತಿನ, ಸಿ.ಜಿ.ತುರಮರಿ, ಎಂ.ಎಸ್.ಕುರಿ, ಎಂ.ಕೆ.ಹೊಸಮಠ, ಎ.ಎಂ.ಭಾಗೋಜಿಕೊಪ್ಫ, ಬಿ.ಕೆ.ಕಡಕೋಳ, ಎಂ.ಎಫ್.ಬಾಡಿಗೇರ, ವೈ.ಪಿ.ರಾಮಜಾರ, ಎಂ.ಎಂ.ಮಡಿವಾಳರ ಎಫ್.ಎಂ.ಕಾಳೆ ಮುಂತಾದವರು ಉಪಸ್ಥಿತರಿದ್ದರು.