2ನೇ ದಿನ 95024 ಮನೆಗಳ ಸಮೀಕ್ಷೆ

| Published : Oct 06 2025, 01:00 AM IST

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಭಾನುವಾರ 95,024 ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಕಳೆದೆರಡು ದಿನಗಳಲ್ಲಿ 1.19 ಲಕ್ಷ ಮನೆಗಳ ಸಮೀಕ್ಷೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಭಾನುವಾರ 95,024 ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಕಳೆದೆರಡು ದಿನಗಳಲ್ಲಿ 1.19 ಲಕ್ಷ ಮನೆಗಳ ಸಮೀಕ್ಷೆ ಮಾಡಲಾಗಿದೆ. ಭಾನುವಾರ ಸಂಜೆ ಏಳು ಗಂಟೆವರೆಗೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 14,288, ಪೂರ್ವ ನಗರ ಪಾಲಿಕೆ- 17,269, ಉತ್ತರ ನಗರ ಪಾಲಿಕೆ- 31,363, ದಕ್ಷಿಣ ನಗರ ಪಾಲಿಕೆ- 16,445, ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 40,112 ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.

ಸಮಸ್ಯೆ ಸರಿಪಡಿಸಲು ಅಧಿಕಾರಿಯೇ ಇಲ್ಲ:

ಸಮೀಕ್ಷೆಯ ಎರಡನೇ ದಿನವೂ ನಗರದ ಅಲ್ಲಲ್ಲಿ ಗೊಂದಲಗಳು ಮುಂದುವರೆದವು. ಸಮೀಕ್ಷೆ ನಡೆಸಬೇಕಿರುವ ವಾರ್ಡ್‌ಗಳ ಹಂಚಿಕೆಯಲ್ಲಿ ವ್ಯತ್ಯಾಸವಾಗಿರುವ ಕಾರಣ ಅದನ್ನು ಸರಿಪಡಿಸಿಕೊಡುವಂತೆ ಕೋರಿ ಮಲ್ಲೇಶ್ವರದಲ್ಲಿರುವ ಜಿಬಿಎ ಕಚೇರಿಗೆ ಸಮೀಕ್ಷೆ ನಡೆಸುವ ಶಿಕ್ಷಕರು ಭಾನುವಾರ ಭೇಟಿ ನೀಡಿದ್ದರು. ಆದರೆ, ಕಚೇರಿಗೆ ಬೀಗ ಹಾಕಲಾಗಿದ್ದು, ಕೇವಲ ಮಾರ್ಷಲ್‌ಗಳು ಮಾತ್ರ ಇದ್ದರು. ನಾಗರಬಾವಿ ಸೇರಿದಂತೆ ಇನ್ನಿತರ ಪ್ರದೇಶಗಳಿಂದ ಸಮೀಕ್ಷಾ ವಾರ್ಡ್ ಹಂಚಿಕೆ ಸರಿಪಡಿಸಿಕೊಳ್ಳಲು ಬಂದಿದ್ದೇವೆ. ಆದರೆ, ಇಲ್ಲಿ ನೋಡಿದರೆ ಯಾವೊಬ್ಬ ಅಧಿಕಾರಿಯೂ ಇಲ್ಲ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು, ಜಿಬಿಎ ಅಧಿಕಾರಿಗಳು ಅವೈಜ್ಞಾನಿಕವಾಗಿ ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿದ್ದಾರೆ. ತರಬೇತಿಗೆ ಕರೆದಾಗ, ವಾಸದ ಸ್ಥಳ ಹಾಗೂ ಕೆಲಸ ಮಾಡುವ ಶಾಲಾ-ಕಾಲೇಜು ಸಮೀಪ ಅಥವಾ ಜಿಬಿಎ ನೀಡುವ 10 ವಾರ್ಡ್‌ಗಳ ಪೈಕಿ ಒಂದು ವಾರ್ಡ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು. ಆದರೆ, ಸಮೀಕ್ಷೆ ಆರಂಭವಾದಾಗ ಶಿಕ್ಷಕರು ಆಯ್ಕೆ ಮಾಡಿಕೊಂಡಿರುವ ಸ್ಥಳಗಳನ್ನು ಬಿಟ್ಟು 30 ಕಿ.ಮೀ ದೂರದವರೆಗಿನ ಸ್ಥಳಗಳನ್ನು ನೀಡಿದ್ದಾರೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.