ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಹಿನ್ನೆಲೆ ಡಿಸಿಟೈಜೇಷನ್ ಪೂರ್ಣಗೊಂಡ ನಂತರ ಮತದಾರರಿಗೆ ನೀಡಲಾದ ನೋಟಿಸ್ ವಿಚಾರಣೆ ಕಾರ್ಯದಲ್ಲಿ ಶೇ.96.15ರಷ್ಟು ಪ್ರಗತಿ ಸಾಧಿಸಲಾಗಿದ್ದು, 1828 ನೋಟಿಸ್‌ಗಳಿಗೆ ವಿಚಾರಣೆ ಮಾತ್ರ ಬಾಕಿ ಉಳಿದಿವೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಹಿನ್ನೆಲೆ ಡಿಸಿಟೈಜೇಷನ್ ಪೂರ್ಣಗೊಂಡ ನಂತರ ಮತದಾರರಿಗೆ ನೀಡಲಾದ ನೋಟಿಸ್ ವಿಚಾರಣೆ ಕಾರ್ಯದಲ್ಲಿ ಶೇ.96.15ರಷ್ಟು ಪ್ರಗತಿ ಸಾಧಿಸಲಾಗಿದ್ದು, 1828 ನೋಟಿಸ್‌ಗಳಿಗೆ ವಿಚಾರಣೆ ಮಾತ್ರ ಬಾಕಿ ಉಳಿದಿವೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ, ನೋಟಿಸ್‌ಗಳ ವಿಚಾರಣೆ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಕುರಿತ ಸಭೆಯಲ್ಲಿ ಪರಿಶೀಲನೆ ನಡೆಸಿ ಮಾತನಾಡಿದರು.

ಆ.17ರಂದು ಡಿಜಿಟೈಜೇಷನ್ ಪೂರ್ಣಗೊಂಡ ಬಳಿಕ ಅಸಂಗತಿಗಳು ಹಾಗೂ ಮ್ಯಾಪಿಂಗ್ ಆಗದ ಮತದಾರರಿಗೆ ದಿನಾಂಕ ನಿಗದಿಪಡಿಸಿ, ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ಒಟ್ಟು 47,430 ಮತದಾರರಿಗೆ ನೋಟಿಸ್ ನೀಡಲಾಗಿತ್ತು. ಈ ಪೈಕಿ 45,605 ಮತದಾರರ ವಿಚಾರಣೆ ಪೂರ್ಣಗೊಂಡಿದ್ದು, 1,828 ನೋಟಿಸ್‌ಗಳ ವಿಚಾರಣೆ ಬಾಕಿ ಇರುವುದಾಗಿ ತಿಳಿಸಿದರು. ಬಾಕಿ ಇರುವ ವಿಚಾರಣೆಗಳನ್ನು ಶೀಘ್ರ ಪೂರ್ಣಗೊಳಿಸಲು ವಿವಿಧ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮತದಾರರ ನೋಂದಣಾಧಿಕಾರಿಗಳ ಮೂಲಕ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಮನೆಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನು ಪಡೆದು, ಮತದಾರರ ವಿವರಗಳನ್ನು ಅಂತಿಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೂತ್ ಮಟ್ಟದ ಏಜೆಂಟರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಹಕರಿಸುವಂತೆ ಕೋರಲಾಯಿತು.

ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಎ.ಎಸ್.ಡಿ.ಡಿ ಎಂದು ಗುರುತಿಸಲಾದ ಮತದಾರರನ್ನು ಮತದಾರರ ಪಟ್ಟಿಗೆ ನೋಂದಾಯಿಸಲು ವಿಶೇಷ ಅಭಿಯಾನ ನಡೆಸುವಂತೆ ನಿರ್ದೇಶಿಸಲಾಗಿದೆ. ನಮೂನೆ-6 ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಘೋಷಣಾ ಪತ್ರ ಸಲ್ಲಿಸುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು. ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟುಹೋಗಿದ್ದಲ್ಲಿ, ಅಂತಹ ಮತದಾರರು ಹೆಸರು ನೋಂದಾಯಿಸಿಕೊಳ್ಳುವಂತೆ ಹೆಚ್ಚಿನ ಪ್ರಚಾರ ಹಾಗೂ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಗಳು ಕೋರಿದರು.

ಸಭೆಯಲ್ಲಿ ಚುನಾವಣೆ ಶಿರಸ್ತೇದಾರ ಮಹೇಶ ಪಾಂಡವ, ಚುನಾವಣೆ ವಿಷಯ ನಿರ್ವಾಹಕ ರಾಘು ಢವಳಗಿ, ತಾಂತ್ರಿಕ ಸಹಾಯಕ ಸಂತೋಷ ಜೇವರಗಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರಾದ ಕೃಷ್ಣಾ ಪಾಟೀಲ, ಎಂ.ಎಂ.ಮುತ್ತಪ್ಪನವರ, ಪಿ.ಎಂ.ಹಳ್ಳೂರ ಉಪಸ್ಥಿತರಿದ್ದರು.

ಅರ್ಜಿ ನಮೂನೆಗಳ ಸ್ಥಿತಿಗತಿ: ಹಕ್ಕು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಜೂನ್ 16 ರಿಂದ ಸೆಪ್ಟೆಂಬರ್ 23ರವರೆಗೆ ನಮೂನೆ-6ಕ್ಕೆ 15,827, ನಮೂನೆ-7ಕ್ಕೆ 1,656 ಹಾಗೂ ನಮೂನೆ-8ಕ್ಕೆ 20,881 ಅರ್ಜಿಗಳು ಸ್ವೀಕೃತಗೊಂಡಿವೆ. ನಮೂನೆ-6ರ 15,827 ಅರ್ಜಿಗಳ ಪೈಕಿ 15,192 ಅರ್ಜಿಗಳನ್ನು ಇ-ರೋಲ್‌ನಲ್ಲಿ ನವೀಕರಿಸಲಾಗಿದ್ದು, 34 ಅರ್ಜಿಗಳು ಬಾಕಿ ಇವೆ. ನಮೂನೆ-7ರ 1,656 ಅರ್ಜಿಗಳ ಪೈಕಿ 749 ಅರ್ಜಿಗಳು ನವೀಕರಣಗೊಂಡು 13 ಬಾಕಿ ಉಳಿದಿವೆ. ನಮೂನೆ-8ರ 20,881 ಅರ್ಜಿಗಳ ಪೈಕಿ 19,634 ಅರ್ಜಿಗಳನ್ನು ನವೀಕರಣಗೊಂಡಿದ್ದು, 5 ಮಾತ್ರ ಬಾಕಿ ಉಳಿದಿವೆ.