ತಪ್ಪದೆ ಪೊಲಿಯೋ ಲಿಸಿಕೆ ಹಾಕಿಸಿ: ಶಾಸಕ ತಮ್ಮಯ್ಯ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 74,622 ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕುವ ಗುರಿಯ ಪೈಕಿ ಮೊದಲ ದಿನವೇ ಬರೋಬ್ಬರಿ 71,816 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಶೇ.96.24 ರಷ್ಟು ಲಸಿಕೀಕರಣ ಪೂರ್ಣವಾಗಿದೆ.ಜೂ. 28 ರಿಂದ ಜುಲೈ1 ವರೆಗೆ 4 ದಿನಗಳ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನದ ಪೈಕಿ ಮೊದಲ ದಿನ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಶಾಲಾ ಆವರಣ, ಸಾರ್ವಜನಿಕ ಸ್ಥಳಗಳಾದ ಬಸ್‌ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಮೊದಲಾದ ಪ್ರದೇಶದಲ್ಲಿ ಪೋಲಿಯೋ ಲಸಿಕಾ ಅಭಿಯಾನ ನಡೆಸಲಾಯಿತು. ಲಸಿಕೆ ಅಭಿಯಾನಕ್ಕೆ ಗ್ರಾಮೀಣ ಪ್ರದೇಶದಲ್ಲಿ 782, ನಗರ ಪ್ರದೇಶದಲ್ಲಿ 97 ಸ್ಥಿರ ಬೂತ್‌, ಇನ್ನೂ ವಲಸೆ ಕಾರ್ಮಿಕರು ವಾಸಿಸುತ್ತಿರುವ ಐದು ಕಡೆ ಲಸಿಕೆ ಹಾಕುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನವೇ ಜಿಲ್ಲೆಯ 71,816 ಮಕ್ಕಳು ಪೋಲಿಯೋ ಲಸಿಕೆ ಪಡೆದಿದ್ದಾರೆ. ಶೇ.96.24 ರಷ್ಟು ಇನ್ನೂ 2,806 ಮಕ್ಕಳಿಗೆ ಜು. 1ರ ಒಳಗೆ ಲಸಿಕೆ ನೀಡುತ್ತೇವೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಚ್.ಕೆ.ಮಂಜುನಾಥ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಸೋಮವಾರದಿಂದ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಆಶಾ, ಅಂಗನವಾಡಿ ಮತ್ತು ಸರ್ಕಾರಿ ಆಸ್ಪತ್ರೆ ನರ್ಸ್‌ಗಳು ಮನೆ ಮನೆ ಭೇಟಿ ನೀಡಿ ಪೋಲಿಯೋ ಲಸಿಕೆ ಪಡೆಯದಿರುವ ಮಕ್ಕಳಿಗೆ ಲಸಿಕೆ ನೀಡಲಿದ್ದಾರೆ. ನಗರದಲ್ಲಿ 19 ಮತ್ತು ಗ್ರಾಮೀಣ ಪ್ರದೇಶದಲ್ಲಿ 26 ಬೂತ್‌ಗಳನ್ನು ಟ್ರಾನ್ಸಿಟ್ ಪಾಯಿಂಟ್‌, ನಗರ ಪ್ರದೇಶದಲ್ಲಿ 2 ಮತ್ತು ಗ್ರಾಮೀಣ ಪ್ರದೇಶದಲ್ಲಿ 74 ಮೊಬೈಲ್ ಟೀಂಗಳನ್ನು ರಚಿಸಲಾಗಿದೆ. ನಗರ ಪ್ರದೇಶಕ್ಕೆ 396, ಗ್ರಾಮೀಣ ಪ್ರದೇಶಕ್ಕೆ 2,280 ಲಸಿಕಾ ಕಾರ್ಯಕರ್ತರು, ಮೇಲ್ವಿಚಾರಣೆಗೆ ನಗರದ 19, ಗ್ರಾಮೀಣ 180 ಸಿಬ್ಬಂದಿ ನಿಯೋಜಿಸಲಾಗಿದೆ.--ಬಾಕ್ಸ್--ತಾಲೂಕು ವಾರು ಪೋಲಿಯೋ ಲಸಿಕಾ ಅಭಿಯಾನದ ವಿವರತಾಲೂಕುಗುರಿಭಾನುವಾರ ಲಸಿಕೆ ಶೇ.ಕಡೂರು19,51119,32199.03ಚಿಕ್ಕಮಗಳೂರು20,07819,25195.88ಮೂಡಿಗೆರೆ6820380792.48ಕಳಸ1920171189.11ಎನ್‌.ಆರ್‌.ಪುರ4123405398.28ಕೊಪ್ಪ4230402695.18ಶೃಂಗೇರಿ18202041112.14ತರೀಕೆರೆ110201040294.39ಅಜ್ಜಂಪುರ5100470592.25ಒಟ್ಟು9462271,81696.24

---

ತಪ್ಪದೆ ಪೊಲಿಯೋ ಲಿಸಿಕೆ ಹಾಕಿಸಿ: ಪೋಷಕರು ತಮ್ಮ ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಕರೆ ನೀಡಿದರು. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಹಲವು ವರ್ಷಗಳಿಂದ ಪಲ್ಸ್ ಪೋಲಿಯೊ ಅಭಿಯಾನ ನಡೆಯುತ್ತಿದೆ. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಹಾಗೂ ಅಂದಿನ ಸಿಎಂ ಎಚ್.ಡಿ. ದೇವೇಗೌಡರ ಅವಧಿಯಲ್ಲಿ ತೀವ್ರಗೊಂಡ ಈ ಅಭಿಯಾನದ ಫಲವಾಗಿ ಇಂದು ದೇಶದಲ್ಲಿ ಶೇ.100 ರಷ್ಟು ಪೋಲಿಯೊ ಮುಕ್ತವಾಗಿದೆ. ಆದಾಗ್ಯೂ ಭವಿಷ್ಯದ ಸುರಕ್ಷತೆ ದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಕಾರ್ಯಕ್ರಮ ಮುಂದುವರಿಸುತ್ತಿವೆ ಎಂದರು.

ಲಸಿಕೆಗಳ ಮಹತ್ವ ನಮಗೆ ಕೋವಿಡ್ ಸಮಯದಲ್ಲಿ ಮನವರಿಕೆಯಾಗಿದೆ. ಕೋವಿಡ್ ಸಾಂಕ್ರಾಮಿಕ ಇಡೀ ಜಗತ್ತನ್ನು ಕಾಡಿ ದಾಗ, ಅದಕ್ಕೆ ಲಸಿಕೆ ಕಂಡುಹಿಡಿದ ಬಳಿಕವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಯಾರು ಮೂರು ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೋ ಅವರು ಸುರಕ್ಷಿತವಾಗಿ ಉಳಿದರು. ಅದೇ ರೀತಿ ಪೋಲಿಯೊ ಮುಕ್ತ ಸಮಾಜ ಉಳಿಸಿಕೊಳ್ಳಲು ಲಸಿಕಾ ಕವರೇಜ್ ಅಗತ್ಯ ಎಂದು ತಿಳಿಸಿದರು.


ಸರ್ಕಾರದ ಯಾವುದೇ ಯೋಜನೆ ಆರೋಗ್ಯ ಕಾರ್ಯಕ್ರಮಗಳ ಯಶಸ್ಸಿಗೆ ಸಾರ್ವಜನಿಕರು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ ಎಂದರು.

ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ ಯಶಸ್ವಿಗೊಳಿಸಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಎಲ್ಲಾ ರೀತಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಮೊದಲ ದಿನವೇ ಜಿಲ್ಲೆಯ ಶೇ.95 ರಷ್ಟು ಮಕ್ಕಳಿಗೆ ಲಸಿಕೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಮಕ್ಕಳಿಗೆ ಜ್ವರ ಅಥವಾ ಇನ್ಯಾವುದೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೆ, ತಕ್ಷಣ ಗಾಬರಿಪಡುವ ಅಗತ್ಯವಿಲ್ಲ. ಅಂತಹ ಮಕ್ಕಳಿಗೆ ಒಂದೆರಡು ದಿನಗಳ ಬಳಿಕ ಲಸಿಕೆ ಹಾಕಿಸಬಹುದು. ಇನ್ನು ಲಸಿಕೆ ಹಾಕಿದ ನಂತರ 2 - 3 ಗಂಟೆಗಳ ಕಾಲ ಮಕ್ಕಳ ಆರೋಗ್ಯದ ಕಡೆಗೆ ನಿಗಾವಹಿಸುವುದು ಸೂಕ್ತ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ಮಾತನಾಡಿ ಈ ಪೋಲಿಯೊ ಅಭಿಯಾನ ಗ್ರಾಮೀಣ ಭಾಗಗಳಲ್ಲಿ ಒಟ್ಟು 3 ದಿನಗಳ ಕಾಲ ನಡೆಯಲಿದ್ದು, ನಗರ ಪ್ರದೇಶದದಲ್ಲಿ ಒಟ್ಟು ನಾಲ್ಕು ದಿನ ಲಸಿಕಾ ಕಾರ್ಯಕ್ರಮ ಇರಲಿದೆ. ಜಿಲ್ಲೆಯಲ್ಲಿ ಒಟ್ಟು 74,622 ಮಕ್ಕಳನ್ನು ಲಸಿಕೆಗಾಗಿ ಗುರುತಿಸಲಾಗಿದ್ದು, ಎಲ್ಲರಿಗೂ ಪೋಲಿಯೊ ಹನಿ ತಲುಪಿಸುವ ಗುರಿ ಹೊಂದಲಾಗಿದೆ. ಮೊದಲ ದಿನ ಬೂತ್‍ಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ನಡೆದಿದೆ. ಇಂದೇ ಸುಮಾರು ಶೇ.95 ರಷ್ಟು ಗುರಿ ಯನ್ನು ತಲುಪಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದರು. ಈ ವೇಳೆ ನಗರಸಭೆ ಅಧ್ಯಕ್ಷೆ ಭವ್ಯಾ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಾಲಿಮಠ್, ವೈದ್ಯರಾದ ಡಾ. ಮಂಜುನಾಥ್, ಡಾ. ಭರತ್, ರೋಟರಿ ಏಕತಾ ಕ್ಲಬ್ ಅಧ್ಯಕ್ಷೆ ಪ್ರಿಯಾಂಕ ಆನಂದ್, ಕಾರ್ಯದರ್ಶಿ ದಿವ್ಯ ವಿಕ್ರಂ ಉಪಸ್ಥಿತರಿದ್ದರು.----ಬಾಕ್ಸ್‌---

ಜಿಲ್ಲಾಸ್ಪತ್ರೆ ಬಗ್ಗೆ ತಪ್ಪು ಮಾಹಿತಿ: ಎಚ್‌.ಡಿ.ತಮ್ಮಯ್ಯ

ಕೆಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ ಎಂಬ ತಪ್ಪು ಮಾಹಿತಿ ಹರಡುತ್ತಾರೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ವಾಸ್ತವ ಸ್ಥಿತಿಯೇ ಬೇರೆಯೇ ಇದೆ. ಜಿಲ್ಲಾ ಆಸ್ಪತ್ರೆಗೆ ಕಡೂರು, ಬೇಲೂರು ಮುಂತಾದ ರ ತಾಲೂಕು ಹಾಗೂ ಜಿಲ್ಲೆಗಳಿಂದಲೂ ಹೆರಿಗೆ ಮತ್ತು ಇತರೆ ಚಿಕಿತ್ಸೆಗಳಿಗೆ ರೋಗಿಗಳು ಬರುತ್ತಾರೆ. ಕಡೂರು ಮತ್ತು ತರೀಕೆರೆಯ ಜನರಿಗೆ ಶಿವಮೊಗ್ಗ ಹತ್ತಿರವಿದ್ದರೂ ಬೇಲೂರಿನ ಜನರಿಗೆ ಹಾಸನ ಹತ್ತಿರವಿದ್ದರೂ ಅವರು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಯನ್ನು ನಂಬಿ ಬರುತ್ತಿರುತ್ತಿದ್ದಾರೆ. ಅದು ಇಲ್ಲಿನ ಉತ್ತಮ ವೈದ್ಯಕೀಯ ಸೇವೆಗೆ ಸಾಕ್ಷಿ ಎಂದರು.

ಇನ್ನೂ ಕೆಲವೇ ತಿಂಗಳಲ್ಲಿ ಚಿಕ್ಕಮಗಳೂರಿಗೆ ಪ್ರಾರಂಭವಾಗಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಹೆಚ್ಚಿನ ರೀತಿಯಲ್ಲಿ ಬಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.