ಬೆಂಗಳೂರು ಜಿಲ್ಲೆಯಲ್ಲಿ 98.43 ಲಕ್ಷ ಮತದಾರರು

| Published : Jan 23 2024, 01:45 AM IST

ಬೆಂಗಳೂರು ಜಿಲ್ಲೆಯಲ್ಲಿ 98.43 ಲಕ್ಷ ಮತದಾರರು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಅಕ್ಟೋಬರ್‌ 27ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 97.90 ಲಕ್ಷ ಮತದಾರರಿದ್ದರು. ನಂತರ ಹೆಚ್ಚುವರಿಯಾಗಿ 53 ಸಾವಿರ ಮತದಾರರು ಸೇರ್ಪಡೆಗೊಂಡಿದ್ದು, ಅಂತಿಮವಾಗಿ ನಗರ ಜಿಲ್ಲೆ ವ್ಯಾಪ್ತಿಯಲ್ಲಿ 98.43 ಲಕ್ಷ ಮತದಾರರಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಸಕ್ತ ವರ್ಷದ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಪೂರ್ಣಗೊಂಡಿದ್ದು, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 98.43 ಲಕ್ಷ ಮತದಾರರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 6.34 ಲಕ್ಷ ಮತದಾರರು ಹೆಚ್ಚಳ ಆಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌, ಕಳೆದ ಅಕ್ಟೋಬರ್‌ 27ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 97.90 ಲಕ್ಷ ಮತದಾರರಿದ್ದರು. ನಂತರ ಹೆಚ್ಚುವರಿಯಾಗಿ 53 ಸಾವಿರ ಮತದಾರರು ಸೇರ್ಪಡೆಗೊಂಡಿದ್ದು, ಅಂತಿಮವಾಗಿ ನಗರ ಜಿಲ್ಲೆ ವ್ಯಾಪ್ತಿಯಲ್ಲಿ 98.43 ಲಕ್ಷ ಮತದಾರರಿದ್ದಾರೆ. ಒಟ್ಟು ಮತದಾರರ ಪೈಕಿ 50.78 ಲಕ್ಷ ಪುರುಷ, 47.63 ಲಕ್ಷ ಮಹಿಳೆ ಹಾಗೂ 1,784 ಇತರ ಮತದಾರರಿದ್ದಾರೆ ಎಂದು ತಿಳಿಸಿದರು.

1.33 ಲಕ್ಷ ಮತದಾರರು ಪಟ್ಟಿಯಿಂದ ಹೊರಕ್ಕೆ:

ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರದಿಂದ ಹೆಸರು ಬದಲಾವಣೆ, ಮತದಾರರ ಪಟ್ಟಿಯಿಂದ ಹೆಸರು ತೆಗೆಸುವುದು ಸೇರಿದಂತೆ ಇನ್ನಿತರ ಬದಲಾವಣೆಗಾಗಿ 1.86 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 47,960 ಅರ್ಜಿಗಳು ವಿವಿಧ ರೀತಿಯ ಬದಲಾವಣೆಗಾಗಿ ಸಲ್ಲಿಕೆಯಾಗಿದ್ದರೆ, 1.33 ಲಕ್ಷ ಹೆಸರು ತೆಗೆದು ಹಾಕಲು ಸಲ್ಲಿಕೆಯಾದ ಅರ್ಜಿಗಳಾಗಿವೆ. ಅಕ್ಟೋಬರ್‌ 27ರಿಂದ ಜ.22ರವರೆಗೆ ಒಟ್ಟು 53,078 ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿರುವ ಕುರಿತು ಖಾತ್ರಿ ಮಾಡಿಕೊಳ್ಳಲು ಅಥವಾ ಇನ್ನಿತರ ವಿಚಾರಣೆಗಾಗಿ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ವಾರ್ಡ್‌ ಕಚೇರಿಗಳಿಗೆ ಭೇಟಿ ನೀಡಬಹುದು. ಜತೆಗೆ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ www.ceokarnataka.kar.nic.in ಮತ್ತು ಬಿಬಿಎಂಪಿ ವೆಬ್‌ಸೈಟ್‌ www.bbmp.gov.inನಲ್ಲೂ ಪರಿಶೀಲಿಸಿಕೊಳ್ಳಬಹುದು ಎಂದರು.ಹೆಚ್ಚಾದ ಲಿಂಗಾನುಪಾತ

ಕರಡು ಮತದಾರರ ಪಟ್ಟಿ ಪ್ರಕಟಗೊಂಡಾಗ ಲಿಂಗಾನುಪಾತ 1000 ಪುರುಷರಿಗೆ 934 ಇತ್ತು. ಅದೇ ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ 938ಕ್ಕೆ ಏರಿಕೆಯಾಗಿದೆ. ಅದೇ ರೀತಿ ಇದೇ ಮೊದಲ ಬಾರಿಗೆ ಮತ ಚಲಾಯಿಸುವ 1.12 ಲಕ್ಷ ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂದು ತುಷಾರ್ ಗಿರಿನಾಥ್‌ ವಿವರಿಸಿದರು.

ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್‌. ರಾಮಚಂದ್ರನ್‌, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ। ಹರೀಶ್‌ಕುಮಾರ್‌, ದಯಾನಂದ್‌, ಸ್ನೇಹಲ್‌, ವಿನೋತ್‌ ಪ್ರಿಯಾ ಇದ್ದರು.

---

ದಕ್ಷಿಣದಲ್ಲಿ ಹೆಚ್ಚು, ಚಿಕ್ಕಪೇಟೆಯಲ್ಲಿ ಕಡಿಮೆ

ಅಂತಿಮ ಮತದಾರರ ಪಟ್ಟಿ ಪ್ರಕಾರ ಬೆಂಗಳೂರು ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು 7.17 ಲಕ್ಷ ಮತದಾರರಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ 1.95 ಲಕ್ಷ ಮತದಾರರಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿದ್ದರೆ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟು 52,991 ಮತದಾರರು ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಅದರಲ್ಲಿ ಯಶವಂತಪುರ ಒಂದರಲ್ಲೇ 9,637 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಹಾಗೆಯೇ, ಒಟ್ಟು 86,268 ಮತದಾರರನ್ನು ಪಟ್ಟಿಗೆ ಸೇರಿಸಲಾಗಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರವೊಂದರಲ್ಲೇ 18,411 ಮತದಾರರು ಹೊಸದಾಗಿ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

* ಅತಿ ಹೆಚ್ಚು ಮತದಾರರಿರುವ 5 ಕ್ಷೇತ್ರಗಳು

ಬೆಂಗಳೂರು ದಕ್ಷಿಣ: 7.17 ಲಕ್ಷ

ಮಹದೇವಪುರ: 6.27 ಲಕ್ಷ

ಯಶವಂತಪುರ: 5.78 ಲಕ್ಷ

ಕೆ.ಆರ್‌.ಪುರ: 5.24 ಲಕ್ಷ

ಬ್ಯಾಟರಾಯನಪುರ: 5.17 ಲಕ್ಷ* ಅತಿ ಕಡಿಮೆ ಮತದಾರರಿರುವ 5 ಕ್ಷೇತ್ರಗಳು

ಚಿಕ್ಕಪೇಟೆ: 1.95 ಲಕ್ಷ

ಗಾಂಧಿನಗರ: 2.06 ಲಕ್ಷ

ಜಯನಗರ: 2.10 ಲಕ್ಷ

ಶಿವಾಜಿನಗರ: 2.25 ಲಕ್ಷ

ಮಲ್ಲೇಶ್ವರ: 2.26 ಲಕ್ಷ