ಸಾರಾಂಶ
-ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯರಿಗೆ ರಾಷ್ಟ್ರೀಯ ಪುರಸ್ಕಾರ
--------ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಮೈಸೂರು ದಸರಾ ಉತ್ಸವದಂತೆ ಬಸವಕಲ್ಯಾಣದಲ್ಲಿಯು ಕಳೆದ 47 ವರ್ಷಗಳಿಂದ ನಾಡಹಬ್ಬ ಮತ್ತು ಹರಳಯ್ಯಾ ಸ್ಮರಣೋತ್ಸವ ಹಾಗೂ ಶರಣ ವಿಜಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹರಳಯ್ಯಾ ಗವಿಯ ಡಾ. ಗಂಗಾಂಬಿಕಾ ಅಕ್ಕ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿ ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯಪೀಠ ಬಸವಕಲ್ಯಾಣ ವತಿಯಿಂದ ಪ್ರತಿವರ್ಷ ಶರಣ ವಿಜಿಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡುವ ಪ್ರತಿಷ್ಠಿತ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರವನ್ನು 2024ನೇ ಸಾಲಿಗೆ ತರಳಬಾಳು ಜಗದ್ಗುರು ಶಾಖಾ ಮಠ ಸಾಣೆಹಳ್ಳಿಯ ಪಟ್ಟಾಧ್ಯಕ್ಷ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 3ರಿಂದ 12ರ ವರೆಗೆ ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಶರಣ ವಿಜಯ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಜರುಗಲಿದ್ದು, ಅಕ್ಟೋಬರ್ 11 ರಂದು ನಡೆಯುವ ಶರಣ ವಿಜಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.ಮೊದಲು ಕೇವಲ ಕಾರ್ಯಕ್ರಮ ಮಾಡಲಾಗುತ್ತಿತ್ತು 2017 ರಿಂದ ಈ ಪ್ರಶಸ್ತಿಯನ್ನು ಪ್ರಾರಂಭಿಸಲಾಗಿದ್ದು ಬಸವ ತತ್ವ ಪ್ರಸಾರ, ಶರಣ ಸಾಹಿತ್ಯ, ಕಲೆ, ಸಂಗೀತ ಸಾಮಾಜಿಕ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರದ 8 ಜನ ಸಾಧಕರಿಗೆ ಇಲ್ಲಿಯ ವರೆಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಪಡೆದವರಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷ ಲೋಕನಾಯಕ ಭೀಮಣ್ಣ ಖಂಡ್ರೆ, ಬಸವ ಟಿ.ವಿ.ಯ ಮಾಲಿಕ ಕೃಷ್ಣಪ್ಪ, ಶತಾಯುಷಿ ಲಿಂ. ವಿ.ಸಿದ್ಧರಾಮಣ್ಣ, ಶರಣ ಸಾಹಿತಿ ಡಾ.ಅಮರನಾಥ ಸೋಲಪುರೆ, ವಚನ ಸಂಗೀತಗಾರ ಮೃತ್ಯುಂಜಯ ಶೆಟ್ಟರ್, ಕಲಾವಿದ ಚ. ಭೀ.ಸೋಮಶೆಟ್ಟಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಈ ವರ್ಷದ ಪ್ರಶಸ್ತಿಯು ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
--ಚಿತ್ರ 26ಬಿಡಿಆರ್51
ಡಾ. ಪಂಡಿತಾರಾಧ್ಯ ಶಿವಾಚಾರ್ಯರು--