ಸಾರಾಂಶ
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಮಾಜಿ ಸಚಿವ ಎ.ಬಿ.ಪಾಟೀಲ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಮಾರ್ಗದರ್ಶನದಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಬರುವ ಹಂಗಾಮು ಪ್ರಾರಂಭಿಸಲಿದೆ ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಹೇಳಿದರು.ಪಟ್ಟಣದ ಕಾರ್ಖಾನೆ ಸಭಾಗೃಹದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ತಾಲೂಕಿನ ಸಹಕಾರಿ ರಂಗ ಉಳಿಸುವ ನಿಟ್ಟಿನಲ್ಲಿ ನಾನು ಹಾಗೂ ಕತ್ತಿ ಕುಟುಂಬ ಪಕ್ಷಾತೀತವಾಗಿ ಒಂದಾಗುವ ಮೂಲಕ ಕಾರ್ಖಾನೆಯನ್ನು ಮುನ್ನಡೆಸುವ ಉದ್ದೇಶ ಹೊಂದಿದ್ದೇವೆ. ಬರುವ ದಿನಮಾನಗಳಲ್ಲಿ ಕಾರ್ಖಾನೆಗೆ ಅಗತ್ಯ ಆರ್ಥಿಕ ಸಂಪನ್ಮೂಲ ಒದಗಿಸಿ ಕಾರ್ಖಾನೆ ಹಾಗೂ ರೈತರ ಹಿತ ಕಾಪಾಡಲು ಬದ್ಧರಾಗಿದ್ದೇವೆ ಎಂದರು.
ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಕಾರ್ಖಾನೆ ಆಡಳಿತ ಮಂಡಳಿಯ ಎಲ್ಲ ಸದಸ್ಯರು ವೈಮನಸ್ಸು ಮರೆತು ಎ.ಬಿ.ಪಾಟೀಲ ಹಾಗೂ ತಮ್ಮ ಮಾರ್ಗದರ್ಶನದಲ್ಲಿ ಬರುವ ದಿನಮಾನಗಳಲ್ಲಿ ರೈತ ಹಾಗೂ ಕಾರ್ಮಿಕರ ಹಿತ ಕಾಯುವ ಮೂಲಕ ಕಾರ್ಖಾನೆಯನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತೇವೆ. ರೈತರು ಯಾವುದೇ ವದಂತಿಗಳಿಗೆ ಕಿವಿಗೊಡದೆ ತಮ್ಮ ಕಬ್ಬು ಕಳಿಸಬೇಕು. ಪ್ರಸಕ್ತ ಹಂಗಾಮಿನಲ್ಲಿ ೧೦ ಲಕ್ಷ ಮೆ. ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.ಈ ವೇಳೆ ಶಾಸಕ ನಿಖಿಲ್ ಕತ್ತಿ, ಯುವ ಧುರೀಣರಾದ ಪವನ ಕತ್ತಿ, ಪೃಥ್ವಿ ಕತ್ತಿ, ವಿನಯ ಪಾಟೀಲ, ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಪ್ರಭುದೇವ ಪಾಟೀಲ, ಸುರೇಶ ದೊಡ್ಡಲಿಂಗನ್ನವರ, ಬಸವರಾಜ ಮರಡಿ, ಸುರೇಶ ಬೆಲ್ಲದ, ಬಾಬಾಸಾಹೇಬ ಅರಬೋಳಿ, ಶಿವನಾಯಿಕ ನಾಯಿಕ ಸೇರಿದಂತೆ ಇತರರು ಇದ್ದರು.
ಎ.ಬಿ-ಕತ್ತಿ ಸಮಾಗಮ:ಕಳೆದ ೩೦ ವರ್ಷಗಳ ಹಿಂದೆ ಇದೇ ಕಾರ್ಖಾನೆಗಾಗಿ ಆಪ್ತ ಕುಟುಂಬಗಳ ನಡುವೆ ವೈರತ್ವ ಉಂಟಾಗಿತ್ತು. ಇದೀಗ ಮತ್ತೆ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ಕತ್ತಿ ಹಾಗೂ ಎ.ಬಿ.ಪಾಟೀಲ ಕುಟುಂಬಗಳ ನಡುವೆ ಬೇಸುಗೆ ಬೆಳೆಸಿದೆ. ಈ ಕುಟುಂಬಗಳ ದೋಸ್ತಿ ಸಹಕಾರಿ ಸಂಘಗಳ ಉಳಿವಿಗೆ ಮಾತ್ರ ಸೀಮಿತವಾಗಿದ್ದು, ರಾಜಕೀಯ ಪಕ್ಷಗಳ ಬೇರೆ ಬೇರೆಯಾಗಿದ್ದರಿಂದ ಅವುಗಳ ಸಿದ್ಧಾಂತದ ಪ್ರಕಾರ ಕಾರ್ಯ ನಿರ್ವಹಿಸುತ್ತೇವೆ ವಿನಃ ರಾಜಕೀಯವಾಗಿ ಯಾವುದೇ ಹೊಂದಾಣಿಕೆ ಇಲ್ಲ ಎಂದು ಉಭಯ ನಾಯಕರು ಹೇಳಿಕೆ ನೀಡಿದ್ದಾರೆ.
ಅಧಿಕಾರ ನೆನೆದ ಎಬಿ:ದಿ.ಅಪ್ಪಣಗೌಡ ಪಾಟೀಲ, ಬಸಗೌಡ ಪಾಟೀಲ, ದಿ.ವಿಶ್ವನಾಥ ಕತ್ತಿ, ದಿ.ಉಮೆಶ ಕತ್ತಿ ಸೇರಿದಂತೆ ನಾನು, ರಮೇಶ ಕತ್ತಿ ಹಾಗೂ ನಿಖಿಲ್ ಕತ್ತಿ ನಮ್ಮೆಲ್ಲರಿಗೂ ವಿಧಾನಸಭೆ ಹಾಗೂ ಸಂಸತ್ತು ಪ್ರವೇಶಿಸುವ ಅವಕಾಶವನ್ನು ಹಿರಣ್ಯಕೇಶಿ ಕಾರ್ಖಾನೆ ಒದಗಿಸಿಕೊಟ್ಟಿದೆ. ಆದ್ದರಿಂದ ಹಿರಣ್ಯಕೇಶಿ ಕಾರ್ಖಾನೆ ಉಳಿಸುವುದು ನಮ್ಮೆರಡು ಕುಟುಂಬಗಳ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿದರು.
ಮತ್ತೆ ಒಂದಾದ ಎ.ಬಿ-ಕತ್ತಿ ಕುಟುಂಬಈ ಹಿಂದೆ ಲೀಸ್ ವಿಷಯವಾಗಿ ಕತ್ತಿ ಕುಟುಂಬ ಹಾಗೂ ಆಡಳಿತ ಮಂಡಳಿ ನಡುವೆ ಭಿನ್ನಮತ ಉಂಟಾಗಿತ್ತು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಕಾರ್ಖಾನೆ ಮುನ್ನಡೆಸಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಇದು ಹುಕ್ಕೇರಿ ತಾಲೂಕಿನಲ್ಲಿ ರಾಜಕೀಯವಾಗಿ ದೊಡ್ಡ ಬದಲಾವಣೆಗೆ ಕಾರಣವಾಗಿತ್ತು. ಕಾಲಕ್ರಮೇಣ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಹುಕ್ಕೇರಿ ಕೆಇಬಿ ಆಡಳಿತವೂ ಕತ್ತಿ ಕುಟುಂಬ ಕೈಬಿಟ್ಟಿತ್ತು. ಈ ಸಂದರ್ಭದಲ್ಲಿ ಹೊರಗಿನವರಿಗೆ ಹುಕ್ಕೇರಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಂಸದ ರಮೇಶ ಕತ್ತಿ ಗುಡುಗಿದ್ದರು. ಇದರ ಬೆನ್ನಲ್ಲೆ ಜೊಲ್ಲೆ-ಜಾರಕಿಹೊಳಿ ಹಾಗೂ ಹಿರಾಶುಗುರ್ಸ್ ನಿರ್ದೇಶಕರ ನಡುವೆಯೂ ಸಹ ಸೂಕ್ತ ಹೊಂದಾಣಿಕೆಯಾಗದೇ ನಿರ್ದೇಶಕರು ಮಾಜಿ ಸಚಿವ ಎ.ಬಿ.ಪಾಟೀಲ ಮೂಲಕ ಮತ್ತೆ ಕತ್ತಿ ಕುಟುಂಬದೊಂದಿಗೆ ಬೆರೆತಿದ್ದು ಎ.ಬಿ-ಕತ್ತಿ ಮಾರ್ಗದರ್ಶನದಲ್ಲಿ ಕಾರ್ಖಾನೆ ಮುಂದುವರಿಯಲಿದೆ ಎಂದಿದ್ದಾರೆ. ಇದು ಪ್ರಸ್ತುತ ರಾಜಕೀಯವಾಗಿ ದೊಡ್ಡ ಸಂಚಲನ ಮೂಡಿಸಿದೆ.
;Resize=(128,128))
;Resize=(128,128))
;Resize=(128,128))