ಸಾರಾಂಶ
ಕಲಬುರಗಿ ನೃಪತುಂಗ ನಗರ ಸಾರಿಗೆ ಸಿಟಿ ಬಸ್ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ವಾರಸುದಾರರಿಲ್ಲದ ಬ್ಯಾಗ್ ಪತ್ತೆಯಾಗಿ ಕೆಲಗಂಟೆಗಳ ಕಾಲ ಆತಂಕ ಹುಟ್ಟುಹಾಕಿತ್ತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಸರ್ದಾರ್ ಪಟೇಲ್ ವೃತ್ತದಿಂದ ಸೂಪರ್ ಮಾರ್ಕೆಟ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿರುವ ಡಿಸಿ ಕಚೇರಿ ಪಕ್ಕದಲ್ಲೇ ಇರುವ ನೃಪತುಂಗ ನಗರ ಸಾರಿಗೆ ಸಿಟಿ ಬಸ್ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ವಾರಸುದಾರರಿಲ್ಲದ ಬ್ಯಾಗ್ ಪತ್ತೆಯಾಗಿ ಕೆಲಗಂಟೆಗಳ ಕಾಲ ಆತಂಕ ಹುಟ್ಟುಹಾಕಿತ್ತು.ಮಧ್ಯಾಹ್ನ 1ರ ಸುಮಾರಿಗೆ ಡಿಸಿ ಕಚೇರಿ ಎದುರುಗಡೆ ಎಸ್‌ವಿಪಿ ಸರ್ಕಲ್‌ನಿಂದ ಮಾರ್ಕೆಟ್ ಕಡೆಗೆ ಬರುವ ರಸ್ತೆಯಲ್ಲಿ ಇರುವ ಬಸ್ ಸ್ಟ್ಯಾಂಡ್ ನಲ್ಲಿ ವಾರಸುದಾರರಿಲ್ಲದ ಒಂದು ಬ್ಯಾಕ್ ಪ್ಯಾಕ್ ಬ್ಯಾಗ್ ಇದ್ದಿದ್ದನ್ನು ಗಮನಿಸಿದ ಸಾರ್ವಜನಿಕರು ಟ್ರಾಫಿಕ್ ಏಎಸ್‌ಐ ಸಿಕಂದರ್ ಖಾನ್ ರವರ ಗಮನಕ್ಕೆ ತಂದರು.
ಸುದ್ದಿ ತಿಳಿದ ತಕ್ಷಣವೇ ಅವರು ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದು, ತಕ್ಷಣ ಬಾಂಬ್ ನಿರೋಧಕ ದಳ ಸಮೇತ ಪೊಲೀಸ್ ಪಡೆ ಅಲ್ಲಿಗೆ ಧಾವಿಸಿ, ಬ್ಯಾಗ್ ಪರಿಶೀಲನೆ ನಡೆಸಿತು. ಸದರಿ ಬ್ಯಾಗಲ್ಲಿ ಯಾವುದೇ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.ಎಸಿಪಿ ಸಿಎಆರ್ ಸರ್ದಾರ್ ನೇತೃತ್ವದಲ್ಲಿ ನಡೆದ ಪರಿಶೀಲನೆಯಲ್ಲಿ ಬ್ಯಾಗ್ ವಶಕ್ಕೆ ಪಡೆದು ಅದನ್ನು ಸ್ಟೇಷನ್ ಬಜಾರ್ ಠಾಣೆ ಪಿಎಸ್‌ಐ ಹಣಮಂತರಾಯ ರವರ ಸುಪರ್ದಿಗೆ ನೀಡಲಾಯ್ತು.
ಬ್ಯಾಗನಲ್ಲಿ ಮಾಕ್ಸ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿಗಳು ದೊರಕಿದ್ದು, ಅವು ಜೇವರ್ಗಿ ತಾಲೂಕಿನ ನಿವಾಸಿಗಳದ್ದಾಗಿದೆ ಎಂದು ಪತ್ತೆಯಾಗಿದೆ. ಈ ಬ್ಯಾಗ್ ಆ ವ್ಯಕ್ತಿಗೆ ತಲುಪಿಸಲಾಗುತ್ತದೆ ಎಂದು ನಗರ ಪೊಲೀಸ್ ಮೂಲಗಳು ಹೇಳಿವೆ.