ನಿಜ ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡಿದವರೆ. ಆದರೆ, ಮಾಡಿದ ಚಿಕ್ಕ ತಪ್ಪುಗಳು ಕಲಿಕೆ ಮತ್ತು ಜೀವನ ಸುಧಾರಣೆಗೆ ಮೆಟ್ಟಿಲಾಗಬೇಕು ಎಂದು ಮನ್ವಂತರ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಿಜ ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡಿದವರೆ. ಆದರೆ, ಮಾಡಿದ ಚಿಕ್ಕ ತಪ್ಪುಗಳು ಕಲಿಕೆ ಮತ್ತು ಜೀವನ ಸುಧಾರಣೆಗೆ ಮೆಟ್ಟಿಲಾಗಬೇಕು ಎಂದು ಮನ್ವಂತರ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಹೇಳಿದರು.

ಮನ್ವಂತರ ಮಹಿಳಾ ಮಂಡಳದಿಂದ ಶಿವಮೊಗ್ಗ ಜಿಲ್ಲಾ ಮಹಿಳಾ ಕಾರಾಗೃಹದಲ್ಲಿ ಆಯೋಜಿಸಿದ್ದ ‘ಯುಗಾದಿ ಹಬ್ಬ ಸಂಭ್ರಮ ಮತ್ತು ಮಹಿಳೆ- ಜೀವನ ಮೌಲ್ಯಮಾಪನ’ ಎಂಬ ವಿಷಯ ಕುರಿತು ಮಾತನಾಡಿ, ತಪ್ಪು ಎನ್ನುವುದು ಕತ್ತಲೆಯ ಕೂಪದಂತೆ. ಅಸೂಯೆ, ಮಹತ್ವಾಕಾಂಕ್ಷೆ, ದುರಾಸೆ, ಕಾಮುಕತೆ, ಅಸುರಕ್ಷಾ ಭಾವ, ಅಧಿಕಾರದ ಅಪೇಕ್ಷೆ, ಕ್ರೋಧ, ಲೋಭ ಇತ್ಯಾದಿ ನಕಾರಾತ್ಮಕ ನಡವಳಿಕೆಗಳೇ ತಪ್ಪುಗಳು ಆಗಲು ಕಾರಣ. ತಪ್ಪಿನ ನಂತರದಲ್ಲಿಯೂ ಆತ್ಮವಲೋಕನಗೈದಾಗ ಒಂದಷ್ಟು ನಿರುಮ್ಮಳತೆ ಆವರಿಸುವುದು ಜೀವನ ಸಾಕ್ಷಿ ಆಗಬೇಕು ಎಂದರು.

ಆತ್ಮಾವಲೋಕನ ನಮ್ಮನ್ನು ನಾವು ನೋಡಿಕೊಳ್ಳುವುದು. ಆತ್ಮ ಶಾಶ್ವತವಾದದ್ದು, ಅಚಲವಾದ ಚೈತನ್ಯ ಮತ್ತು ಜಾಗೃತ ಸ್ಥಿತಿ. ಆತ್ಮ ಸಾಕ್ಷಿ ನಮ್ಮ ಪ್ರಜ್ಞೆಯೇ ಆಗಿದ್ದು, ಮನಸ್ಸು ಧನಾತ್ಮಕ ಚಿಂತನೆಯಲ್ಲಿ ಇದ್ದಾಗ ಇವೆರಡರ ಸಾಮರಸ್ಯದಿಂದ ಶಾಂತಿ, ತೃಪ್ತಿ, ಸುಖ, ಸಂತಸ ಲಭಿಸುತ್ತದೆ ಎಂದು ಹೇಳಿದರು.

ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಪಿ. ಭವ್ಯ ಮಾತನಾಡಿ, ಮನಸ್ಸು, ತಪ್ಪಿತಸ್ಥ ಭಾವನೆಯಿಂದ ಹೊರಬರಲು ನಾಲ್ಕು ಅವಶ್ಯಕ ಮಂತ್ರಗಳನ್ನು ಜಪಿಸಬೇಕು. ಮೊದಲನೆಯದು: ಆತ್ಮಾವಲೋಕನ: ಅಪರಾಧ ಮಾಡಲು ಕಾರಣ, ಪರಿಣಾಮ ಇದರಿಂದ ಮುಕ್ತವಾಗಿ ಹೊರಬರಲು ಮನದಲ್ಲಿ ಮೂಡಬೇಕಾದ ಸಹನೆ, ಸಕಾರಾತ್ಮಕತೆ, ಸಹಿಷ್ಣತೆ, ಸೃಜನಶಿಲತೆ. ಎಡನೆಯದು: ಸ್ವ-ಸಹಾನುಭೂತಿ. ಆತ್ಮಾವಲೋಕನದಿಂದ ಜಾಗೃತವಾದ ಚರ್ಯೆಗಳಿಂದ ಧ್ಯಾನದಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಮನಸ್ಥಿತಿಯನ್ನು ಸಹಜಗೊಳಿಸಿ ಸಹಾನುಭೂತಿಯಾಗಿ ಪರಿವರ್ತಿಸಿಕೊಳ್ಳುವುದು. ಮೂರನೆಯದು: ನಡವಳಿಕೆಗಳಲ್ಲಿ ತಿದ್ದುಪಡಿ: ಮಾಡಿದ ಅಪರಾಧಗಳಿಂದ ಇತರರಿಗೆ ನೋವುಂಟಾಗಿದ್ದರೆ ಅದನ್ನು ಸರಿಪಡಿಸುವ ವಿಧಾನಗಳನ್ನು ನಡವಳಿಕೆಗಳಲ್ಲಿ ಅಳವಡಿಸಿಕೊಂಡು ಸದ್ಭಾವನೆಯ ಅಂಶಗಳನ್ನು ಬೆಳೆಸಿಕೊಳ್ಳುವುದು. ನಾಲ್ಕನೆಯದು ಸೂಕ್ತ ಚಿಕಿತ್ಸೆ: ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿಕೊಂಡು ಭಾವನಾತ್ಮಕ, ದೈಹಿಕ ಬೆಂಬಲ ಪಡೆದು ಮನಸ್ಸನ್ನು ಸಹಜಸ್ಥಿತಿಯತ್ತ ಕೊಂಡೊಯ್ಯುವುದು. ಈ ಎಲ್ಲದಕ್ಕೂ ಈ ನಿವಾಸದಲ್ಲಿ ಸಾಧ್ಯವಿದೆ. ಅದನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ನೆಮ್ಮದಿ ಪಡೆಯಿರಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭ ಮನ್ವಂತರದಿಂದ ಕಾರಾಗೃಹದ ಅಧೀಕ್ಷಕರು ಭವ್ಯ, ಶಿಕ್ಷಕಿ ಅಂಬಿಕಾ ಅವರನ್ನು ಗೌರವಿಸಲಾಯಿತು.

ಮನ್ವಂತರದ ಕಾರ್ಯದರ್ಶಿ ಆಶಾಪ್ರಕಾಶ್ ವಂದಿಸಿದರು. ಸದಸ್ಯರಾದ ವಾರಿಜಾ ರಾಮಾಚಾರ್, ರಾಧಿಕಾ ಜೋಯ್ಸ್, ನೇತ್ರಾವತಿ ಮಂಜುನಾಥ್, ಗಂಗಾಂಭಿಕಾ, ಪ್ರವೀಣಾ, ನವನೀತಾ ಇತರರು ಹಾಜರಿದ್ದರು.