ಭಾರೀ ಗಾಳಿ ಮಳೆಗೆ ನೆಲಕ್ಕೊರಗಿದ ಬಾಳೆ

| Published : May 23 2024, 01:06 AM IST

ಸಾರಾಂಶ

ಜಿಲ್ಲೆಯಲ್ಲಿ ತುಂಡು ಭೂಮಿಗಳನ್ನು ಹೊಂದಿದ ರೈತರು ಹೆಚ್ಚಾಗಿದ್ದಾರೆ. ಅರ್ಧ ಎಕರೆ, ಕಾಲು ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆಯುತ್ತಿದ್ದಾರೆ.

ಹೊಸಪೇಟೆ: ವಿಜಯನಗರ ಜಿಲ್ಲಾದ್ಯಂತ ಈಚೆಗೆ ಸುರಿದ ಭಾರೀ ಗಾಳಿ-ಮಳೆಗೆ ನೂರಾರು ಎಕರೆ ಬಾಳೆಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಗಾಳಿ ಹೊಡೆತಕ್ಕೆ ಬಾಳೆ ನೆಲಕಚ್ಚಿದ್ದು, ಪರಿಹಾರಕ್ಕಾಗಿ ರೈತರು ಆಗ್ರಹಿಸುತ್ತಿದ್ದಾರೆ.

ತುಂಗಭದ್ರಾ ಜಲಾಶಯ ನೆಚ್ಚಿಕೊಂಡು ಈ ಭಾಗದ ರೈತರು ಸುಗಂಧಿ, ಏಲಕ್ಕಿ, ಸಕ್ಕರೆ ಬಾಳೆ ಬೆಳೆದಿದ್ದಾರೆ. ಈ ಬಾರಿ ದೊರೆತ ಅಲ್ಪ ನೀರಿನಲ್ಲೇ ಬಾಳೆ ಬೆಳೆ ಜೋಪಾನ ಮಾಡಿದ್ದರು. ಆದರೆ, ಗಾಳಿ ರಭಸಕ್ಕೆ ಈಗ ಫಸಲು ನೆಲದ ಪಾಲಾಗಿದೆ.

ಮಾನದಂಡ ಬದಲಾಗಲಿ: ಜಿಲ್ಲೆಯಲ್ಲಿ ತುಂಡು ಭೂಮಿಗಳನ್ನು ಹೊಂದಿದ ರೈತರು ಹೆಚ್ಚಾಗಿದ್ದಾರೆ. ಅರ್ಧ ಎಕರೆ, ಕಾಲು ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆಯುತ್ತಿದ್ದಾರೆ. ಓರ್ವ ರೈತನ ಭೂಮಿಯಲ್ಲಿ ಹಾನಿಯಾದ 500 ಬಾಳೆ ಗಿಡಗಳಿಗೆ ಮಾತ್ರ ಪರಿಹಾರ ನೀಡಲು ಸಮೀಕ್ಷೆ ಮಾಡಿದ್ದಾರೆ. ಇದರಿಂದ ತುಂಡು ಭೂಮಿಯ ರೈತ ತನ್ನ ಭೂಮಿಯಲ್ಲಿ ಕೇವಲ 200ರಿಂದ 300 ಬಾಳೆ ಗಿಡಗಳನ್ನು ಬೆಳೆದಿರುತ್ತಾನೆ. ಅಂತಹ ರೈತರಿಗೆ ಪರಿಹಾರದಿಂದ ದೂರ ಇಟ್ಟರೆ ಹೇಗೆ? ಇದೊಂದು ಅವೈಜ್ಞಾನಿಕ ಪದ್ಧತಿಯಾಗಿದೆ. ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ.

ಬಾಳೆ ಬೆಳೆಯನ್ನು 12ರಿಂದ 14 ತಿಂಗಳ ಕಾಲ ಮಗುವಿನಂತೆ ಸಾಕಬೇಕಿದೆ. ಹತ್ತಾರು ತಿಂಗಳು ಕಷ್ಟಪಟ್ಟು ಬೆಳೆದ ಬೆಳೆ ಒಂದೇ ಒಂದು ಗಾಳಿ-ಮಳೆಗೆ ನೆಲಕಚ್ಚಿದೆ. ಇದರಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಳೆಯನ್ನು ಪೋಷಿಸಿದ ರೈತರು ಫಸಲು ಕೈಗೆ ಬರುವ ಹೊತ್ತಿಗೆ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 3,800 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಾಳೆ ಬೆಳೆಯುತ್ತಿದ್ದಾರೆ. ಆದರೆ, ಭಾರೀ ಗಾಳಿ-ಮಳೆಗೆ ಬೆಳೆಗೆ ಹಾನಿಯಾಗಿದೆ. ಎಕರೆಗೆ ₹50 ಸಾವಿರ ಪರಿಹಾರ ಒದಗಿಸಬೇಕು ಎಂಬುದು ರೈತರ ಬೇಡಿಕೆ.

ಜಿಲ್ಲೆಯಲ್ಲಿ ಬೆಳೆಯುವ ಏಲಕ್ಕಿ, ಸುಗಂಧಿ ಬಾಳೆಗೆ ಎಲ್ಲಿಲ್ಲದ ಬೇಡಿಕೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ಕೇರಳ, ಬಿಹಾರ ಮತ್ತು ಒಡಿಶಾದಲ್ಲಿ ಭಾರಿ ಬೇಡಿಕೆಯಿದೆ. ಆಂಧ್ರ ಹಾಗೂ ತಮಿಳುನಾಡಿನಲ್ಲಿ ಬೆಳೆಯುವ ಬಾಳೆ ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ಹಣ್ಣಾಗಿ ವ್ಯಾಪಾರಸ್ಥರಿಗೆ ನಷ್ಟ ಉಂಟಾಗುತ್ತದೆ. ಆದರೆ, ಇಲ್ಲಿನ ಬಾಳೆ ಮಾರುಕಟ್ಟೆಗೆ ಸಾಗಿಸಿದ ನಾಲ್ಕಾರು ದಿನಗಳ ಬಳಿಕ ಬುಟ್ಟಿಯಲ್ಲಿ ಹಣ್ಣು ಮಾಡಿದರೆ ಮಾತ್ರ ಹಣ್ಣಾಗುತ್ತವೆ. ಇದರಿಂದ ವ್ಯಾಪಾರಸ್ಥರು ಹಾಕಿದ ಬಂಡವಾಳಕ್ಕೆ ನಷ್ಟ ಇಲ್ಲ. ಹಾಗಾಗಿ ಈ ಭಾಗದ ಬಾಳೆಗೆ ಎಲ್ಲಿಲ್ಲದ ಬೇಡಿಕೆ ಇದೆ.

ಕಳೆದು ಎಂಟು ವರ್ಷಗಳಲ್ಲಿ ಹೋಲಿಕೆ ಮಾಡಿದರೆ ಈ ವರ್ಷ ಸುಗಂಧಿ, ಏಲಕ್ಕಿ ಬಾಳೆಗೆ ಉತ್ತಮ ಬೆಲೆ ಇತ್ತು. ಇನ್ನೇನು ಬಾಳೆ ಬೆಳೆ ಕಟಾವು ಮಾಡಿ ಮಾರುಕಟ್ಟೆ ಸಾಗಿಸಬೇಕು ಎಂದುಕೊಂಡಿದ್ದ ರೈತರಿಗೆ ಈಚೆಗೆ ಸುರಿದ ಮಳೆ ಆಘಾತ ನೀಡಿದೆ.

208 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ: ಜಿಲ್ಲೆಯಲ್ಲಿ 208 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಅದರಲ್ಲಿ ಹೆಚ್ಚಾಗಿ 186.60 ಹೆಕ್ಟೇರ್ ಬಾಳೆ ಹಾನಿಯಾಗಿದೆ. ಸುಮಾರು 441 ರೈತರು ಹಾನಿಗೊಳಗಾಗಿದ್ದಾರೆ. ಹಡಗಲಿ 22 ಹೆಕ್ಟೇರ್‌, ಹಗರಿಬೊಮ್ಮನಹಳ್ಳಿ 19.35, ಕೊಟ್ಟೂರು 9.10, ಕೂಡ್ಲಿಗಿ 2.60, ಹರಪನಹಳ್ಳಿ 0.40 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಯಾಗಿದೆ. ಪಪ್ಪಾಯಿ 15 ಎಕರೆ, ವಿಳ್ಯದಲೆ 3.10, ನುಗ್ಗೆ 3.80 ಎಕರೆ ಪ್ರದೇಶದಲ್ಲಿ ಹಾನಿ ಸಂಭವಿಸಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ಹಾನಿಗೊಳಗಾದ ಬಾಳೆ ಬೆಳೆಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ನಮಗೆ ಓಬಿರಾಯನ ಕಾಲದ ಪರಿಹಾರ ನೀಡುವುದನ್ನು ಕೈಬಿಟ್ಟು ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎನ್ನುತ್ತಾರೆ ಹೊಸಪೇಟೆಯ ರೈತ ಮುಖಂಡ ಕಾಳಿದಾಸ.