ಸಾರಾಂಶ
ಜಮೀನಿಗೆ ಹಂದಿ ಬರದಂತೆ ತಡೆಯಲು ಇಡಲಾಗಿದ್ದ ನಾಡ ಸಿಡಿಮದ್ದು ಕಚ್ಚಿದ ಗಂಡು ಕರಡಿ (ಜಾಂಬವ) ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಹೊರೆಯಾಲದ ಜಮೀನಿನಲ್ಲಿ ನಡೆದಿದೆ.
ಗುಂಡ್ಲುಪೇಟೆ: ಜಮೀನಿಗೆ ಹಂದಿ ಬರದಂತೆ ತಡೆಯಲು ಇಡಲಾಗಿದ್ದ ನಾಡ ಸಿಡಿಮದ್ದು ಕಚ್ಚಿದ ಗಂಡು ಕರಡಿ (ಜಾಂಬವ) ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಹೊರೆಯಾಲದ ಜಮೀನಿನಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಅರಣ್ಯ ವ್ಯಾಪ್ತಿಯ ಹೊರೆಯಾಲದ ರೈತ ಮಹದೇವಸ್ವಾಮಿಗೆ ಸೇರಿದ ಕಬ್ಬಿನ ತೋಟದಲ್ಲಿ 7 ವರ್ಷದ ಗಂಡು ಕರಡಿ ಶವ ಪತ್ತೆಯಾಗಿದೆ. ಓಂಕಾರ ವಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್ ಮಾತನಾಡಿ, ಕರಡಿ ಸಿಡಿ ಮದ್ದು ಕಚ್ಚಿದಾಗ ಮುಖ, ಕೈಗೆ ಗಾಯಗೊಂಡ ಬಳಿಕ ಸಾವನ್ನಪ್ಪಿದೆ. ಹಂದಿಗಳ ಬೇಟೆಗೆ ನಾಡ ಸಿಡಿಮದ್ದು ಇಡುವ ಜಾಲವೇ ಇದೆ. ಹಂದಿ ಬೇಟೆಯ ದಂಧೆಕೋರರು ರೈತರಿಗೆ ಗೊತ್ತಿಲ್ಲದೇ ಇಟ್ಟ ನಾಡ ಸಿಡಿ ಮದ್ದು ಕಚ್ಚಿ ಕರಡಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ನಾಡ ಸಿಡಿಮದ್ದು ಇಟ್ಟವರ ಬಗ್ಗೆ ರೈತ ಮಹದೇವಸ್ವಾಮಿ ಮಾಹಿತಿ ನೀಡಬೇಕು. ಇಲ್ಲದಿದ್ದರೆ ರೈತನ ಮೇಲೆ ಕೇಸ್ ದಾಖಲಿಸಬೇಕಾಗುತ್ತದೆ ಎಂದರು.