ಸಾರಾಂಶ
ಗೌಪ್ಯ ಸ್ಥಳಕ್ಕೆ ಸದಸ್ಯರ ಗುಂಪೊಂದು ತೆರಳಲು ಸಿದ್ಧತೆ
ಶಾಸಕ ರಾಘವೇಂದ್ರ ಹಿಟ್ನಾಳ ಚಿತ್ತ ಯಾರತ್ತಕಾದು ನೋಡುತ್ತಿರುವ ಬಿಜೆಪಿ ಸದಸ್ಯರುಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಸದಸ್ಯರ ಪಾಳೆಯದ ತೆರೆಮರೆಯಲ್ಲಿ ಭಾರಿ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದು, ಶಾಸಕ ರಾಘವೇಂದ್ರ ಹಿಟ್ನಾಳ ಅವರ ಚಿತ್ತ ಯಾರತ್ತ ಎನ್ನುವುದು ಭಾರಿ ಕುತೂಹಲವನ್ನುಂಟು ಮಾಡಿದೆ.
29 ಸದಸ್ಯ ಬಲದ ಕೊಪ್ಪಳ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ಇದೆ. ಪಕ್ಷೇತರರು ಕೈಜೋಡಿಸಿರುವುದು ಹಾಗೂ ಶಾಸಕರು ಮತ್ತು ಸಂಸದರ ಮತವೂ ಬರುವುದರಿಂದ ಬಹುಮತದ ಸಮಸ್ಯೆಯೇ ಇಲ್ಲ. ಆದರೆ, ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದೇ ಈಗಿರುವ ಕುತೂಹಲ.ಸದ್ಯಕ್ಕೆ ಇರುವ ಬೆಳವಣಿಗೆಯಲ್ಲಿ ಸದಸ್ಯರಾದ ಮಹೇಂದ್ರ ಛೋಪ್ರಾ, ಅಮ್ಜಾದ್ ಪಟೇಲ್, ಅಜೀಮ್ ಅತ್ತಾರ ಹಾಗೂ ಅರುಣಕುಮಾರ ಅಪ್ಪುಶೆಟ್ಟರ ಅವರ ಹೆಸರು ಪೈಪೋಟಿಯಲ್ಲಿವೆ.
ಇದರಲ್ಲಿಯೂ ಬಣಗಳಾಗಿ ಮಾರ್ಪಾಡಾಗಿದ್ದು, ಪರಸ್ಪರ ಕಾಲೆಳೆಯುವ ಹಾಗೂ ವಿರೋಧ ವ್ಯಕ್ತಪಡಿಸುವ ಗುಂಪುಗಳು ಹುಟ್ಟಿಕೊಂಡಿವೆ. ಹೀಗಾಗಿ, ಯಾರನ್ನು ಮಾಡಬೇಕು ಎನ್ನುವುದು ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ದೊಡ್ಡ ತಲೆನೋವು ಆಗಿದೆ.ಅಮ್ಜಾದ್ ಪಟೇಲ್ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆಯಾದರೂ ಸದಸ್ಯರ ವಲಯದಲ್ಲಿ ಇದರ ವಿರುದ್ಧವೇ ಭಾರಿ ಸಂಚು ನಡೆಯುತ್ತಿದೆ. ಇದಕ್ಕೆ ಪರ್ಯಾಯವಾಗಿ ಅಜೀಮ್ ಅತ್ತಾರ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಸದಸ್ಯರು ಇವರ ಬೆಂಬಲಕ್ಕೆ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸದಸ್ಯರು ಗುಂಪುಗುಂಪಾಗಿ ಜೊತೆಯಾಗಿ ಇರುವ ಮೂಲಕ ಮತ್ತು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಫ್ಲೋಡ್ ಮಾಡುವ ಮೂಲಕ ತಮ್ಮ ಬಲ ಪ್ರದರ್ಶನ ಮಾಡುತ್ತಿದ್ದಾರೆ. ಇದು ಭಾರಿ ಚರ್ಚೆ ಹುಟ್ಟು ಹಾಕುತ್ತಿದೆ. ಸೋಷಲ್ ಮೀಡಿಯಾದಲ್ಲಿ ನಗರಸಭೆ ಅಧ್ಯಕ್ಷರ ಕುರಿತು ಗಂಭೀರ ಚರ್ಚೆ ಸಹ ನಡೆಯುತ್ತಿದೆ.ಶಾಸಕರ ಚಿತ್ತ ಯಾರತ್ತ:
ಶಾಸಕ ರಾಘವೇಂದ್ರ ಹಿಟ್ನಾಳ ಅವರ ಚಿತ್ತ ಯಾರ ಮೇಲೆ ಇದೆ ಎನ್ನುವುದೇ ಸದ್ಯದ ಕುತೂಹಲ. ಇದುವೇ ಫೈನಲ್ ಸಹ ಆಗುತ್ತದೆ. ಯಾರು ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವುದಕ್ಕಿಂತ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಬೆಂಬಲ ಯಾರಿಗೆ ಇದೆ ಎನ್ನುವುದರ ಮೇಲೆಯೇ ನಿರ್ಧಾರವಾಗುತ್ತದೆ.ಈಗಿರುವ ಬೆಳವಣಿಗೆಯ ಪ್ರಕಾರ ಅರುಣಕುಮಾರ ಅಪ್ಪುಶೆಟ್ಟರ ಅವರ ಮೇಲೆಯೇ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಒಲವು ಇದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಅರುಣಕುಮಾರ ಅಪ್ಪುಶೆಟ್ಟರ ಪಕ್ಷೇತರರಾಗಿ ಗೆದ್ದಿದ್ದರೂ ಮೂಲತಃ ಕಾಂಗ್ರೆಸ್ಸಿಗರೇ. ಪಕ್ಷದ ಟಿಕೆಟ್ ಕೈ ತಪ್ಪಿದಾಗ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಜಯ ಸಾಧಿಸಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರ ಬೆಂಬಲವೇ ದೊಡ್ಡ ಪ್ರಮಾಣದಲ್ಲಿ ಇತ್ತು ಎನ್ನುವುದು ಗುಟ್ಟಾಗಿ ಉಳಿದಿರಲಿಲ್ಲ. ಹೀಗಾಗಿ ಈಗ ಇವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವ ಮಾತು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿಬರುತ್ತಿದೆ.
ಪೈಪೋಟಿ:ನಾಲ್ವರು ಸದಸ್ಯರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಪ್ರತಿಯೊಬ್ಬರೂ ತಮ್ಮ ಗುಂಪು ಕಟ್ಟಿಕೊಂಡು ಪ್ರತ್ಯೇಕವಾಗಿ ಸುತ್ತಾಡುತ್ತ, ಬಲಾಬಲ ಪ್ರದರ್ಶಿಸುತ್ತಿದ್ದಾರೆ. ಅರುಣಕುಮಾರ ಅವರ ಜೊತೆಗೆ ಅಮ್ಜಾದ್ ಪಟೇಲ್, ಮಹೇಂದ್ರ ಛೋಪ್ರಾ, ಅಜೀಮ್ ಅತ್ತಾರ ಸಹ ಕಠಿಣ ಸ್ಪರ್ಧೆ ಒಡ್ಡಿದ್ದಾರೆ. ಇದೀಗ ಮೀಸಲಾತಿ ನೊಟಿಫಿಕೇಶನ್ ಜಾರಿಯಾಗುತ್ತಿದ್ದಂತೆ ಗೌಪ್ಯ ಸ್ಥಳಕ್ಕೆ ತೆರಳಲು ಸದಸ್ಯರು ತಯಾರಿ ನಡೆಸಿದ್ದಾರೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷ ಯಾರಾಗುತ್ತಾರೆ ಎನ್ನುವುದರ ಆಧಾರ ಮೇಲೆ ಉಪಾಧ್ಯಕ್ಷ ಸ್ಥಾನ ನಿರ್ಧಾರವಾಗುತ್ತದೆ.