ಶಾಲೆಯ ಆವರಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಿದರೆ ಅದು ಮುಂದಿನ ದಿನಗಳಲ್ಲಿ ನಿಮ್ಮ ನೆನಪಾಗಿ ಉಳಿಯುತ್ತದೆ, ಪರಿಸರ ಮಾಲಿನ್ಯ ತಡೆಗೆ ಗ್ರಾಮ, ಶಾಲೆ ಎಲ್ಲಕಡೆಯೂ ನಿಮ್ಮ ಸೇವೆ ಇರಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ಪರಿಸರ ಸಂರಕ್ಷಣೆಯಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂಬ ಸತ್ಯ ಅರಿತು ಪ್ರತಿಯೊಬ್ಬರೂ ಒಂದೊಂದು ಗಿಡನೆಟ್ಟು ಪೋಷಿಸುವ ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯ ಶಶಿಕುಮಾರ್ ಕರೆ ನೀಡಿದರು.

ತಾಲೂಕಿನ ವೇಮಗಲ್ ಯೋಜನೆ ಕಚೇರಿ ವ್ಯಾಪ್ತಿಯ ವೇಮಗಲ್ ವಲಯದ ಕುರುಗಲ್ ಕಾರ್ಯಕ್ಷೇತ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಉದ್ಘಾಟಿಸಿ ಮಾತನಾಡಿದರು.

ಇಂದು ಪ್ರಕೃತಿಯು ಪ್ಲಾಸ್ಟಿಕ್‌ಮಯವಾಗುತ್ತಿದ್ದು, ಇದರಿಂದ ಅಂತರ್ಜಲಕ್ಕೆ ಮಾರಕವಾಗುತ್ತಿದೆ. ಜಾನುವಾರುಗಳು ಆಹಾರದ ಜತೆ ಪ್ಲಾಸ್ಟಿಕ್ ಸೇರಿ ಅವರು ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಅತ್ಯಂತ ವಿಷಾದಕರ ಎಂದ ಅವರು, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯ ನಿರ್ಮಾಣ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ ಎಂದರು.

ಮನೆಯಿಂದ ಅಂಗಡಿಗೆ ಹೋಗುವಾಗ ಕಡ್ಡಾಯವಾಗಿ ಬಟ್ಟೆ ಚೀಲ ತೆಗೆದುಕೊಂಡು ಹೋಗಲು ನಿಮ್ಮ ಪೋಷಕರಿಗೆ ಸಲಹೆ ನೀಡಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ವಿದ್ಯಾರ್ಥಿ ಸಮುದಾಯ ನೆರವಾಗಬೇಕು, ಮಕ್ಕಳು ಮನಸ್ಸು ಮಾಡಿದರೆ ಪರಿಸರ ಉಳಿಸುವ ಪ್ರಯತ್ನದಲ್ಲಿ ಯಶ ಖಚಿತ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಘು ಮಾತನಾಡಿ, ಯೋಜನೆಯಿಂದ ಪ್ರತಿ ವರ್ಷವೂ ಗಿಡ ನೆಡುವ ಮತ್ತು ಅವುಗಳನ್ನು ಪೋಷಿಸುವ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ, ಶಾಲೆಗಳ ಮಕ್ಕಳಿಗೆ ಪರಿಸರದ ಅರಿವು ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುರುಗಲ್ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಗಂಗಾಧರ್ ಮೂರ್ತಿ, ಶಾಲೆಯ ಆವರಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಿದರೆ ಅದು ಮುಂದಿನ ದಿನಗಳಲ್ಲಿ ನಿಮ್ಮ ನೆನಪಾಗಿ ಉಳಿಯುತ್ತದೆ, ಪರಿಸರ ಮಾಲಿನ್ಯ ತಡೆಗೆ ಗ್ರಾಮ, ಶಾಲೆ ಎಲ್ಲಕಡೆಯೂ ನಿಮ್ಮ ಸೇವೆ ಇರಬೇಕು ಎಂದರು.

ಶುದ್ಧ ಗಾಳಿ, ಶುದ್ಧ ನೀರು ಮನುಷ್ಯನ ಮೂಲಭೂತ ಸೌಕರ್ಯಗಳಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದು ಅದನ್ನು ಉಳಿಸಿ ಬೆಳೆಸಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭಾಗ್ಯಶ್ರೀ, ಬೃಂದಾ, ನವ್ಯ, ಗಜಗೌರಿ, ಗಜೇಂದ್ರ, ಶೇಖರ್, ಕೃಷಿ ಮೇಲ್ವಿಚಾರಕರು, ಮಂಜುನಾಥ್ ಇದ್ದರು.