ಓದುವ ಹವ್ಯಾಸದಿಂದ ಉತ್ತಮ ಜೀವನ

| Published : Dec 15 2023, 01:31 AM IST

ಸಾರಾಂಶ

ಶಾಲೆಯಲ್ಲಿ ನಿರ್ಮಿಸಿರುವ ಗ್ರಂಥಾಲಯ ಅತ್ಯಂತ ಆಕರ್ಷಕವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು, ಉತ್ತಮ ಜ್ಞಾನ ಸಂಪಾದಿಸಿ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು.

ಸಂಡೂರು: ಪ್ರತಿ ಮಗು ಓದುವ ಹವ್ಯಾಸವನ್ನು ಬೆಳೆಸಿಕೊಂಡಲ್ಲಿ ಜೀವನದಲ್ಲಿ ಹಾಕಿಕೊಂಡ ಉತ್ತಮ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಎಸ್. ಆಕಾಶ್ ಅಭಿಪ್ರಾಯಪಟ್ಟರು.

ತಾಲೂಕಿನ ಸುಶೀಲಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಎಸ್‌ಡಬ್ಲ್ಯು ಫೌಂಡೇಶನ್ ವತಿಯಿಂದ ರೂಮ್ ಟು ರೀಡ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಯಲ್ಲಿ ನಿರ್ಮಿಸಿರುವ ಗ್ರಂಥಾಲಯ ಅತ್ಯಂತ ಆಕರ್ಷಕವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು, ಉತ್ತಮ ಜ್ಞಾನ ಸಂಪಾದಿಸಿ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.

ಜೆಎಸ್‌ಡಬ್ಲ್ಯು ಫೌಂಡೇಶನ್ ಅಧಿಕಾರಿ ಹರ್ಷವಧನ್ ನವತೆ ಮಾತನಾಡಿ, ಈಗಾಗಲೆ ೧೪೭೩ ಶಾಲೆಗಳಲ್ಲಿ ಸ್ಥಾಪಿಸಲಾಗಿರುವ ಗ್ರಂಥಾಲಯಗಳಿಂದ ೨.೪ ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ಇಲ್ಲಿನ ಪುಸ್ತಕಗಳು ಮಕ್ಕಳ ಓದಿನ ಮಟ್ಟಕ್ಕೆ ಅನುಗುಣವಾಗಿ ರೂಪಿಸಲಾಗಿದೆ. ಮಕ್ಕಳು ಪಠ್ಯಪುಸ್ತಕಗಳನ್ನಷ್ಟೆ ಓದದೆ, ಗ್ರಂಥಾಲಯದಲ್ಲಿನ ಎಲ್ಲ ಪುಸ್ತಕಗಳನ್ನು ಓದಬೇಕು ಎಂದರು.

ರೂಮ್ ಟು ರೀಡ್ ಇಂಡಿಯಾ ಟ್ರಸ್ಟ್ ನಿರ್ದೇಶಕರಾದ ಪೂರ್ಣಿಮಾ ಗರ್ಗ್ ಮಾತನಾಡಿದರು. ಜೆಎಸ್‌ಡಬ್ಲ್ಯು(ಮೈನ್ಸ್) ಉಪಾಧ್ಯಕ್ಷ ಸುನೀಲ್ ಸಿಂಗ್, ಜೆಎಸ್‌ಡಬ್ಲ್ಯು ಫೌಂಡೇಶನ್ ಸಿಎಸ್‌ಆರ್ ಮುಖ್ಯಸ್ಥರಾದ ಪೆದ್ದಣ್ಣ, ಸವಿತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮಾದೇವಿ(ಆಡಳಿತ) ಹಾಗೂ ಹನುಮಕ್ಕ(ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.