ದೇಶದಲ್ಲಿ ದುಡಿಯುವ ಶ್ರಮ ಜೀವಿಗಳ ಮೇಲೆ ದೊಡ್ಡ ಪೆಟ್ಟು

| Published : May 02 2024, 12:15 AM IST

ಸಾರಾಂಶ

ಕೃಷಿಕರು, ಶ್ರಮಿಕರು, ಮಹಿಳೆಯರು, ಕಾರ್ಮಿಕರು, ದುಡಿಯುವ ಎಲ್ಲ ವರ್ಗದ ಜನತೆ ಈ ದೇಶವನ್ನು ಕಟ್ಟಿ ಉಳಿಸಿದ್ದೇವೆ. ಉಸಿರನ್ನೂ ಕೊಟ್ಟಿದ್ದೇವೆ. ಈ ದೇಶದ ಎಲ್ಲ ಗೌರವ, ಸಂಪನ್ಮೂಲ ಶ್ರಮಿಕರಿಗೆ, ಕಾರ್ಮಿಕರಿಗೆ ಬೆವರನ್ನು ಸುರಿಸಿ ದುಡಿಯುವವರಿಗೆ ಸಲ್ಲಬೇಕು. ಆದರೆ, ಶೇ.20ರಷ್ಟು ಜನರಿಗೆ ಇಡೀ ದೇಶವನ್ನು ಬಲಿಕೊಡುವಂತಹ ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಫಲವಾಗಿ ಕೃಷಿ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಅಪಾಯ ಎದುರಾಗಿದೆ ಎಂದು ರೈತ ನಾಯಕಿ ಸುನಂದಾ ಜಯರಾಂ ಆತಂಕ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಜಿಲ್ಲಾ ಮುದ್ರಣಕಾರರ ಸಂಘದಿಂದ ಮುದ್ರಣ ರಂಗದ ಪಿತಾಮಹ ಜೋಹಾನ್ಸ್ ಗುಟೆನ್ ಬರ್ಗ್ ನೆನಪಿನಲ್ಲಿ ನಡೆದ ಮುದ್ರಣಕಾರರ ದಿನ ಮತ್ತು ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ದುಡಿಯುವ ಶ್ರಮ ಜೀವಿಗಳ ಮೇಲೆ ದೊಡ್ಡ ಪೆಟ್ಟು ಬಿದ್ದು ಶ್ರಮ, ಗಳಿಕೆ, ಸಂಪನ್ಮೂಲ ಕಸಿಯುವ ಕೆಲಸವಾಗುತ್ತಿದೆ ಎಂದು ಎಚ್ಚರಿಸಿದರು.

ಭಾರತದಲ್ಲಿ ಶೇ.80ರಷ್ಟು ಭಾಗ ಕಾರ್ಮಿಕರೇ ಆಗಿದ್ದಾರೆ. ಶೇ.20ರಷ್ಟು ಮಾತ್ರ ಶ್ರಮ ಎಂದರೆ ಏನೆಂದು ಗೊತ್ತಿಲ್ಲದವರಿರಬಹುದು. ರಾಷ್ಟ್ರದಲ್ಲಿ ಕೃಷಿಯನ್ನೇ ಅವಲಂಭನೆ ಮಾಡಿರುವವರೇ ಹೆಚ್ಚು. 90ರ ದಶಕದಲ್ಲಿ ಇಂತಹ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿಕರು, ಶ್ರಮಿಕರು, ಮಹಿಳೆಯರು, ಕಾರ್ಮಿಕರು, ದುಡಿಯುವ ಎಲ್ಲ ವರ್ಗದ ಜನತೆ ಈ ದೇಶವನ್ನು ಕಟ್ಟಿ ಉಳಿಸಿದ್ದೇವೆ. ಉಸಿರನ್ನೂ ಕೊಟ್ಟಿದ್ದೇವೆ. ಈ ದೇಶದ ಎಲ್ಲ ಗೌರವ, ಸಂಪನ್ಮೂಲ ಶ್ರಮಿಕರಿಗೆ, ಕಾರ್ಮಿಕರಿಗೆ ಬೆವರನ್ನು ಸುರಿಸಿ ದುಡಿಯುವವರಿಗೆ ಸಲ್ಲಬೇಕು. ಆದರೆ, ಶೇ.20ರಷ್ಟು ಜನರಿಗೆ ಇಡೀ ದೇಶವನ್ನು ಬಲಿಕೊಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜೋಹಾನ್ಸ್ ಪುಟಿನ್ ಬರ್ಗ್‌ನಂತಹ ವ್ಯಕ್ತಿ ತನ್ನ53ರ ವಯೋಮಾನದಲ್ಲಿ ಮುದ್ರಣ ಮಾಧ್ಯಮವನ್ನು ಸಂಶೋಧಿಸಿದರು. ಇಂದು ಈ ಕ್ಷೇತ್ರದಲ್ಲಿ ಬಳಷ್ಟು ತಾಂತ್ರಿಕತೆ ಬಂದು ವೇಗ ಪಡೆದುಕೊಂಡಿರಬಹುದು. ಆದರೆ, ಮೊದಲು ಅದನ್ನು ಪರಿಚಯಿಸಿದ ವ್ಯಕ್ತಿಗೆ ಗೌರವ ಕೊಡುವುದು ಎಲ್ಲರ ಧರ್ಮವಾಗಿದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ಮನುಷ್ಯ ಜೀವಂತವಿರುವಾಗ ಏನಾದರೊಂದು ಸಾಧನೆ ಮಾಡಬೇಕು. ಇಲ್ಲದಿದ್ದರೆ ಅವನ ಹೆಸರು ಅಳಿಸಿಹೋಗುತ್ತದೆ. ಆದರೆ, ಮುದ್ರಣ ಮಾಧ್ಯಮವೊಂದನ್ನು ಜಗತ್ತಿಗೆ ಪರಿಚಯಿಸಿದ ಜೋಹಾನ್ಸ್ ಗುಟೆನ್ ಬರ್ಗ್ ಅವರನ್ನು ಜಗತ್ತು ಎಲ್ಲಿಯವರೆ ಇರುತ್ತದೋ ಅಲ್ಲಿಯವರೆವಿಗೂ ನೆನಪಿಸಿಕೊಳ್ಳುವಂತಹ ಕಾರ್‍ಯ ಮಾಡಿದ್ದಾರೆ ಎಂದು ಬಣ್ಣಿಸಿದರು.

ಅಕ್ಷರ ಜೋಡಣೆಯಿಂದ ಹಿಡಿದು ಇಂದಿನ ಬಹುವರ್ಣದ ಆಫ್ ಸೆಟ್ ಮುದ್ರಣದ ವರೆಗೆ ಬೆಳವಣಿಗೆಗೆ ಅವರ ಅನ್ವೇಷಣೆ ಮೂಲ. ಇದರಿಂದಾಗಿ ಜನಸಂಖ್ಯೆಯ ಶೇ.5 ರಷ್ಟು ಜನ ಉದ್ಯೋಗ ಪಡೆದಿದ್ದಾರೆ. ಇದಕ್ಕೆ ಜೋಹಾನ್ಸ್ ಗುಟೆನ್ ಬರ್ಗ್ಶ್ರ ಮ ಮಹತ್ತರವಾಗಿದೆ. ಅವರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.

ಇಂದು ವಿಶ್ವದೆಲ್ಲಡೆ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ. ಕಾರ್ಖಾನೆಗಳಲ್ಲಿ ನಾಮಫಲಕಗಳನ್ನು ಹಾಕಿಕೊಂಡು ಕೆಲಸ ಮಾಡುವರಷ್ಟೇ ಕಾರ್ಮಿಕರಲ್ಲ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೆ. ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಪೌರ ಕಾರ್ಮಿಕರು ಕಾರಿನಲ್ಲಿ ಬಂದು ಅವರಿಗೆ ವಹಿಸಿದ ಕೆಲಸವನ್ನು ನಿಗಧಿತ ಅವಧಿಯೊಳಗೆ ಮುಗಿಸಿ ವಾಪಸ್ಸಾಗುತ್ತಾರೆ. ಆದರೆ, ನಮ್ಮಲ್ಲಿ ಇನ್ನೂ ಅಂತಹ ಸ್ಥಿತಿ ಕಂಡಿಲ್ಲ. ದುಡಿಮೆಗೆ ಹಣ ಕೊಡುವವನೇ ಮಾಲೀಕ. ಕಾರ್ಮಿಕರ ಕಾರಣದಿಂದಾಗಿ ಮಾಲೀಕನಾದವನು ಕಾರ್ಮಿಕನಾಗಿಯೂ ಕೆಲಸ ಮಾಡುತ್ತಾನೆ ಎಂದು ವಿವರಿಸಿದರು.

ಯಾವುದೇ ಕ್ಷೇತ್ರದಲ್ಲಿ ಇನ್ನೊಬ್ಬರಿಂದ ದೌರ್ಜನ್ಯ ಉಂಟಾಗುತ್ತೋ, ದುಡಿಮೆಗೆ ಕುತ್ತು ಅಥವಾ ದುಡಿಮೆಗೆ ಸರಿಯಾದ ಸಂಬಳ ಸಿಗುವುದಿಲ್ಲವೋ ಅಂತಹ ಸಂದರ್ಭದಲ್ಲಿ ಬಂಡೇಳುವುದು ಅವಶ್ಯಕ. ಅಮೆರಿಕಾದ ಚಿಕಾಗೋ ನಗರದಲ್ಲಿ 130 ವರ್ಷದ ಹಿಂದೆ ಕಾರ್ಮಿಕರು ಪ್ರಭುತ್ವದ ವಿರುದ್ಧ ಸೆಟೆದು ನಿಂತು ಹೋರಾಟ ಮಾಡಿದ್ದರು. ಅದು ದೊಡ್ಡ ಮಟ್ಟದ ಹೋರಾಟವಾಗಿತ್ತು. ನಂತರದ ದಿನಗಳಲ್ಲಿ ಬಹಳಷ್ಟು ಹೋರಾಟ ನೋಡಿದ್ದೇವೆ. ಈ ರೀತಿ ತನ್ನ ಬಂಡಾಯವನ್ನು ಪ್ರದರ್ಶನ ಮಾಡಬೇಕಾದ ಅನಿವಾರ್‍ಯತೆಯೂ ಎಂದರು.

ಕಾರ್ಮಿಕ ನಿರೀಕ್ಷಕ ಎಂ.ಸ್ವಾಮಿ ಮಾತನಾಡಿ, ಸರ್ಕಾರದಿಂದ ದೊರೆಯುವ ಪಿಎಂಎಸ್‌ವೈ ಯೋಜನೆಯಲ್ಲಿ ಹಣ ತೊಡಗಿಸಿ ಪ್ರಯೋಜನ ಪಡೆಯಬೇಕು. ಅದೇ ರೀತಿ ಈ ಶ್ರಮ್ ಕಾರ್ಡ್‌ನ್ನು ಪಡೆದುಕೊಳ್ಳಬೇಕು. ಇದಕ್ಕೆ ಬೇಕಾದ ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಮುದ್ರಣ ರಂಗದ ಪಿತಾಮಹ ಜೋಹಾನ್ಸ್ ಗುಟೆನ್ ಬರ್ಗ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಹಿರಿಯ ಮುದ್ರಣಕಾರರು ಆದ ಹೊಸಬೂದನೂರಿನ ರಾಜಪ್ಪ, ಮಂಡ್ಯದ ಎಂ.ಆರ್.ನಾರಾಯಣಸ್ವಾಮಿ ಮತ್ತು ಜೆ.ಎ. ಪ್ರಿಂಟರ್ಸ್‌ನ ಕೆ.ನಾಗರಾಜು ಇವರುಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಮುದ್ರಣಕಾರರ ಸಂಘದ ಸದಸ್ಯತ್ವ ಹೊಂದಿದ ಸದಸ್ಯರುಗಳಿಗೆ ಉಚಿತ ಅಪಘಾತ ವಿಮೆ ಸೌಲಭ್ಯಕ್ಕೆ ನೋಂದಣಿ ಮಾಡಿಕೊಳ್ಳಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಜೆ.ಲಕ್ಷ್ಮಿನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್‌ಕುಮಾರ್, ಮುದ್ರಣಕಾರರ ಸಂಘದ ರಾಜ್ಯ ಸಂಚಾಲಕ ಎಂ.ಎಸ್. ಸತೀಶ್, ಸಂಘದ ಗೌರವಾಧ್ಯಕ್ಷ ಎಂ.ಎಸ್. ಶಿವಪ್ರಕಾಶ್ , ರವೀಂದ್ರ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯಬೇಕು. ಲಿಂಗ ಆಧಾರದ ಮೇಲೆ ತಾರತಮ್ಯ ನಿಲ್ಲಬೇಕು. ಕಾರ್ಮಿಕರಿಗೆ ವಿಮೆ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ನಿವೇಶನ ನೀಡಬೇಕು. ಮುದ್ರಣಕಾರರ ಸಂಘ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಸಂಘವನ್ನು ಯಶಸ್ವಿಯಾಗಿ ನಡೆಸಬೇಕು. ಸಂಘ ಬೆಳೆದರೆ ತಂತಾನೇ ಎಲ್ಲರೂ ಬೆಳೆಯುತ್ತಾರೆ.

- ಡಾ.ಎಚ್.ಎಸ್.ಮುದ್ದೇಗೌಡ, ವಿಶ್ರಾಂತ ಪ್ರಾಧ್ಯಾಪಕಇತ್ತೀಚಿನ ದಿನಗಳಲ್ಲಿ ಎಲ್ಲದ್ದಕ್ಕೂ ಒಂದೊಂದು ದಿನಾಚರಣೆಯನ್ನಾಗಿ ಘೋಷಿಸಿ ಆಚರಿಸುತ್ತಿರುವುದ ಸರಿಯಲ್ಲ. ಇಂತಹ ಆಚರಣೆಯಿಂದ ಅವರ ಆಶಯ, ತತ್ವ, ಸಿದ್ಧಾಂತ, ಮಹತ್ವ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹಾಗೇ, ಎಲ್ಲದ್ದಕ್ಕೂ ಇತಿ, ಮಿತಿ ಇರಬೇಕು. ಇಲ್ಲದಿದ್ದರೆ ಸ್ವಾತಂತ್ರ್ಯ ಹೋಗಿ ಸ್ವೇಚ್ಚಾಚಾರ ಹೆಚ್ಚಾಗುತ್ತದೆ. ಮೊದಲು ಇದನ್ನು ತಿಳಿಯಬೇಕು.

- ಸುನಂದಾ ಜಯರಾಂ, ರೈತ ನಾಯಕಿ