ಭೂಮಿಯ ಸಂರಕ್ಷಣೆ ಜಗತ್ತಿನ ಅತಿ ತುರ್ತು: ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್

| Published : May 02 2024, 12:15 AM IST

ಭೂಮಿಯ ಸಂರಕ್ಷಣೆ ಜಗತ್ತಿನ ಅತಿ ತುರ್ತು: ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿಯ ಸಂರಕ್ಷಣೆ ಜಗತ್ತಿನ ಅತಿ ತುರ್ತಾಗಿದೆ ಎಂದು ಸಾಹಿತಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು. ಹಾಸನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭೂ ದಿನಾಚರಣೆಯಲ್ಲಿ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಭೂ ದಿನಾಚರಣೆ । ಗಿಡ ಬೆಳೆಸಿದಾಗ ಮಾತ್ರ ಸಮೃದ್ಧಿ

ಕನ್ನಡಪ್ರಭ ವಾರ್ತೆ ಹಾಸನ

ಅರಣ್ಯ ನಾಶ, ಪರಿಸರ ಮಾಲಿನ್ಯ, ಹವಾಮಾನ ಏರಿಕೆ, ಪ್ರಕೃತಿ ವಿಕೋಪಗಳಂತಹ ಬಹುದೊಡ್ಡ ಸಮಸ್ಯೆಗಳು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವ ಸಂದರ್ಭದಲ್ಲಿ ವಿಶ್ವ ಭೂ ದಿನಾಚರಣೆ ಬಹಳ ಮಹತ್ವದ್ದಾಗಿದೆ. ಭೂಮಿಯ ಸಂರಕ್ಷಣೆ ಜಗತ್ತಿನ ಅತಿ ತುರ್ತಾಗಿದೆ ಎಂದು ಸಾಹಿತಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ತಾಲೂಕು ಘಟಕ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಹಾಗೂ ಏಕಲವ್ಯ ರೋವರ್ ಮುಕ್ತದಳ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭೂ ದಿನಾಚರಣೆಯಲ್ಲಿ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ‘ಪ್ರಕೃತಿ ಮಾನವನ ಅವಶ್ಯಕತೆಗಳನ್ನು ಈಡೇರಿಸುತ್ತದೆಯೇ ಹೊರತು ದುರಾಸೆಗಳನ್ನಲ್ಲ. ಭೂಮಿಯ ಮೇಲಿನ ಸಕಲ ಜೀವಜಂತುಗಳು ಉತ್ತಮ ರೀತಿಯಲ್ಲಿ ಬದುಕಬೇಕಾದರೆ ಇಲ್ಲಿನ ಪ್ರಕೃತಿ ಬಹಳ ಮುಖ್ಯ. ಪ್ರಕೃತಿಯನ್ನು ಉಳಿಸಿ, ಬೆಳೆಸಬೇಕಾದುದು ಎಲ್ಲರ ಕರ್ತವ್ಯ. ಭೂಮಿಯನ್ನು ಸಾಧ್ಯವಾದಷ್ಟು ಹಸಿರಾಗಿಟ್ಟರೆ, ಗಿಡಮರಗಳನ್ನು ಬೆಳೆಸಿದರೆ ಮಾತ್ರ ಸಮೃದ್ಧಿಯ ಬದುಕು ಸಾಧ್ಯ’ ಎಂದು ಹೇಳಿದರು.

ವಿಶ್ವ ಭೂದಿನ ಕೇವಲ ಏಪ್ರಿಲ್ ಮಾಹೆಗಷ್ಟೇ ಸೀಮಿತಗೊಳ್ಳದೆ ವರ್ಷವಿಡೀ ಜಾಗೃತಿಯನ್ನು ಮೂಡಿಸುವಂತಾಗಬೇಕು. ಈ ಮೂಲಕ ಜಗತ್ತನ್ನು ಉತ್ತಮೀಕರಿಸಲು ಒಂದು ಅವಕಾಶ ದೊರಕಿದಂತಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸಹ ಪ್ರಕೃತಿಯ ಉಳಿವಿಗಾಗಿ ಕಾರ್ಯೋನ್ಮುಖರಾಗಬೇಕಿದೆ. ಭೂಮಾಲಿನ್ಯವನ್ನು ನಿಯಂತ್ರಣಗೊಳಿಸಬೇಕಿದೆ. ಭೂಮಿತಾಯಿಗೆ ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸುವ ಮೂಲಕ ಹಸಿರುಡುಗೆಯನ್ನು ತೊಡಿಸಬೇಕಿದೆ ಎಂದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ ಮಾತನಾಡಿ, ‘ಪರಿಸರ ವ್ಯವಸ್ಥೆಗಳು ನಮಗೆ ಶುದ್ಧ ಗಾಳಿ, ನೀರು, ಮತ್ತು ವೈವಿದ್ಯಮಯ ಸಸ್ಯ ಹಾಗೂ ಪ್ರಾಣಿಗಳ ಜೀವನಗಳನ್ನು ವ್ಯವಸ್ಥಿತ ರೂಪದಲ್ಲಿ ಕೊಂಡೊಯ್ಯುತ್ತದೆ. ನಮ್ಮಂತೆ ಭೂಮಿಯ ಆರೋಗ್ಯವೂ ಸಹ ಬಹಳ ಮುಖ್ಯ. ನಾವು ಅನಾರೋಗ್ಯಕ್ಕೆ ತುತ್ತಾದಾಗ ಹೇಗೆ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಗುಣವಾಗುತ್ತೇವೋ ಹಾಗೆಯೇ ಭೂಮಿಗೆ ಆದ ಮಾಲಿನ್ಯ, ಗಣಿಗಾರಿಕೆ, ಮರುಭೂಮೀಕರಣ, ಅರಣ್ಯ ನಾಶ ಹೀಗೆ ಅನೇಕ ಸಮಸ್ಯೆಗಳಿಂದ ಭೂತಾಯಿಯನ್ನು ಸಂರಕ್ಷಿಸಬೇಕಿದೆ’ ಎಂದು ಸಲಹೆ ನೀಡಿದರು.

ಏಕಲವ್ಯ ರೋರ್ಸ್‌ ಮುಕ್ತದಳದ ನಾಯಕ ಆರ್.ಜಿ.ಗಿರೀಶ್, ‘ಯುವಜನರು ಪರಿಸರ ಕಾಳಜಿ ಹೊಂದಲು ವಿಶ್ವ ಭೂ ದಿನ ಒಂದು ಉತ್ತಮ ಅವಕಾಶ ನೀಡುತ್ತದೆ. ನಮ್ಮ ಭವಿಷ್ಯವನ್ನು ನಾವು ಸುಂದರವಾಗಿ ಇಟ್ಟುಕೊಳ್ಳಬೇಕಾದರೆ ಪ್ರಕೃತಿಯ ಸೊಬಗನ್ನು ವೃದ್ಧಿಸಿಕೊಳ್ಳಬೇಕಿದೆ’ ಎಂದರು.

ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ, ಜಿಲ್ಲಾ ಮುಖ್ಯ ಆಯುಕ್ತ ಡಾ ವೈ.ಎಸ್.ವೀರಭದ್ರಪ್ಪ, ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ್, ತಾಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ಮಹಿಳಾ ಕಾರ್ಯದರ್ಶಿ ಪದ್ಮಾವತಿ ವೆಂಕಟೇಶ್, ಸಮಾಜ ಸೇವಕಿ ಭಾನುಮತಿ, ಕವಯಿತ್ರಿ ಗಿರಿಜಾ ನಿರ್ವಾಣಿ, ಪೋಷಕ ರಾಮಭದ್ರಯ್ಯ, ಎಎಸ್‌ಒಸಿ ಪ್ರಿಯಾಂಕ ಎಚ್.ಎಂ., ಶಿಬಿರಾರ್ಥಿಗಳು ಹಾಜರಿದ್ದರು.