ಸಾರಾಂಶ
ಜಿಲ್ಲೆಯಾದ್ಯಂತ ನೀರಾವರಿಗೆ ಒತ್ತು ನೀಡುವಂತೆ ಹಾಗೂ ಕೃಷಿಗೆ ಸಂಬಂಧಪಟ್ಟ ಸಮಸ್ಯೆಗಳನ್ನ ಶೀಘ್ರವಾಗಿ ಬಗೆಹರಿಸುವಂತೆ ಒತ್ತಾಯಿಸಿ ಅ. 6ರಂದು ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ಜಿಲ್ಲೆಯಾದ್ಯಂತ ನೀರಾವರಿಗೆ ಒತ್ತು ನೀಡುವಂತೆ ಹಾಗೂ ಕೃಷಿಗೆ ಸಂಬಂಧಪಟ್ಟ ಸಮಸ್ಯೆಗಳನ್ನ ಶೀಘ್ರವಾಗಿ ಬಗೆಹರಿಸುವಂತೆ ಒತ್ತಾಯಿಸಿ ಅ. 6ರಂದು ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ತಿಳಿಸಿದರು.ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಚಾಮರಾಜನಗರ ಜಿಲ್ಲೆಯಾದ್ಯಂತ ಕೃಷಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಗೆಹರಿಸಬೇಕು. ಜೊತೆಗೆ ಕಾವೇರಿ ಕಬಿನಿ ನದಿ ಮೂಲಗಳಿಂದ ಏತ ನೀರಾವರಿ ಸೇರಿದಂತೆ ಸಮರ್ಪಕವಾಗಿ ಕಾಲುವೆಗಳ ಮುಖಾಂತರ ನೀರು ಹರಿಸಬೇಕು. ಈ ಉದ್ದೇಶವನ್ನು ಇಟ್ಟುಕೊಂಡು ಬೈಕ್ ರ್‍ಯಾಲಿ ಚಳವಳಿಯನ್ನು ರಾಮಾಪುರದಿಂದ ಪ್ರಾರಂಭ ಮಾಡಿ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ರೈತರು ರ್‍ಯಾಲಿಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.ಏತ ನೀರಾವರಿ ಕಲ್ಪಿಸಿ:ಚಾಮರಾಜನಗರ ಜಿಲ್ಲೆಯಾದ್ಯಂತ ಅದರಲ್ಲೂ ಹನೂರು ವಿಭಾಗದಲ್ಲಿ ಕುಡಿಯುವ ನೀರು ಸೇರಿದಂತೆ ವ್ಯವಸಾಯಕ್ಕೂ ಕೂಡ ತುಂಬಾ ಕಷ್ಟ ಪಡಬೇಕಾದ ಅನಿವಾರ್ಯತೆ ಇದೆ. ಸ್ಥಳೀಯವಾಗಿ ಎರಡು ಮೂರು ಕಿಲೋಮೀಟರ್ ಅಂತರದಲ್ಲೇ ಕಾವೇರಿ ನದಿ ಹರಿಸುತ್ತಿದ್ದರು. ಕುಡಿಯುವ ನೀರಿಗಾಗಿ ಪರಿತಪಿಸುವ ಕಾಲ ಬಂದಿದೆ. ಹಾಗಾಗಿ ಏತ ನೀರಾವರಿ ಮೂಲಕ ನಮ್ಮ ಭಾಗದ ಜನರಿಗೆ ಕುಡಿಯಲು ಹಾಗೂ ಕೃಷಿಗೆ ನೀರು ಒದಗಿಸಬೇಕು ಎಂದು ತಿಳಿಸಿದರು.
ಹುಲಿ ಸಂರಕ್ಷಣ ಯೋಜನೆ ಖಂಡನೀಯ:ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಣಾ ಯೋಜನೆಗೆ ಸೇರಿಸಲು ಕೆಲಸಗಳು ನಡೆಯುತ್ತಿರುವುದು ದುರದುಷ್ಟಕರ. ಈ ಭಾಗದ ರೈತರಿಗೆ ಅರಣ್ಯ ಕಾಯ್ದೆಗಳಿಂದ ದಿನನಿತ್ಯದ ಕೆಲಸಗಳಿಗೆ ಅಡ್ಡಿ ಉಂಟಾಗುವ ಸಂಭವ ಇದೆ. ಆದ್ದರಿಂದ ಹುಲಿಯೋಜನೆಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಗೌಡ, ಮಹಿಳಾ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂಂಗುಡಿ, ತಾಲೂಕು ಮಹಿಳಾ ರೈತ ಸಂಘದ ಅಧ್ಯಕ್ಷ ರಾಜಮ್ಮಣಿ, ತಾಲೂಕು ಸಂಘದ ಉಪಾಧ್ಯಕ್ಷ ಪಳನಿ ಸ್ವಾಮಿ, ಗೌರವ ಅಧ್ಯಕ್ಷ ರಾಜಣ್ಣ, ಕೂಡಲೂರು ವೆಂಕಟೇಶ್, ಪಾಲಿಮೇಡು ಮಣಿ, ವೇಲು ಸ್ವಾಮಿ ತವ ಮಣಿ, ಪಳನಿ ಸ್ವಾಮಿ ಇನ್ನಿತರರು ಇದ್ದರು.