ಉಚಿತ ಸರ್ವೀಸ್‌ ಪಡೆಯದ ಬೈಕ್‌ಗೆ ವಾರಂಟಿ ಸಿಗದು!

| Published : Apr 01 2024, 12:47 AM IST / Updated: Apr 01 2024, 06:25 AM IST

BMW M 100R Bike

ಸಾರಾಂಶ

ಹೊಸ ಬೈಕ್ ಖರೀದಿಸಿದ ಬಳಿಕ ಬೈಕ್ ಕಂಪನಿ/ಡೀಲರ್ ಕಡೆಯಿಂದ ಗ್ರಾಹಕನಿಗೆ ನೀಡಲಾಗುವ ಉಚಿತ ಬೈಕ್ ಸರ್ವಿಸಿಂಗ್ ಸೌಲಭ್ಯವನ್ನು ನಿಗದಿತ ಅವಧಿಯಲ್ಲಿ ಪಡೆದುಕೊಳ್ಳದಿದ್ದರೆ ‘ವಾರಂಟಿ ಕ್ಲೇಮ್’ ಮಾಡಿಕೊಳ್ಳಲಾಗದು ಎಂದು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

 ಬೆಂಗಳೂರು :  ಹೊಸ ಬೈಕ್ ಖರೀದಿಸಿದ ಬಳಿಕ ಬೈಕ್ ಕಂಪನಿ/ಡೀಲರ್ ಕಡೆಯಿಂದ ಗ್ರಾಹಕನಿಗೆ ನೀಡಲಾಗುವ ಉಚಿತ ಬೈಕ್ ಸರ್ವಿಸಿಂಗ್ ಸೌಲಭ್ಯವನ್ನು ನಿಗದಿತ ಅವಧಿಯಲ್ಲಿ ಪಡೆದುಕೊಳ್ಳದಿದ್ದರೆ ‘ವಾರಂಟಿ ಕ್ಲೇಮ್’ ಮಾಡಿಕೊಳ್ಳಲಾಗದು ಎಂದು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ವಾರಂಟಿ ಅವಧಿಯಲ್ಲಿರುವ ಕಾರಣ ಬೈಕ್‌ನ ದೋಷಪೂರಿತ ಸ್ಪೀಡೋಮೀಟರ್ ಬದಲಿಸಿಕೊಡುವಂತೆ ಬೈಕ್‌ ಡೀಲರ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿ ನಗರದ ಪ್ರವೀಣ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವೇದಿಕೆ ವಜಾಗೊಳಿಸಿದೆ.

ಖಾಸಗಿ ಉದ್ಯೋಗಿಯಾಗಿರುವ ಪ್ರವೀಣ್ ಕುಮಾರ್ 2022ರ ಆಗಸ್ಟ್ ತಿಂಗಳಲ್ಲಿ ಯಮಹಾ ಬೈಕ್ ಖರೀದಿಸಿದ್ದರು. ಆದರೆ, ಬೈಕ್‌ನ ಸ್ಪೀಡೋಮೀಟರ್‌ನಲ್ಲಿ ದೋಷ ಕಾಣಿಸಿಕೊಂಡ ಕಾರಣ ಬದಲಿಸಿಕೊಡುವಂತೆ ಡೀಲರ್‌ ಬಳಿ ಕೋರಿದ್ದರು. ಆದರೆ, ಮನವಿಯನ್ನು ಡೀಲರ್ ತಿರಸ್ಕರಿಸಿದ ಕಾರಣ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ವೇದಿಕೆ ಎದುರು ಹಾಜರಾದ ಬೈಕ್ ಡೀಲರ್ ಪ್ರತಿನಿಧಿ, ಬೈಕ್ ಖರೀದಿಸಿದ ವ್ಯಕ್ತಿಯು ಕಂಪನಿಯಿಂದ ನೀಡಲಾಗುವ ಉಚಿತ ಸರ್ವಿಸಿಂಗ್ ಸೇವೆಗಳನ್ನು ಪಡೆದುಕೊಂಡಿಲ್ಲ. ಅಲ್ಲದೇ, ಕೇಬಲ್, ಎಲೆಕ್ಟ್ರಿಕಲ್ ವೈರಿಂಗ್, ಎಲೆಕ್ಟ್ರಿಕಲ್ ಸಾಮಗ್ರಿಗಳು ವಾರಂಟಿ ವ್ಯಾಪ್ತಿಗೆ ಬರುವುದಿಲ್ಲ ಎಂದ ವಾರಂಟಿ ದಾಖಲೆಯನ್ನು ಸಲ್ಲಿಸಿದ್ದರು. ನಿಗದಿಪಡಿಸಿದ ಅವಧಿಯೊಳಗೆ ಅಧಿಕೃತ ಯಮಹಾ ಡೀಲರ್‌ ಕಡೆಯಿಂದಲೇ ಬೈಕ್ ಸರ್ವಿಸಿಂಗ್ ಮಾಡಿಸಬೇಕು. ಅಧಿಕೃತ ಬಿಡಿ ಭಾಗಗಳನ್ನೇ ಬಳಸಬೇಕು ಎಂಬ ವಾರಂಟಿ ಷರತ್ತುಗಳ ದಾಖಲೆಗಳನ್ನು ಅವರು ಸಲ್ಲಿಸಿದ್ದರು.

ಸ್ವತಃ ಪ್ರವೀಣ್ ದೂರಿನ ಜೊತೆಗೆ ವೇದಿಕೆಗೆ ಸಲ್ಲಿಸಿದ್ದ ಮಾಲೀಕರ ಕೈಪಿಡಿಯಲ್ಲಿನ ವಾರಂಟಿ ಕಾರ್ಡ್‌ನಲ್ಲೂ 3 ಮತ್ತು 4ನೇ ಉಚಿತ ಸರ್ವಿಸ್‌ ಕೂಪನ್‌ಗಳು ಬಳಕೆಯಾಗದೆ ಹಾಗೆಯೇ ಇದ್ದವು. ಉಚಿತ ಬೈಕ್ ಸರ್ವಿಸಿಂಗ್ ಮಾಡಿಸಿಕೊಂಡಿಲ್ಲ. ಕೇಬಲ್, ಎಲೆಕ್ಟ್ರಿಕಲ್ ವೈರಿಂಗ್, ಎಲೆಕ್ಟ್ರಿಕಲ್ ಸಾಮಗ್ರಿಗಳು ವಾರಂಟಿ ವ್ಯಾಪ್ತಿಗೆ ಬರುವುದಿಲ್ಲವಾದ ಕಾರಣ ಅರ್ಜಿದಾರ ಪರಿಹಾರ ಕೋರಲು ಆಗದು ಎಂದು ಅಭಿಪ್ರಾಯಪಟ್ಟ ವೇದಿಕೆ, ಪ್ರವೀಣ್ ಅರ್ಜಿಯನ್ನು ವಜಾಗೊಳಿಸಿದೆ.