ಹಾನಗಲ್ಲಿನಲ್ಲಿ ಪ್ರಜಾಸೇವೆ ಆಂದೋಲನವನ್ನು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ರುದ್ರಪ್ಪ ಲಮಾಣಿ ಉದ್ಗಾಟಿಸಿದರು.

ಹಾನಗಲ್ಲ: ಜನ ಕಲ್ಯಾಣವೇ ರಾಜ್ಯದ ಕಲ್ಯಾಣ, ಇದೇ ನಿಜವಾದ ಪ್ರಜಾ ಕಲ್ಯಾಣವಾಗಿದ್ದು, ಈಗ ಪ್ರಜಾ ಸೇವಾ ಆಂದೋಲನ ಜನರ ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳ ಪರಿಹಾರಕ್ಕೆ ದಿಟ್ಟ ಹೆಜ್ಜೆಯಾಗಿದ್ದು, ಇದು ಅತ್ಯಂತ ಯಶಸ್ವಿಯಾಗಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸಲಿದೆ ಎಂದು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.

ಶನಿವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಆಯೋಜಿಸಿದ ಜಿಲ್ಲೆಯ ಪ್ರಥಮ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಮಾತನಾಡಿದರು.

ಪ್ರಜೆಗಳು ಎಲ್ಲದಕ್ಕೂ ವಿಧಾನ ಸೌಧಕ್ಕೆ ಹೋಗಲಾಗದು. ಸರ್ಕಾರವೇ ಜನ ಹತ್ತಿರ ಬರುವ ಯೋಜನೆ ಇದಾಗಿದೆ. ಒಂದೇ ಬಾರಿಗೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ತಿಳಿಯಬಾರದು. ಬಡವರು ಅಧಿಕಾರಿಗಳತ್ತ ಅಲೆದಾಡುವುದನ್ನು ತಪ್ಪಿಸಿ ಅಧಿಕಾರಿಗಳೇ ಜನರ ಬಳಿ ಹೋಗಿ ಸಮಸ್ಯೆ ಪರಿಹರಿಸುವ ನೂತನ ಯೋಜನೆ ಇದು. ಈ ಯೋಜನೆ ಗ್ರಾಮ ಮಟ್ಟದಲ್ಲಿಯೂ ಜಾರಿಗೆ ಬರಲಿದೆ. ಬರಗಾಲ, ವರದಾ-ಬೇಡ್ತಿ ನೀರಾವರಿ ಯೋಜನೆ, ಕಳಸಾ ಬಂಡೂರಿಯಂತಹ ಸಮಸ್ಯೆಗಳು ಸಚಿವ ಸಂಪುಟದಲ್ಲಿ ನಿರ್ಣಯಿಸಿ ಬಗೆಹರಿಯುತ್ತವೆ. ಸರ್ಕಾರದ ಈ ಪ್ರಜಾಸೇವೆ ಯೋಜನೆಗೆ ಸಾರ್ವಜನಿಕರು ಸ್ಪಂದಿಸಿ ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ತಿಳಿಸಿದರು.

ಶಾಸಕ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಮಾನೆ ಮಾತನಾಡಿ, ಜಿಲ್ಲೆಯಲ್ಲಿ ಇದೇ ಪ್ರಥಮವಾದ ಪ್ರಜಾಸೇವಾ ಕಾರ್ಯಕ್ರಮವಾಗಿದೆ. ಜನರತ್ತ ಸರ್ಕಾರ ಎಂಬುದೇ ನಮ್ಮ ಸಂಕಲ್ಪ. ಮೊದಲ ಹಾಗೂ ಮೂರನೇ ಶನಿವಾರಗಳಂದು ಕಡ್ಡಾಯವಾಗಿ ಪ್ರಜಾಸೇವಾ ಆಂದೋಲನ ಪ್ರತಿ ತಾಲೂಕಿನಲ್ಲಿ ನಡೆಯುತ್ತದೆ. ಇದು ಹೋಬಳಿ, ಗ್ರಾಮ ಮುಟ್ಟುವವರೆಗೂ ವಿಸ್ತಾರವಾಗಲಿದೆ. ಇದರೊಂದಿಗೆ ಯುವ ಸಮುದಾಯಕ್ಕಾಗಿ ಭಾರತ್ ಜೋಡೋ ಸಂಘಟನೆ ಮೂಲಕ ರಾಜ್ಯದಲ್ಲಿ ದೇಶದ ಸಂಸ್ಕೃತಿ ಸಂಪ್ರದಾಯ ಆಚರಣೆಗಳನ್ನು ಜಾಗೃತಗೊಳಿಸಿ ಯುವಕರಿಗೆ ಸ್ಫೂರ್ತಿ ನೀಡುವ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದೆ ಎಂದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಜನರ ಅಹವಾಲು ಕೇಳಿ ಪರಿಹಾರ ನೀಡುವ ಮಹತ್ತರ ಯೋಜನೆ ಇದಾಗಿದ್ದು, ಎಲ್ಲ ಅಧಿಕಾರಿಗಳು ಸಕಾಲಕ್ಕೆ ಈ ಮೂಲಕ ಸ್ಪಂದಿಸಿ ಪರಿಹಾರ ಒದಗಿಸುತ್ತಾರೆ. ಇದು ಗ್ರಾಮ ತಾಲೂಕು ಜಿಲ್ಲಾ ಮಟ್ಟದಲ್ಲಿ ಸಮರ್ಪಕವಾಗಿ ಜಾರಿಯಾಗುವ ಅತ್ಯಂತ ಕ್ರಿಯಾಶೀಲ ಯೋಜನೆ. ಈ ಮೂಲಕ ಜನ ಸಾಮಾನ್ಯರ ಬಹುತೇಕ ಸಮಸ್ಯೆಗಳಿಗೆ ಇಲ್ಲಿಂದ ಪರಿಹಾರ ಸಾಧ್ಯ ಎಂದರು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಪ್ಪ ಬೈಲವಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹಾವೇರಿ ನಗರ ಪ್ರಾಧಿಕಾರದ ಅಧ್ಯಕ್ಷ ಪ್ರಭುಗೌಡ ಬಿಸ್ಟನಗೌಡರ, ರಾಜ್ಯ ಹಾಲು ಒಕ್ಕೂಟದ ನಿರ್ದೇಶಕ ಚಂದ್ರಪ್ಪ ಜಾಲಗಾರ, ಪುಟ್ಟಪ್ಪ ನರೇಗಲ್ಲ, ಅಧಿಕಾರಿಗಳಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜಿತ್‌ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ.ಎಲ್. ನಾಗರಾಜ, ಸವಣೂರು ಉಪವಿಭಾಗಾಧಿಕಾರಿ ಎಚ್.ಜಿ. ವಿಜಯಕುಮಾರ, ತಾಲೂಕು ತಹಸೀಲ್ದಾರ ವಿಠಲ್ ಚೌಗಲಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಸೇರಿದಂತೆ ಅಧಿಕಾರಿಗಳು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.