ಓದಿಗೆ ಉತ್ತೇಜನ ನೀಡುವ ಪುಸ್ತಕ ಗೂಡು

| Published : Nov 21 2024, 01:03 AM IST

ಸಾರಾಂಶ

ಸಾರ್ವಜನಿಕರಿಗಾಗಿ ಓದುವ ನಿಮಿತ್ತ ಸಾರ್ವಜನಿಕ ಸ್ಥಳದಲ್ಲಿ ಪುಸ್ತಕ ಗೂಡು ಸಿದ್ಧವಾಗಿದೆ. ಇದೊಂದು ಮಿನಿ ಗ್ರಂಥಾಲಯ ಸಹ ಆಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಿನಿ ಗ್ರಂಥಾಲಯ । ಮಂಗಳೂರು ಗ್ರಾಪಂನಿಂದ ವಿನೂತನ ಕಾರ್ಯ

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕನ್ನಡಪ್ರಭ ವಾರ್ತೆ ಕುಕನೂರು

ಇದು ಗ್ರಂಥಾಲಯವಲ್ಲ. ಪುಸ್ತಕದಂಗಡಿಯೂ ಅಲ್ಲ. ಆದರೆ ಓದಬೇಕು ಅನಿಸಿದರೆ ಇಲ್ಲಿ ಪುಸ್ತಕಗಳು ಸಿಗುತ್ತವೆ. ನಾನಾ ಪುಸ್ತಕಗಳ ಗುಂಪು ಇಲ್ಲಿದೆ. ಹಕ್ಕಿಯ ಗೂಡಿನ ಹಾಗೆ ಇಲ್ಲಿ ಪುಸ್ತಕಗಳ ಗೂಡು ಇದೆ. ಇದು ಸಾರ್ವಜನಿಕರ ಮಸ್ತಕ ತುಂಬಲು ಕೈ ಬೀಸಿ ಕರೆಯುತ್ತಿದೆ.

ನಿಜ, ಓದುಗನಿಗಾಗಿ ಇಲ್ಲೊಂದು ವಿನೂತನ ರೀತಿಯಲ್ಲಿ ಪುಸ್ತಕ ಗೂಡು ಸಿದ್ಧವಾಗಿದೆ. ಓದುವುದು ಮರೀಚಿಕೆ ಆಗುತ್ತಿದೆ. ಜನರು ಓದುವುದನ್ನೆ ಬಿಟ್ಟಿದ್ದಾರೆ. ಪ್ರತಿಯೊಬ್ಬರೂ ಮೊಬೈಲ್ ಗೀಳಿಗೆ ಜಾರಿದ್ದಾರೆ. ಆ ಹಿನ್ನಲೆ ಸಾರ್ವಜನಿಕರಿಗೆ ಓದುವ ಅಭಿರುಚಿ ಹಚ್ಚಬೇಕು ಎಂದು ತಾಲೂಕಿನ ಮಂಗಳೂರು ಗ್ರಾಪಂನಿಂದ ವಿನೂತನ ಕಾರ್ಯವೊಂದು ಜರುಗಿದೆ. ಸಾರ್ವಜನಿಕರಿಗಾಗಿ ಓದುವ ನಿಮಿತ್ತ ಸಾರ್ವಜನಿಕ ಸ್ಥಳದಲ್ಲಿ ಪುಸ್ತಕ ಗೂಡು ಸಿದ್ಧವಾಗಿದೆ. ಇದೊಂದು ಮಿನಿ ಗ್ರಂಥಾಲಯ ಸಹ ಆಗಿದೆ.

ತಾಲೂಕಿನ ಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಪುಸ್ತಕ ಗೂಡು ನಿರ್ಮಾಣವಾಗಿದೆ. ಮಂಗಳೂರಿನ ಮಂಗಳೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾಪಂ ಪಿಡಿಒ, ಅಧ್ಯಕ್ಷರು, ಆಡಳಿತ ಮಂಡಳಿಯವರು ಸಾರ್ವಜನಿಕರು ಓದಲೆಂದು ಪುಸ್ತಕಗಳನ್ನು ಅವರ ಕೈಗೆ ಸುಲಭವಾಗಿ ನಿಲುಕುವಂತೆ ಇಟ್ಟಿದ್ದಾರೆ.

ಗ್ರಾಮೀಣ ಪ್ರದೇಶದ ಜನರಿಗೆ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪುಸ್ತಕ ಗೂಡು ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದ್ದು, ಇದರಲ್ಲಿ ಸಣ್ಣ ಮಕ್ಕಳಿಂದ ಹಿರಿಯರವರೆಗೆ ಓದಬಹುದಾದ ಕಥೆ ಕವನ, ನಾನಾ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕ ಇಡಲಾಗಿದೆ. ಓದುವ ಹವ್ಯಾಸ ಬೆಳೆಸುವುದರ ಜೊತೆಗೆ ಓದಿದ ನಂತರ ಓದುಗರು ಪುನಃ ಆ ಪುಸ್ತಕಗಳನ್ನು ಅದೇ ಸ್ಥಳದಲ್ಲಿ ಇಟ್ಟು ಮತ್ತೊಬ್ಬರ ಜ್ಞಾನ ವೃದ್ಧಿಗೆ ಸಹಕರಿಸಬೇಕು ಎಂಬುದು ಇದರ ಮೂಲ ಆಶಯವಾಗಿದೆ.