ಸಾರಾಂಶ
ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ 12 ವರ್ಷದ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜರುಗಿದೆ. ಮೃತ ಬಾಲಕ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿರುವ ಶೀಲಾರವರ ಪುತ್ರ ಪ್ರಜ್ವಲ್ ಎಂಬಾತನಾಗಿದ್ದೇನೆ.
ಘಟನೆಯ ವಿವರ:ಪ್ರಜ್ವಲ್ ತನ್ನ ಸಂಬಂಧಿಕರ ಮಗುವಾದ ಅಭಿಷೇಕ್ ಜೊತೆ ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಆ ಮಗುವಿನ ಕಾಲಿಗೆ ಪೆಟ್ಟಾಗಿತ್ತು. ಈ ವೇಳೆ ಮಗುವಿನ ಪೋಷಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡ ಪ್ರಜ್ವಲ್, ಮಗುವಿಗೆ ಏನಾದರೂ ಆಗಿದೆಯೇ ಎಂಬ ಭೀತಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವೇಲ್ ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಕ್ಕಪಕ್ಕದವರು ತಕ್ಷಣ ಸ್ಪಂದಿಸಿ ಪ್ರಜ್ವಲ್‌ನನ್ನು ಲೊಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಬಳಿಕ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾಗ ತಪಾಸಣೆ ನಡೆಸಿದ ವೈದ್ಯರು ಪ್ರಜ್ವಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಪ್ರಜ್ವಲ್‌ನ ಸೋದರ ಮಾವ ರಂಗಸ್ವಾಮಿ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.