- ಹೊನ್ನಾಳಿ ಮಗುವಿನ ಹೆತ್ತವರ ಆಸೆಗೆ ಸ್ಪಂದನೆ । ಮಾನವೀಯತೆ ಮೆರೆದ ಎಸ್‌ಪಿ ಡಾ.ಶೇಖರ್‌ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೂರೂವರೆ ವರ್ಷದ ಮಗು ಪೊಲೀಸ್ ಅಧಿಕಾರಿಯಾಗಿ, ಸಮವಸ್ತ್ರದಲ್ಲಿ ಇರುವುದನ್ನು ಕಾಣಬೇಕೆಂಬ ತಂದೆಯ ಆಸೆಗೆ ಪೂರಕವಾಗಿ ಖಾಕಿ ಸಮವಸ್ತ್ರ ಧರಿಸಿ ಬಂದ ಮಗುವಿಗೆ ತಮ್ಮ ಕುರ್ಚಿಯಲ್ಲೇ ಕೂಡಿಸಿ, ಮಗುವಿನ ಹೆತ್ತವರ ಕಣ್ಣಲ್ಲಿ ಕಂಬನಿ ತುಂಬಿ ಬರುವಂತಹ ಘಟನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಎಚ್. ಟೇಕಣ್ಣನವರ್ ಸಾಕ್ಷಿಯಾದರು.

ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪ್ರಭು, ಅನುಷಾ ದಂಪತಿಯ ದ್ವಿತೀಯ ಪುತ್ರ, ಮೂರೂವರೆ ವರ್ಷದ ಹಿತಾರ್ಥ್ ಪೊಲೀಸ್ ಸಮವಸ್ತ್ರ ಧರಿಸಿ, ಕುರ್ಚಿಯಲ್ಲಿ ಕುಳಿತು ದಾವಣಗೆರೆ ಎಸ್‌ಪಿ ಎಂಬಂತೆ ಕಂಗೊಳಿಸಿ, ಪೋಷಕರ ಮನದಾಸೆ ಈಡೇರಿಸಿದ್ದಾನೆ. ಮಗನ ಖುಷಿ-ಖದರ್‌ ಹೆತ್ತವರ ಕಣ್ಣಂಚಿನಲ್ಲಿ ಆನಂದಭಾಷ್ಪಕ್ಕೆ ಕಾರಣವಾದರೆ, ಇಂತಹದ್ದೊಂದು ಮಾನವೀಯ, ಹೃದಯಸ್ಪರ್ಶಿ ಕ್ಷಣಕ್ಕೆ ಜಿಲ್ಲಾ ಎಸ್‌ಪಿ ಡಾ. ಎಚ್.ಟಿ. ಶೇಖರ್ ಅವಕಾಶ ಮಾಡಿಕೊಟ್ಟು, ಮಾನವೀಯತೆ ಮೆರೆದಿದ್ದು ವಿಶೇಷ. ಈ ಸಂದರ್ಭಕ್ಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಹ ಒಂದು ಕ್ಷಣ ಭಾವುಕರಾದರು.

ಹಿತಾರ್ಥ ಒಂದೂವರೆ ವರ್ಷ ಇದ್ದಾಗಿನಿಂದಲೇ ರಕ್ತಕ್ಯಾನ್ಸರ್‌ನಿಂದ ಬಳಲುತ್ತಿದ್ದು, 2 ವರ್ಷಗಳಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಣಿಪಾಲ್ ಆಸ್ಪತ್ರೆಯಲ್ಲಿ 8 ತಿಂಗಳ ಚಿಕಿತ್ಸೆ ನಂತರ ಶೇ.80ರಷ್ಟು ಚೇತರಿಕೆ ಕಂಡಿದ್ದಾನೆ. ಹಿತಾರ್ಥನ ತಂದೆ ಪ್ರಭು ಅವರು ಮಗ ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆ ಹೊಂದಿದ್ದಾರೆ. ಆದರೆ, ಮಗನಿಗೆ ರಕ್ತಕ್ಯಾನ್ಸರ್ ಇರುವುದು ಹೆತ್ತವರ ನೋವಿಗೆ ಕಾರಣವಾಗಿತ್ತು.


ಮಗನನ್ನು ಪೊಲೀಸ್‌ ಅಧಿಕಾರಿಯ ಸಮವಸ್ತ್ರದಲ್ಲಿ ನೋಡಬೇಕೆಂಬ ಆಸೆಯಿಂದ ಹಿತಾರ್ಥನಿಗೆ ಖಾಕಿ ಯೂನಿಫಾರಂ ತೊಡಿಸಿ, ಎಸ್‌ಪಿ ಕಚೇರಿಗೆ ಪ್ರಭು ಅವರು ಕರೆ ತಂದರು. ಮಗುವಿನ ಆರೋಗ್ಯ ಹಾಗೂ ತಂದೆಯ ಆಸೆ ಬಗ್ಗೆ ತಿಳಿದ ಎಸ್‌ಪಿ ಡಾ. ಎಚ್.ಟಿ.ಶೇಖರ್ ತಕ್ಷಣವೇ ತಮ್ಮಲ್ಲಿಗೆ ಕರೆಸಿಕೊಂಡು, ಹೂಗುಚ್ಛ ನೀಡಿ, ಹೊಸದಾಗಿ ಬರುವ ಅಧಿಕಾರಿಗಳಿಗೆ ಸ್ವಾಗತಿಸುವಂತೆಯೇ ಹಿತಾರ್ಥನಿಗೆ ಸ್ವಾಗತ ಕೋರಿದರು. ತಮ್ಮ ಕುರ್ಚಿಯಲ್ಲಿ ಕೂರಿಸಿ, ಕೆಲ ಹೊತ್ತು ಎಸ್‌ಪಿಯಂತೆ ಕಾಣುವ ಸದಾವಕಾಶವನ್ನು ಮೂರೂವರೆ ವರ್ಷದ ಹಿತಾರ್ಥಗೆ ನೀಡಿದರು.

ಮಗುವನ್ನು ಕಂಡ ತಂದೆ, ಎಸ್ಪಿ, ಎಸ್ಪಿ ಕಚೇರಿ ಅಧಿಕಾರಿ, ಸಿಬ್ಬಂದಿ ಸಹ ಭಾವುಕರಾದರು. ಅನಂತರ ಮಗುವಿಗೆ ಶೇಕ್ ಹ್ಯಾಂಡ್ ಮಾಡಿದ ಎಸ್ಪಿ ಅವರು ಬೇಗನೇ ಗುಣಮುಖನಾಗಿ, ಉತ್ತಮವಾಗಿ ಓದಿ, ದೊಡ್ಡ ಪೊಲೀಸ್ ಅಧಿಕಾರಿಯಾಗುವಂತೆ ಮಗುವಿಗೆ ಹರಸಿದರು. ಎಸ್‌ಪಿ ಅವರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು.

- - -

-(ಫೋಟೋ ಇಲ್ಲ)