ಮೂಲ ರೂಪದಲ್ಲಿದ್ದ ಆಟೋ ರಿಕ್ಷಾಗಳಿಗೆ ವಿಪರೀತ ಅಲಂಕಾರ ಮಾಡಿ, ಹೆಚ್ಚುವರಿ ಸೀಟು, ಅನಗತ್ಯ ಕಬ್ಬಿಣದ ಸರಳು ಅಳ‍ವಡಿಸಿ, ಕುಷನ್‌ ವರ್ಕ್ ಮಾಡಿದ್ದಂತಹ ಆಟೋ ರಿಕ್ಷಾ, ಸಿಗ್ನಲ್ ಜಂಪ್ ಮಾಡಿದಾಗ ಆಟೋ ನಂಬರ್ ಗೊತ್ತಾಗದಂತೆ ಹಗ್ಗ, ಕುಚ್ಚು, ಹಗ್ಗಗಳನ್ನು ಕಟ್ಟಿದ್ದಂತಹ ಆಟೋ ರಿಕ್ಷಾಗಳ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳುವ ಜೊತೆಗೆ ಆಟೋ ರಿಕ್ಷಾಗಳನ್ನು ಮೂಲ ರೂಪಕ್ಕೆ ತರುವ ಕೆಲಸಕ್ಕೆ ಕೈಹಾಕಿದೆ.

ದಾವಣಗೆರೆ: ಮೂಲ ರೂಪದಲ್ಲಿದ್ದ ಆಟೋ ರಿಕ್ಷಾಗಳಿಗೆ ವಿಪರೀತ ಅಲಂಕಾರ ಮಾಡಿ, ಹೆಚ್ಚುವರಿ ಸೀಟು, ಅನಗತ್ಯ ಕಬ್ಬಿಣದ ಸರಳು ಅಳ‍ವಡಿಸಿ, ಕುಷನ್‌ ವರ್ಕ್ ಮಾಡಿದ್ದಂತಹ ಆಟೋ ರಿಕ್ಷಾ, ಸಿಗ್ನಲ್ ಜಂಪ್ ಮಾಡಿದಾಗ ಆಟೋ ನಂಬರ್ ಗೊತ್ತಾಗದಂತೆ ಹಗ್ಗ, ಕುಚ್ಚು, ಹಗ್ಗಗಳನ್ನು ಕಟ್ಟಿದ್ದಂತಹ ಆಟೋ ರಿಕ್ಷಾಗಳ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳುವ ಜೊತೆಗೆ ಆಟೋ ರಿಕ್ಷಾಗಳನ್ನು ಮೂಲ ರೂಪಕ್ಕೆ ತರುವ ಕೆಲಸಕ್ಕೆ ಕೈಹಾಕಿದೆ.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್‌ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಸಮಕ್ಷಮದಲ್ಲಿ ಡಿವೈಎಸ್ಪಿ, ಸಂಚಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್‌, ಎಎಸ್ಐ, ಎಚ್‌ಸಿ, ಕಾನ್ಸಟೇಬಲ್‌ಗಳು, ಆರ್‌ಟಿಓ ಅಧಿಕಾರಿ, ಸಿಬ್ಬಂದಿ ಆಟೋ ರಿಕ್ಷಾಗಳನ್ನು ಮೂಲ ರೂಪಕ್ಕೆ ತರುವ ಕಾರ್ಯಕ್ಕೆ ಮುಂದಾದರು.

ಕೆಲವು ತಿಂಗಳ ಹಿಂದೆಯೇ ಪೊಲೀಸ್ ಇಲಾಖೆ ಸೂಚನೆ ನೀಡಿದ್ದರೂ ಕಿವಿಗೊಡದ ನೂರಾರು ಆಟೋ ರಿಕ್ಷಾಗಳನ್ನು ಇಲ್ಲಿನ ಪೊಲೀಸ್ ಕವಾಯಿತು ಮೈದಾನಕ್ಕೆ ತರಿಸಿಕೊಂಡು, ಅವುಗಳನ್ನು ಸರಿಪಡಿಸುವ ಕೆಲಸಕ್ಕೆ ಇಲಾಖೆ ಮುಂದಾಯಿತು. ಆಟೋ ರಿಕ್ಷಾಗಳ ಹಿಂದೆ, ಅಕ್ಕಪಕ್ಕ, ಕೆಳ ಭಾಗಕ್ಕೆ ಅಳವಡಿಸಿದ್ದ ಕಬ್ಬಿಣದ ಸರಳುಗಳು, ಹೆಚ್ಚುವರಿ ಪ್ರಯಾಣಿಕರು ಕುಳಿತುಕೊಳ್ಳಲು ಅಳವಡಿಸಿದ್ದ ಕಬ್ಬಿಣದ ಸೀಟುಗಳು, ಆಟೋ ಚಾಲಕನ ಪಕ್ಕದಲ್ಲಿ ಅಳವಡಿಸಿದ್ದ ಸರಳು, ಸೀಟುಗಳನ್ನು ತೆರವು ಮಾಡಿಸಲಾಯಿತು.

ವರ್ಕ್ ಶಾಪ್ ಕೆಲಸಗಾರರು, ಪೊಲೀಸ್ ಸಿಬ್ಬಂದಿ ಆಟೋ ರಿಕ್ಷಾ ಚಾಲಕನ ಅಕ್ಕಪಕ್ಕ ನಾಲ್ಕು ಜನ ಕುಳಿತುಕೊಳ್ಳಲು ಮಾಡಿಸಿದ್ದ ಹೆಚ್ಚುವರಿ ಕುಷನ್ ತೆರವು ಮಾಡಿಸಿದರು. ಆಟೋ ರಿಕ್ಷಾದೊಳಗಿನ ಅಲ್ಪ ಜಾಗದಲ್ಲಿ ಕುಷನ್ ವರ್ಕ್ ಮಾಡಿದ್ದು, ಆಟೋಗಳ ಹಿಂದೆ ಎಂಜಿನ್ ಆಯಿಲ್ ಬದಲಿಸಲು, ಎಂಜಿನ್ ದುರಸ್ತಿಗೆ ಸುಲಭವಾಗಲೆಂದು ಕಂಪನಿಯಿಂದ ಡಿಸೈನ್ ಮಾಡಿದ್ದನ್ನೇ ನಾಚುವಂತೆ ತಮಗೆ ಬೇಕಾದಂತೆ ಬದಲಿಸಿಕೊಂಡಿದ್ದ ಚಾಲಕರಿಗೂ ಪೊಲೀಸರು ಬಿಸಿ ಮುಟ್ಟಿಸಲು ಮರೆಯಲಿಲ್ಲ.

ಸಂಚಾರ ನಿಯಮ ಉಲ್ಲಂಘನೆ, ಸಿಗ್ನಲ್ ಜಂಪ್ ಆದಾಗ ಸಿಸಿ ಕ್ಯಾಮೆರಾಗಳು, ಪೊಲೀಸರ ಮೊಬೈಲ್‌ಗೆ ಫೋಟೋಗೆ ನಂಬರ್ ಸಿಗಬಾರದೆಂದು ಕಣ್ತಪ್ಪಿಸಲು, ಸಿಸಿ ಕ್ಯಾಮೆರಾಗಳಿಗೆ ಯಾಮಾರಿಸಲೆಂದು ನಂಬರ್ ಪ್ಲೇಟ್ ಇರುವಲ್ಲಿ ಕಂಬಳಿ, ಉಲ್ಲನ್‌, ಕುಚ್ಚುಗಳು, ಹಗ್ಗ, ಡಿಸೈನ್ ಬಟ್ಟೆ ಇಳಿ ಬಿಟ್ಟಿರುವುದನ್ನೂ ಪೊಲೀಸರು ತೆರವು ಮಾಡಿಸಿದರು.

ಆಟೋ ರಿಕ್ಷಾ ಚಾಲನೆ ಮಾಡುವ ಬಹುತೇಕರು ಸಂಚಾರ ನಿಯಮ ಪಾಲಿಸುವುದಾಗಲೀ, ಪ್ರಯಾಣಿಕರೊಂದಿಗೆ ಹೇಗೆ ಮಾತನಾಡಬೇಕೆಂಬ ಅರಿವಾಗಲೀ ಇಲ್ಲದಂತೆ ವರ್ತಿಸುತ್ತಿರುವ ಬಗ್ಗೆಯೂ ಸಾರ್ವಜನಿಕರಿಂದ ಪದೇಪದೇ ದೂರು ಕೇಳಿ ಬರುತ್ತಲೇ ಇದೆ.

ಆಟೋ ರಿಕ್ಷಾಗಳನ್ನು ನಂಬಿಕೊಂಡು ಮಕ್ಕಳ ಭವಿಷ್ಯ ಕಟ್ಟಿಕೊಂಡು, ಬದುಕಿನ ಬಂಡಿ ಎಳೆದ ಎಷ್ಟೋ ಆಟೋ ರಿಕ್ಷಾ ಚಾಲಕರು ಈ ವೃತ್ತಿಗೆ ಮಾದರಿಯಾಗಿದ್ದಾರೆ. ಆದರೆ, ಈಗಿನ ಅನೇಕರು ಆಟೋ ರಿಕ್ಷಾ ವೃತ್ತಿಗೆ ಕಳಂಕ ತರುವಂತಹ ವರ್ತನೆ, ಮಾತು, ದುರ್ವರ್ತನೆಯಿಂದ ಆಟೋ ರಿಕ್ಷಾದವರ ಬಗ್ಗೆ ಜನರು ಮೂಗು ಮುರಿಯುವಂತೆ ಮಾಡಿದ್ದಾರೆ.

ಆದರೆ, ಅದೆಷ್ಟೋ ಕುಟುಂಬಗಳಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟಿರುವ ಆಟೋ ರಿಕ್ಷಾ ವೃತ್ತಿಗೆ, ಆಟೋ ರಿಕ್ಷಾಗಳಿಗೆ ಗೌರವ ತರಿಸುವ ಕೆಲಸವನ್ನು ಪೊಲೀಸ್ ಇಲಾಖೆ ನಿರಂತರ ಮಾಡಿದರೂ ಕೆಲವರ ವರ್ತನೆಯಿಂದ ಈ ವೃತ್ತಿಗೆ ಒಂದು ಕಪ್ಪು ಮಸಿ ಬಳಿದಂತಾಗಿರುವುದು ಸ್ಪಷ್ಟವಾಗಿದೆ. ಸಾಲ ಮಾಡಿ ಆಟೋ ರಿಕ್ಷಾ ಮಾಡಿಕೊಂಡ ಎಷ್ಟೋ ಚಾಲಕರು ನೆಮ್ಮದಿಯ ಬದುಕು ಬಾಳುತ್ತಿದ್ದಾರೆ. 15 ವರ್ಷಗಳ ಆಟೋ ರಿಕ್ಷಾಗಳು ರಸ್ತೆಗೆ ಇಳಿಯುವಂತಿಲ್ಲವೆಂಬ ನಿಯಮವೂ ಈಗ ಅಂತಹ ಪ್ರಾಮಾಣಿಕ ಆಟೋ ರಿಕ್ಷಾ ಚಾಲಕರ ಬದುಕಿಗೆ ಬರೆ ಎಳೆದಂತಾಗಿದೆ. ಅಂತಹವರು ಅನಿವಾರ್ಯವಾಗಿ ಹೊಸ ಆಟೋ ರಿಕ್ಷಾಗಳನ್ನು ಸಾಲ ಮಾಡಿ, ಖರೀದಿಸುವ ಪರಿಸ್ಥಿತಿಯಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಎಚ್ಚರಿಕೆ ನೀಡಿದ್ದ ಪೊಲೀಸ್ ಇಲಾಖೆ ಇದೀಗ ಕಾರ್ಯಾಚರಣೆಗೆ ಇಳಿದೆ. ಇದು ಒಂದು ದಿನಕ್ಕೆ ಸೀಮಿತವಲ್ಲ, ನಿರಂತರ ನಡೆಯುವ ಕಾರ್ಯಾಚರಣೆ ಎಂಬುದಾಗಿ ಆಟೋ ಚಾಲಕರಿಗೂ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.

ನಂಬರ್ ನೀಡುವ ಪ್ರಕ್ರಿಯೆಗೆ ಚಾಲನೆ:

ಆಟೋ ರಿಕ್ಷಾಗಳ ದಾಖಲೆಗಳ ಪರಿಶೀಲನೆ, ಆಟೋ ರಿಕ್ಷಾಗಳ ಕಂಡೀಷನ್‌ ಹೇಗಿದೆ ಎಲ್ಲವನ್ನೂ ಪರಿಶೀಲಿಸಿದರು. ಇದರೊಂದಿಗೆ ಸ್ಮಾರ್ಟ್ ಸಿಟಿ ದಾವಣಗೆರೆ ಆಟೋ ರಿಕ್ಷಾಗಳಿಗೆ ಆಟೋ ಮೀಟರ್‌, ಪ್ರೀಪೇಯ್ಡ್ ಆಟೋ ಕೌಂಟರ್ ಸ್ಥಾಪಿಸುವ ಸಾಧ್ಯಗಳೂ ಹೆಚ್ಚಾಗಿವೆ. ದಶಕದ ಹಿಂದೆ ಚಾಲ್ತಿಯಲ್ಲಿದ್ದ ಆಟೋ ರಿಕ್ಷಾಗಳಿಗೆ ಪೊಲೀಸ್‌-ಆರ್‌ಟಿಓ ಜಂಟಿಯಾಗಿ ನೀಡುವ ಡಿವಿಜಿ- ಆಟೋ ನಂಬರ್ ನೀಡುವ ಪ್ರಕ್ರಿಯೆಗೂ ಈಗ ಹೊಸದಾಗಿ ಚಾಲನೆ ನೀಡಲಾಯಿತು.

ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಡಿವೈಎಸ್ಪಿಗಳು, ಇನ್ಸಪೆಕ್ಟರ್‌ಗಳು, ಉತ್ತರ-ದಕ್ಷಿಣ ಸಂಚಾರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್‌ಗಳು, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

.