ಸಾರಾಂಶ
ಮಂಗಳೂರು : ಪ್ರೀತಿ, ಪ್ರೇಮಕ್ಕೆ ದೇಶ, ಭಾಷೆ, ಜಾತಿ ಅಡ್ಡಿ ಅಲ್ಲ ಎಂಬುದಕ್ಕೆ ಮತ್ತೊಂದು ನಿದರ್ಶನ ಮಂಗಳೂರಿನಲ್ಲಿ ದೊರೆತಿದೆ. ಮಂಗಳೂರಿನ ಯುವಕ ಹಾಗೂ ಬ್ರೆಝಿಲ್ ಮೂಲದ ಯುವತಿಯ ಮದುವೆಯು ಶುಕ್ರವಾರ ನಗರದ ಟಿ. ವಿ. ರಮಣ ಪೈ ಸಭಾಂಗಣದಲ್ಲಿ ನಡೆದಿದೆ.
ಸುದೀರ್ಘ ಕಾಲದ ಪ್ರೀತಿಯ ಬಳಿಕ ಇವರು ಕರಾವಳಿ ನೆಲದಲ್ಲಿ ತುಳುನಾಡಿನ ಸಂಪ್ರದಾಯ ಪ್ರಕಾರವೇ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾರೆ. ಬ್ರೆಝಿಲ್ ದೇಶದ ತಾಟಿಯಾನೆ ಹಾಗೂ ಮಂಗಳೂರಿನ ಜಿಎಸ್‌ಬಿ ಸಮುದಾಯದ ಯುವಕ ಆದಿತ್ಯ ಅವರ ವಿವಾಹ ಸಮಾರಂಭ ಜಿಎಸ್‌ಬಿ ಸಂಪ್ರದಾಯದಂತೆ ನಗರದ ಖಾಸಗಿ ಹಾಲ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ.
ನಗರದ ಕರಂಗಲ್ಪಾಡಿ ನಿವಾಸಿ ಆದಿತ್ಯ ಎಂಟು ವರ್ಷಗಳ ಹಿಂದೆ ಐಟಿ ಉದ್ಯೋಗಕ್ಕಾಗಿ ಬ್ರೆಝಿಲ್‌ಗೆ ತೆರಳಿದ್ದರು. 2019 ರಲ್ಲಿ ಅವರ ಜೊತೆಗೆ ಉದ್ಯೋಗ ಮಾಡುತ್ತಿದ್ದ ಯುವತಿ ಪರಿಚಯವಾಗಿ ಬಳಿಕ ಸ್ನೇಹಕ್ಕೆ ತಿರುಗಿತ್ತು. 2023 ರಲ್ಲಿ ಇವರು ತಮ್ಮ ಮನೆಯವರಿಗೆ ಪ್ರೀತಿ ಪ್ರೇಮದ ವಿಷಯ ತಿಳಿಸಿ ಮದುವೆಗೆ ಒಪ್ಪಿಗೆ ಪಡೆದಿದ್ದರು. ಆದಿತ್ಯ ಹಾಗೂ ತಾಟಿಯಾನೆ ಅವರ ಜೋಡಿ ತಮ್ಮ ಹೆತ್ತವರು ಹಾಗೂ ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ.
ಪಾಶ್ಚಾತ್ಯ ಸಂಸ್ಕಸ್ಕೃತಿಯಲ್ಲಿ ಬೆಳೆದು ಬಂದ ಯುವತಿ ತನ್ನ ಕೈಗೆ ಮೆಹಂದಿ ಹಚ್ಚಿ ಹಣೆಗೆ ಬಿಂದಿಗೆ ಧರಿಸಿ, ತಲೆಗೆ ಹೂ ಮುಡಿದು, ಭಾರತೀಯ ಸಂಪ್ರದಾಯದಂತೆ ಆಭರಣಗಳನ್ನು ಧರಿಸಿ ಅಗ್ನಿ ಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ವಧುವಿನ ತಂದೆ ಅಟೀಲಿಯೊ, ತಾಯಿ ಲೂಸಿಯ, ಸಹೋದರಿಯರಾದ ಥಾಯಿಸ್, ಥಾಲಿತ್ ಹಾಗೂ ವರನ ಪೋಷಕರು, ಕುಟುಂಬಸ್ಥರು ಭಾಗವಹಿಸಿದ್ದರು.