ಸಾರಾಂಶ
ಖಾಸಗಿ ಕಂಪನಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಕಂಪನಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.ಕಲುಬರಗಿ ಜಿಲ್ಲೆಯ ವೀರೇಶ್ (35) ಹಾಗೂ ಯಾದಗಿರಿ ಜಿಲ್ಲೆಯ ಇಮಾಮ್ ಶೇಕ್ (28) ಮೃತ ದುರ್ದೈವಿಗಳು. ಘಟನೆಯಲ್ಲಿ ಗಾಯಗೊಂಡಿರುವ ಕಲುಬರಗಿ ಜಿಲ್ಲೆಯ ಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೀಣ್ಯ ಎರಡನೇ ಹಂತದಲ್ಲಿ ವ್ಯೋಮ್ ಸ್ವಿಚ್ ಗೇರ್ ಕಂಪನಿಯ ನೂತನ ಕಟ್ಟಡದ ಸೆಂಟ್ರಿಂಗ್ ಕೆಲಸದ ವೇಳೆ ಈ ದುರಂತ ನಡೆದಿದೆ.
ಕೆಲ ದಿನಗಳಿಂದ ವ್ಯೋಮ್ ಸ್ವಿಚ್ ಗೇರ್ ಕಂಪನಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ವೀರೇಶ್, ಇಮಾಮ್ ಹಾಗೂ ಪ್ರಕಾಶ್ ಸೇರಿದಂತೆ ಹತ್ತಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಎರಡು ಗಂಟೆಯಲ್ಲಿ ಈ ಮೂವರು ಸೆಂಟ್ರಿಂಗ್ ಕೆಲಸದಲ್ಲಿ ನಿರತರಾಗಿದ್ದರು. ಆ ವೇಳೆ ಸೆಂಟ್ರಿಂಗ್ ದಿಢೀರನೇ ಕುಸಿದಿದೆ. ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರ ಸಹಕಾರದಲ್ಲಿ ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಕಟ್ಟಡದ ಅವಶೇಷಗಳಡಿ ಸಿಲುಕಿ ಈ ಇಬ್ಬರು ಮೃತಪಟ್ಟಿದ್ದು, ಗಾಯಗೊಂಡಿರುವ ಪ್ರಕಾಶ್ ಎಂಬಾತನನ್ನು ಹತ್ತಿರದ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.