ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ತೀವ್ರ ಕುತೂಹಲ ಕೆರಳಿಸಿದ್ದ ಅಥಣಿ ಪುರಸಭೆ ಗದ್ದುಗೆ ಗುದ್ದಾಟ ಕೊನೆಗೂ ಸುಖಾಂತ್ಯ ಕಂಡಿದೆ. ಶಾಸಕ ಸವದಿ ನೇತೃತ್ವದಲ್ಲಿ ಭಾನುವಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದರಿಂದ ಅವಿರೋಧ ಆಯ್ಕೆಗೆ ಒಮ್ಮತ ಮೂಡಿತು. ಇದರಿಂದ ಶಿವಲೀಲಾ ಸದಾಶಿವ ಬುಟಾಳಿ ಅಧ್ಯಕ್ಷೆಯಾಗಿ, ಭುವನೇಶ್ವರಿ ಬೀರಪ್ಪ ಯಕ್ಕಂಚಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.27 ಜನ ಸದಸ್ಯರ ಬಲ ಹೊಂದಿರುವ ಅಥಣಿ ಪುರಸಭೆಯಲ್ಲಿ ಕಾಂಗ್ರೆಸ್ 15 ಮತ್ತು ಬಿಜೆಪಿ 9, ಮೂವರು ಪಕ್ಷೇತರರು ಆಯ್ಕೆಯಾಗಿದ್ದರು. ಕಳೆದ ವಿಧಾನಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಶಾಸಕರಾದ ನಂತರ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರು ಅವರನ್ನು ಹಿಂಬಾಲಿಸಿದ್ದರು. ಇದರಿಂದ ಪುರಸಭೆಯಲ್ಲಿ ಪ್ರತಿಪಕ್ಷದ ಒಬ್ಬ ಸದಸ್ಯನೂ ಇಲ್ಲದಂತಾಗಿತ್ತು.
ಈಚೆಗೆ ಜರುಗಿದ ಲೋಕಸಭೆ ಚುನಾವಣೆ ಬಳಿಕ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಲಕ್ಷ್ಮಣ ಸವದಿ ಮಧ್ಯೆ ಮತ್ತೆ ಮತದ ಮನಸ್ತಾಪ ಉಂಟಾಗಿ ಮೂಲ ಮತ್ತು ವಲಸಿ ಮಧ್ಯೆ ಗುಂಪುಗಾರಿಕೆ ತೀವ್ರಗೊಂಡಿತ್ತು. ಅದರ ಪರಿಣಾಮ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಬಿದ್ದಿತ್ತು ಎಂಬುವುದರಲ್ಲಿ ಎರಡು ಮಾತಿಲ್ಲ. ಯಾರ ಗುಂಪು ಇಲ್ಲಿ ಮೇಲಾಗಬಹುದು ಎಂಬ ಲೆಕ್ಕಾಚಾರಗಳು ಕೂಡ ನಡೆದಿದ್ದವು. ಶಾಸಕ ಸವದಿ ಜತೆ ಸಂಧಾನ ಯಶಸ್ವಿ:ಕಾಂಗ್ರೆಸ್ಸಿನ 15 ಜನ ಸದಸ್ಯರು ಸಚಿವ ಸತೀಶ ಜಾರಕಿಹೊಳಿಯವರನ್ನು ಭೇಟಿಯಾಗಿ ವಾರಗಳ ಕಾಲ ಹೈದರಾಬಾದ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಅಧ್ಯಕ್ಷ ಹುದ್ದೆಗೆ ಈ ಬಣದಲ್ಲೂ ಒಮ್ಮತ ಮೂಡದೇ ಕೆಲವು ಸದಸ್ಯರು ಭಾನುವಾರ ಅಥಣಿಗೆ ಹಿಂದಿರುಗಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಪರಿಣಾಮ ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಭಾನುವಾರ ಸಂಧಾನ ಸಭೆ ನಡೆದು ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ನಡುವಿನ ಗುಂಪುಗಾರಿಕೆಗೆ ತೆರೆ ಎಳೆದು ಒಮ್ಮತದ ಆಯ್ಕೆಗೆ ಅನುಮೋದನೆ ನೀಡಲಾಗಿತ್ತು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಶಿವಲೀಲಾ ಸದಾಶಿವ ಬುಟಾಳಿ ಹಾಗೂ ಓಬಿಸಿ ಅ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಭುವನೇಶ್ವರಿ ಬೀರಪ್ಪ ಯಕ್ಕಂಚಿ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಹೀಗಾಗಿ ಚುನಾವಣೆ ಅಧಿಕಾರಿಯಾಗಿದ್ದ ತಹಸೀಲ್ದಾರ್ ಸಿದರಾಯ ಬೋಸಗೆ ಅವರು ಇವರಿಬ್ಬರ ಆಯ್ಕೆಯನ್ನು ಅವಿರೋಧ ಆಯ್ಕೆ ಎಂದು ಘೋಷಿಸಿದರು. ಪುರಸಭೆಯ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಉಪತಹಸೀಲ್ದಾರ್ ಎಂ.ವೈ. ಯತ್ನಟ್ಟಿ ಸಹಾಯಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.ಬಳಿಕ ಪುರಸಭೆ ಸದಸ್ಯರು, ಮುಖಂಡರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಮೊದಲ ಬಾರಿ ಪುರಸಭೆ ಸದಸ್ಯೆಯಾದ ನನಗೆ ಪಕ್ಷದ ಹಿರಿಯ ಮುಖಂಡರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನ ಹಾಗೂ ಎಲ್ಲ ಪುರಸಭೆ ಸದಸ್ಯರ ಸಹಕಾರದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಪುರಸಭೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ರಾಜ್ಯದ ಮೊದಲ ಪುರಸಭೆಯಾದ ಅಥಣಿ ಪುರಸಭೆ ಶೀಘ್ರದಲ್ಲಿಯೇ ನಗರಸಭೆಯಾಗಿ ಮೇಲ್ದರ್ಜೆಗೆ ಏರಲಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಟ್ಟಣಕ್ಕೆ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ, ಒಳಚರಂಡಿ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಪುರಸಭೆ ಆಡಳಿತದ ಎಲ್ಲ ಸದಸ್ಯರು ದೂರದೃಷ್ಟಿ ಮತ್ತು ಬದ್ಧತೆ ಇಟ್ಟುಕೊಂಡು ಎಲ್ಲಾ ವಾರ್ಡಿನ ಜನತೆಯ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮುಖಂಡರಾದ ಸದಾಶಿವ ಬುಟಾಳಿ, ಶಿವಕುಮಾರ ಸವದಿ, ಅಸ್ಲಂ ನಾಲಬಂದ, ಬಸವರಾಜ ಬುಟಾಳಿ, ರಾವಸಾಬ ಮುಖಣಿ, ಶ್ರೀಶೈಲ ಹಳ್ಳದಮಳ ಸೇರಿದಂತೆ ಪುರಸಭೆಯ ಸದಸ್ಯರು, ಚುನಾವಣೆ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
ಅಭಿಮಾನಿಗಳ ಸಂಭ್ರಮ :ಅಥಣಿ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು. ಬ್ಯಾಂಡ್ ಹಚ್ಚಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.1952ರ ಪ್ರಸಂಗ ರಿಪೀಟ್:
1952ರಲ್ಲೂ ಅಥಣಿ ಪುರಸಭೆಯಲ್ಲಿ ಇಂಥದ್ದೇ ಪ್ರಸಂಗ ನಡೆದಿತ್ತು. ಆಗಲೂ ಅಧ್ಯಕ್ಷರಾಗಲು ಆಡಳಿತ ಗುಂಪಿನಲ್ಲಿ ಗುಂಪುಗಾರಿಕೆ ನಡೆದು ರೆಸಾರ್ಟ್ ರಾಜಕಾರಣ ನಡೆದಿತ್ತು. ಆದರೆ, ಕೊನೆಗೆ ಮುಖಂಡರ ಮಧ್ಯ ಪ್ರವೇಶದಿಂದ ಸಂಧಾನ ನಡೆದು ಗುರುಪಾದಪ್ಪ ಹಂಜಿ ಅವರು ಅವಿರೋಧ ಆಯ್ಕೆ ಆಗಿದ್ದರು. ಈಗ ಪುರಸಭೆ ಇತಿಹಾಸದಲ್ಲಿ 2ನೇ ಬಾರಿಗೆ ಅವಿರೋಧ ಆಯ್ಕೆ ನಡೆದಿದೆ.ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಹೆಚ್ಚಿನ ಆಕಾಂಕ್ಷಿಗಳು ಇರುವುದು ಸಹಜ. ಅವಿರೋಧ ಆಯ್ಕೆಯಾಗುವುದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬ ವಿಚಾರವನ್ನು ಈ ಕ್ಷೇತ್ರದ ಶಾಸಕನಾಗಿ ಎಲ್ಲ ಸದಸ್ಯರಿಗೆ ಮನವರಿಕೆ ಮಾಡಿದಾಗ ಎಲ್ಲರೂ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಹಕಾರ ನೀಡುವ ಮೂಲಕ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು.- ಲಕ್ಷ್ಮಣ ಸವದಿ, ಶಾಸಕ