ಮಳೆ, ನಾಲೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಸೇತುವೆ!

| Published : Aug 15 2025, 01:00 AM IST

ಮಳೆ, ನಾಲೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಸೇತುವೆ!
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ನೀರಿನ ಜೊತೆಗೆ ಭದ್ರಾ ನಾಲೆ ನೀರು ರಭಸವಾಗಿ ಹರಿದು ಬಂದಿದ್ದರಿಂದ ತಾಲೂಕಿನ ಕುರ್ಕಿ-ಚಟ್ಟೋಬನಹಳ್ಳಿ ಗ್ರಾಮಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು, ಕೊಚ್ಚಿ ಹೋದ ಘಟನೆ ತಾಲೂಕಿನ ಕುರ್ಕಿ ಗ್ರಾಮದ ಬಳಿ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಳೆ ನೀರಿನ ಜೊತೆಗೆ ಭದ್ರಾ ನಾಲೆ ನೀರು ರಭಸವಾಗಿ ಹರಿದು ಬಂದಿದ್ದರಿಂದ ತಾಲೂಕಿನ ಕುರ್ಕಿ-ಚಟ್ಟೋಬನಹಳ್ಳಿ ಗ್ರಾಮಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು, ಕೊಚ್ಚಿ ಹೋದ ಘಟನೆ ತಾಲೂಕಿನ ಕುರ್ಕಿ ಗ್ರಾಮದ ಬಳಿ ವರದಿಯಾಗಿದೆ.

ತಾಲೂಕಿನ ಕುರ್ಕಿ ಗ್ರಾಮದ ಬಳಿ ಚಟ್ಟೋಬನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ಕುಸಿದ ಸ್ಥಳಕ್ಕೆ ಬಿಜೆಪಿ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಯಕೊಂಡ ಕ್ಷೇತ್ರದ ಮುಖಂಡ ಆಲೂರು ನಿಂಗರಾಜ ಇತರರು ಭೇಟಿ ನೀಡಿದ್ದರು.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡರು ಭದ್ರಾ ಅಧೀಕ್ಷಕ ಅಭಿಯಂತರ ಟಿ.ಆರ್.ರವಿಚಂದ್ರ, ಕಾರ್ಯ ನಿರ್ವಾಹಕ ಅಭಿಯಂತರ ಜಿ.ಬಿ.ಚನ್ನಬಸಪ್ಪ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಜಿ.ಪಿ.ಪ್ರಕಾಶರ ಅವರನ್ನು ಸಂಪರ್ಕಿಸಿ, ಸೇತುವೆ ಕೊಚ್ಚಿ ಹೋದ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಈ ವೇಳೆ ಮಾತನಾಡಿದ ಬಿ.ಎಂ.ಸತೀಶ ಕೊಳೇನಹಳ್ಳಿ, ಮಳೆ ನೀರು ಮತ್ತು ಭದ್ರಾ ನಾಲೆ ನೀರಿನ ಹರಿವಿನ ರಭಸಕ್ಕೆ ಕೊಚ್ಚಿ ಹೋಗಿರುವ ಸೇತುವೆ ಕಾಮಗಾರಿ ತಕ್ಷಣ ಪ್ರಾರಂಭಿಸಬೇಕು. ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ಇಂತಹ ಸಣ್ಣಪುಟ್ಟ ಕಾಲುವೆ ಸೇತುವೆಗಳನ್ನು ನಿರ್ವಹಿಸಲಾಗದ ಹೀನಾಯ ಪರಿಸ್ಥಿತಿಗೆ ರಾಜ್ಯವನ್ನು ತಂದಿಟ್ಟಿದೆ. ಭದ್ರಾ ನಾಲೆ ಅಚ್ಚುಕಟ್ಟು ಕೊನೆ ಭಾಗಕ್ಕೆ ಸಮರ್ಪಕ ನೀರು ಬರುವುದಿಲ್ಲ. ಡ್ಯಾಂನ ಬುಡದಲ್ಲೇ ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳುತ್ತಾರೆ. ಹಾಳಾದ ಕಾಲುವೆ, ಸೇತುವೆಗಳನ್ನು ದುರಸ್ತಿಪಡಿಸುವ ವ್ಯವದಾನವೂ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಭದ್ರಾ ಅಧೀಕ್ಷಕ ಅಭಿಯಂತರ ಟಿ.ಆರ್.ರವಿಚಂದ್ರ ಮಾತನಾಡಿ, ಸೇತುವೆ ಶಿಥಿಲಗೊಂಡು ಬಹಳ ದಿನಗಳಾಗಿದ್ದವು. ಆದ್ದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾರ್ಯಾದೇಶ ನೀಡಲಾಗಿದೆ. ವಿಪರೀತ ಮಳೆ ಸುರಿಯುತ್ತಿದ್ದರಿಂದ ಮತ್ತು ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

ಸದ್ಯಕ್ಕೆ ಈಗ ನೀರಿನ ರಭಸದಿಂದ ಕುಸಿದು ಕೊಚ್ಚಿ ಹೋದ ಸೇತುವೆಯನ್ನು ಸಂಪೂರ್ಣ ತೆರವುಗೊಳಿಸಿ, ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಭದ್ರಾ ಡ್ಯಾಂನಿಂದ ಸದ್ಯ ನೀರು ಬಿಡಲಾಗಿದೆ. ಭದ್ರಾ ಕಾಲುವೆಯಲ್ಲಿ ಹರಿಯುತ್ತಿರುವ ನೀರನ್ನು ನಿಲ್ಲಿಸಿದ ನಂತರ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕುರ್ಕಿ ಗ್ರಾಮದ ಮುಖಂಡರಾದ ಕೆ.ರೇವಣಸಿದ್ದಪ್ಪ, ಕೆ.ಬಿ.ಕರಿಬಸಪ್ಪ, ಕೆ.ಎನ್.ಶಶಿಧರ, ಕೆ.ಎಸ್.ಮರುಳಸಿದ್ದಪ್ಪ, ಕೆ.ಎಸ್.ಪ್ರಕಾಶ, ಕಾಯಕದ ಪ್ರಕಾಶ, ಬಸಾಪುರ ಸಿದ್ದಪ್ಪ, ಎ.ಡಿ.ರಾಮಜ್ಜ ಸೇರಿದಂತೆ ಅನೇಕ ರೈತರು, ಗ್ರಾಮಸ್ಥರು ಇದ್ದರು.