ಯಶಸ್ವಿ ಕತೆಗಿಂತ ಭಗ್ನ ಪ್ರೇಮ ಕತೆ ಹೆಚ್ಚು ಆಕರ್ಷಕ: ರವಿ ಹೆಗಡೆ

| Published : Apr 22 2024, 02:00 AM IST

ಯಶಸ್ವಿ ಕತೆಗಿಂತ ಭಗ್ನ ಪ್ರೇಮ ಕತೆ ಹೆಚ್ಚು ಆಕರ್ಷಕ: ರವಿ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಬರೆದಿರುವ, ಸಾವಣ್ಣ ಪ್ರಕಾಶನದ 200ನೇ ಪುಸ್ತಕ ಭಗ್ನಪ್ರೇಮಿಯ ಅಪೂರ್ಣ ಡೈರಿ ಕೃತಿಯು ಭಾನುವಾರ ಲೋಕಾರ್ಪಣೆಗೊಂಡಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯಶಸ್ವಿ ಪ್ರೇಮ ಕತೆಗಳಿಗಿಂತ ಭಗ್ನ ಪ್ರೇಮ ಕತೆಯಾಧಾರಿತ ಸಿನಿಮಾ, ಕಾದಂಬರಿ, ಕತೆ ಪುಸ್ತಕಗಳು ಹೆಚ್ಚು ಯಶಸ್ಸು ಕಂಡಿವೆ ಎಂದು ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

ಭಾನುವಾರ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಬರೆದಿರುವ, ಸಾವಣ್ಣ ಪ್ರಕಾಶನದ 200ನೇ ಪುಸ್ತಕ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೇಮ ಯಶಸ್ಸು ಸಾಧಿಸಿದರೆ ಅದು ಜನರ ನೆನಪಿನಿಂದ ಬೇಗ ಮರೆಯಾಗುತ್ತದೆ. ನಿಸ್ವಾರ್ಥ ಪ್ರೇಮ, ಒಲಿಯದೆ ಪ್ರೀತಿ ಭಗ್ನವಾದರೆ ಹೆಚ್ಚು ಕಾಲ ನೆನಪಿನಲ್ಲಿದ್ದು ಶಾಶ್ವತವಾಗಿರುತ್ತದೆ.

ದೇವದಾಸ್, ರಾಧಾ-ಕೃಷ್ಣ, ರೋಮಿಯೋ ಜೂಲಿಯಟ್ ಮುಂತಾದ ಕತೆಗಳು ಉದಾಹರಣೆಯಾಗಿವೆ. ಇಂತಹ ವಿಷಯಗಳು, ಕತೆಗಳು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಇರುತ್ತವೆ ಮತ್ತು ಆಕರ್ಷಿಸುತ್ತವೆ ಎಂದರು.

ಜನರು ಮೊಬೈಲ್‌ ಸ್ಕ್ರೀನ್‌ಗೆ ಅಂಟಿಕೊಂಡಿದ್ದಾರೆ. ಒಂದು ವಿಡಿಯೋ ಅಥವಾ ವಿಷಯವನ್ನು ಕೆಲವೇ ಸೆಕೆಂಡ್ ಮಾತ್ರ ನೋಡುತ್ತಾರೆ. ಸ್ಕ್ರೀನ್‌ನಲ್ಲಿ ಕಾಣುವಷ್ಟು ಮಾತ್ರ ಓದುತ್ತಿದ್ದು, ಅದೇ ವಿಷಯದ ಬರವಣಿಗೆಯನ್ನು ಮುಂದುವರೆಸುವ ಪ್ರಮಾಣ ಕಡಿಮೆ ಇದೆ. ಡಿಜಿಟಲ್ ಮತ್ತು ಆನ್‌ಲೈನ್ ಯುಗದಲ್ಲಿ ಪುಸ್ತಕ ಹಾಗೂ ಮುದ್ರಣ ಮಾಧ್ಯಮಗಳು ಪ್ರಸ್ತುತವಾಗಿರಬೇಕು ಎಂದಾದರೆ ಬದಲಾವಣೆ ಅಳವಡಿಸಿಕೊಳ್ಳಬೇಕು. ಸಿನಿಮಾ, ಸಂಗೀತ ಲೋಕ ಈಗಾಗಲೇ ಬದಲಾವಣೆ ಅಳವಡಿಸಿಕೊಂಡಿವೆ ಎಂದು ರವಿ ಹೆಗಡೆ ಹೇಳಿದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಲೇಖಕರು ಹೆಚ್ಚು ಬರೆದರೆ ಗುಣಮಟ್ಟ ಕಡಿಮೆಯಾಗುತ್ತದೆ ಎನ್ನುವುದು ಸುಳ್ಳು. ಬರೆಯುತ್ತಿದ್ದರೆ ಬರವಣೆಗೆ ಗುಣಮಟ್ಟ ಹೆಚ್ಚಾಗುವುದೇ ಹೊರತು ಕಡಿಮೆಯಾಗುವುದಿಲ್ಲ. ಲೇಖಕನ ಲಕ್ಷಣವೇ ಬರವಣಿಗೆ. ಜೋಗಿ ಅವರು ತಾವು ಬರೆಯುವ ಜೊತೆಗೆ ಬೇರೆಯವರಿಗೂ ಪ್ರೇರಣೆ ನೀಡುತ್ತಾರೆ. ಬರವಣಿಗೆಯಲ್ಲಿ ಹೊಸತನ ಇರಬೇಕು. ಲೇಖನ ಓದುಗನನ್ನು ಖುಷಿ ಪಡಿಸಬೇಕು ಮತ್ತು ಓದುಗರಿಗೆ ತಲುಪುವಂತಿರಬೇಕು ಎಂದು ಹೇಳಿದರು.

ಜೋಗಿ ಗಿರೀಶ್‌ರಾವ್‌ ಹತ್ವಾರ್‌ ಮಾತನಾಡಿ, ಪುಸ್ತಕ ಬರೆಯುವುದರ ಹಿಂದೆ ಬಹಳ ಶ್ರಮ ಇರುತ್ತದೆ. ಅದಕ್ಕೆ ಸಿದ್ಧತೆಯು ಬಹಳ ಹಿಂದೆಯೇ ಮಾಡಿಕೊಳ್ಳಲಾಗುತ್ತದೆ. ಯಾವುದೇ ಪ್ರೇಮವನ್ನು ಭಗ್ನ ಪ್ರೇಮ ಎನ್ನಬೇಕಾದರೆ ಆ ಪ್ರೇಮ ಬಲವಾಗಿರಬೇಕು. ಸಾಮಾನ್ಯ ಆಕರ್ಷಣೆ ಪ್ರೀತಿಯಾಗುವುದಿಲ್ಲ. ಯುವ ಜನತೆ ಕತೆ, ಕವನ, ಲೇಖನ, ಕಾದಂಬರಿಗಳನ್ನು ಬರೆಯುವ ಆಸಕ್ತಿಯನ್ನು ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ನಶಿಸಿಹೋಗುವ ಸಾಮ್ರಾಜ್ಯ ಆಗುತ್ತದೆ ಎಂದರು.

ಯುವಜನತೆ ಲೇಖನಗಳು, ಕವಿತೆಗಳನ್ನು ಬರೆಯಬೇಕು. ಇಲ್ಲದಿದ್ದರೆ ಬರವಣಿಗೆ ನಶಿಸಿಹೋಗುವ ಸಾಮ್ರಾಜ್ಯ ಆಗುತ್ತದೆ. ಕನ್ನಡದ 100 ಅತ್ಯುತ್ತಮ ಕೃತಿಗಳನ್ನು ಭಿನ್ನ ರೂಪದಲ್ಲಿ ಹೆಚ್ಚು ಜನರಿಗೆ ತಲುಪಿಸುವ ಗುರಿ ಹೊಂದಲಾಗಿದೆ. 2025ರ ವೇಳೆಗೆ ಯೋಜನೆ ಜಾರಿ ಮಾಡುವ ಗುರಿ ಇದೆ ಎಂದು ಅವರು ಹೇಳಿದರು.

ನಟ ಅರುಣ್ ಸಾಗರ್, ಎ.ಸತೀಶ್, ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.