ಸೋರುತಿಹುದು ಇಂದಿರಾ ಕ್ಯಾಂಟೀನ್‌ ಮಳಿಗೆ..

| Published : Jun 13 2024, 12:50 AM IST

ಸಾರಾಂಶ

ಶೃಂಗೇರಿಪಟ್ಟಣದ ಹೃದಯ ಭಾಗದಲ್ಲಿರುವ ಶಾರದಾ ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಕಳೆದ ಕೆಲ ವರ್ಷಗಳಿಂದ ಸೋರುತ್ತಿದೆ. ಈ ಕಟ್ಟಡ 2018 ರಲ್ಲಿ ಉದ್ಘಾಟನೆಗೊಂಡಿದ್ದು ಇದುವರೆಗೂ ಉಪಹಾರ, ಊಟ ಸಹಿತ ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡುತ್ತಾ ಬಂದಿದೆ.

- ಐದು ವರ್ಷಗಳು ಕಳೆದರೂ ದುರಸ್ತಿ ಭಾಗ್ಯವಿಲ್ಲ । ಮಳೆ ಸಿಂಚನದ ನಡುವೆ ಗ್ರಾಹಕರು ಉಪಹಾರ ಭೋಜನ ಸೇವಿಸಬೇಕಾದ ದುಸ್ಥಿತಿನೆಮ್ಮಾರ್ ಅಬೂಬಕರ್ ಶೃಂಗೇರಿ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಟ್ಟಣದ ಹೃದಯ ಭಾಗದಲ್ಲಿರುವ ಶಾರದಾ ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಕಳೆದ ಕೆಲ ವರ್ಷಗಳಿಂದ ಸೋರುತ್ತಿದೆ. ಈ ಕಟ್ಟಡ 2018 ರಲ್ಲಿ ಉದ್ಘಾಟನೆಗೊಂಡಿದ್ದು ಇದುವರೆಗೂ ಉಪಹಾರ, ಊಟ ಸಹಿತ ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡುತ್ತಾ ಬಂದಿದೆ.

ಈ ಕಟ್ಟಡ ಉತ್ತಮ, ಸುಸಜ್ಜಿಕ ಸೌಲಭ್ಯ ಹೊಂದಿದ್ದು,ಇಲ್ಲಿಗೆ ಬರುವ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜನರಿಗೆ ಸೇವೆ ಸಿಗುತ್ತಿದೆ. ಬೆಳಗಿನ ಉಪಹಾರ, ಮಧ್ಯಾಹ್ನ, ರಾತ್ರಿಯ ಊಟ, ಹೀಗೆ ಸೇವೆ ಸಿಗುತ್ತಿದೆ. ಜನನಿಬಿಡ ಸಂತೆ ಮಾರುಕಟ್ಟೆ ಸಮೀಪದಲ್ಲಿರುವುದರಿಂದ ಊಟ, ತಿಂಡಿ ರಿಯಾ ಯಿತಿ ದರದಲ್ಲಿ ಸಿಗುವುದರಿಂದ ಕೂಲಿ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಇನ್ನುಳಿದಂತೆ ವಿವಿಧೆಡೆಗಳಿಂದ ಬರುವ ಜನರು ಈ ಕ್ಯಾಂಟೀನ್‌ ಲಾಭ ಪಡೆಯುತ್ತಿದ್ದಾರೆ.

ಆದರೆ ಕಳೆದ ಕೆಲ ವರ್ಷಗಳಿಂದ ಈ ಕಟ್ಟಡ ಮಳೆ ಬಂದಾಗ ಸೋರಲಾರಂಬಿಸಿದ್ದು, ನೀರೆಲ್ಲ ಒಳಗೆ ಬೀಳುತ್ತಿದೆ. ಇದರಿಂದ ಅಡುಗೆ ಕಾರ್ಯ ನಿರ್ವಹಿಸಲು, ಗ್ರಾಹಕರು ಉಪಹಾರ ಸೇವನೆಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಇಡೀ ಕಟ್ಟಡದೊಳಗೆ ನೀರು ಬಿದ್ದು ಅಲ್ಲಲ್ಲಿ ನೀರು ನಿಂತಿರುವ ದೃಷ್ಯ ಕಂಡುಬರುತ್ತಿದೆ. ಇನ್ನು ಮಳೆ ಬರುವಾಗ ನೀರೆಲ್ಲ ಮೈಮೇಲೆ ಬೀಳುತ್ತದೆ. ಅಡುಗೆ ಕಾರ್ಯ ನಿರ್ವಹಿಸುವವರಿಗೆ, ಗ್ರಾಹಕರು ಉಪಹಾರ ಸೇವಿಸಲು ತೊಂದರೆಯಾಗುತ್ತಿದೆ.

ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಸುಮಾರು 2-3 ತಿಂಗಳು ನಿರಂತರ ಮಳೆಯಾದಾಗಲ್ಲ ಇದೇ ರೀತಿ ಕಟ್ಟಡ ಸೋರುತ್ತಿರುವುದರಿಂದ ಸಾಕಷ್ಟು ತೊಂದರೆಯುಂಟಾಗುತ್ತಿದೆ. ಕಳೆದ ಅನೇಕ ವರ್ಷಗಳಿಂದ ಇಡೀ ಮಳೆಗಾಲ ಕಳೆದು ಬೇಸಿಗೆ ಬಂದು ಮತ್ತೆ ಮಳೆಗಾಲ ಹೀಗೆ ನಿರಂತರ ವಾತವರಣ ಬದಲಾಗುತ್ತಿದ್ದರೂ ಈ ಸೋರುತ್ತಿರುವ ಕಟ್ಟಡ ಮಾತ್ರ ಇನ್ನೂ ಬದಲಾವಣೆಯಾಗಿಲ್ಲ. ನಿತ್ಯ ಸೋರುತ್ತಾ ದುರಸ್ತಿ ಕಾಣದೆ ತನ್ನ ದುಸ್ಥಿತಿ ಹೇಳುತ್ತಿದೆ.

ಶೃಂಗೇರಿ ಒಂದು ಪ್ರಮುಖ ಪ್ರವಾಸಿ ಕ್ಷೇತ್ರವಾಗಿರುವುದರಿಂದ ಇಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಇಂತಹ ಒಂದು ಪ್ರಸಿದ್ಧ ಕ್ಷೇತ್ರದ ಈ ಇಂದಿರಾ ಕ್ಯಾಂಟಿನ್‌ ಕಟ್ಟಡ ಸೋರುತ್ತಿದ್ದರೂ ಸ್ಥಳೀಯ ಜನಪ್ರತಿನಿದಿಗಳು, ಸರ್ಕಾರ ಗಮನ ನೀಡದೇ ನಿರ್ಲಕ್ಷ್ಯವಹಿಸುತ್ತಿರುವುದು ಆಶ್ಚರ್ಯವೇ ಸರಿ.

ಇನ್ನುಳಿದಂತೆ ಕ್ಯಾಂಟೀನ್ ಕಟ್ಟಡದಲ್ಲಿ ಊಟ ಉಪಹಾರ ವ್ಯವಸ್ಥೆ , ಕುಡಿಯುವ ನೀರಿನ ಸೌಲಭ್ಯ. ಸೇರಿದಂತೆ ಕೆಲ ಅಗತ್ಯ ಮೂಲಸೌಕರ್ಯಗಳು ಉತ್ತಮವಾಗಿದ್ದರು. ಸುತ್ತಮುತ್ತಲ ಪರಿಸರ ಸ್ವಚ್ಚವಾಗಬೇಕಿದೆ. 2018 ರಿಂದ ಉತ್ತಮ ಸೇವೆ ನೀಡುತ್ತಿರುವ ಈ ಕ್ಯಾಂಟೀನ್‌ ಜನರ ಮೆಚ್ಚುಗೆಗೂ ಪಾತ್ರವಾಗಿದೆ. ರಿಯಾಯಿತಿ ದರದ ಊಟ, ತಿಂಡಿಯ ಇಂತಹ ಕ್ಯಾಂಟೀನ್‌ ಜನರಿಗೆ ಅವಶ್ಯಕತೆಯೂ ಇದೆ.

ಇನ್ನಾದರೂ ಸಂಬಂಧಪಟ್ಟವರು, ಸ್ಥಳೀಯ ಜನಪ್ರತಿನಿಧಿಗಳು, ಈ ಭಾಗದ ವಾರ್ಡ ಸದಸ್ಯರು, ಸ್ಥಳೀಯ ಆಡಳಿತ ಇತ್ತ ಗಮನ ಹರಿಸಿ ಕೂಡಲೇ ಸೋರುತ್ತಿರುವ ಈ ಕ್ಯಾಂಟೀನ್‌ ಕಟ್ಟಡಕ್ಕೆ ಕಾಯಕಲ್ಪ ಒದಗಿಸಿ ಜನರಿಗೆ ಉಂಟಾಗುತ್ತಿರುವ ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ.

ಕಟ್ಟಡಕ್ಕೆ ಕಾಯಕಲ್ಪ ಒದಗಿಸಿ:

ಕಳೆದ 5 ವರ್ಷಗಳಿಂದ ಇಂದಿರಾ ಕ್ಯಾಂಟೀನ್ ಉತ್ತಮವಾಗಿ ಸೇವೆ ಸಲ್ಲಿಸುತ್ತಾ ಜನರ ಮೆಚ್ಚುಗೆ ಗಳಿಸಿದೆ. ಆದರೆ ಈ ಕಟ್ಟಡಕ್ಕೆ ಇನ್ನಷ್ಟು ಮೂಲ ಸೌಕರ್ಯ ಕಲ್ಪಿಸಿಕೊಡಬೇಕಿದೆ. ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಸ್ಥಳೀಯ ಆಡಳಿತ ಮುಂದಾಗಬೇಕಿದೆ.

-ಕೆ.ಎಂ.ರಾಮಣ್ಣ ಕರುವಾನೆ , ಶೃಂಗೇರಿ--

ನೀರು ಸೋರದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು.

ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಇಂದಿರಾ ಕ್ಯಾಂಟಿನ್ ಕಟ್ಟಡ ಮಳೆಗೆ ಸೋರುವುದರಿಂದ ಗ್ರಾಹಕರಿಗೆ ತೊಂದರೆಯುಂಟಾಗುತ್ತಿದೆ. ಕಟ್ಟಣಡಲ್ಲಿ ಅಡುಗೆ ಕಾರ್ಯ ಸಹಿತ ಅಗತ್ಯ ಕೆಲಸಗಳಿಗೆ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆ, ಸರ್ಕಾರ ಕೂಡಲೇ ಇದರ ದುರಸ್ತಿಗೆ ಮುಂದಾಗಬೇಕಿದೆ. ಜನರಿಗೆ ಇನ್ನಷ್ಟು ಉತ್ತಮ ಸೇವೆ ಸಿಗುವಂತಾಗಬೇಕು.

-ಕಾನುವಳ್ಳಿ ಶಂಕರಪ್ಪ.

ಸ್ಥಳೀಯ ,ಶೃಂಗೇರಿ.12 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ಶಾರದಾ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ ಕಟ್ಟಡ

12 ಶ್ರೀ ಚಿತ್ರ 2-

ಕಟ್ಟಡದ ಒಳಭಾಗ ಸೋರುತ್ತಿವುದು.