ನಿಯಂತ್ರಣ ತಪ್ಪಿ ಕಾಂಪೌಂಡ್ ಗೆ ಗುದ್ದಿದ ಬಸ್, ಓರ್ವ ಸಾವು

| Published : Feb 05 2024, 01:45 AM IST / Updated: Feb 05 2024, 03:42 PM IST

ಸಾರಾಂಶ

ಬಾಗೆ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಾರಿಗೆ ಬಸ್ ಅಪಘಾತಕ್ಕೀಡಾಗಿ ಪ್ರಯಾಣಿಕನೊಬ್ಬ ಮೃತಪಟ್ಟು ಏಳು ಜನ ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಬಾಗೆ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಾರಿಗೆ ಬಸ್ ಅಪಘಾತಕ್ಕೀಡಾಗಿ ಪ್ರಯಾಣಿಕನೊಬ್ಬ ಮೃತಪಟ್ಟು ಏಳು ಜನ ಗಾಯಗೊಂಡಿದ್ದಾರೆ.

ಹಾಸನ ನಗರದ ಹೌಸಿಂಗ್ ಬೋರ್ಡ್ ಕುವೆಂಪು ಬಡಾವಣೆಯ ಅಮೃತ ಮೂರ್ತಿ (34) ಮೃತರು. ಮೃತರ ತಂದೆ ನಾಗರಾಜ್, ತುಮಕೂರಿನ ಈರಣ್ಣ, ದಾರವಾಡದ ದನಿಯಪ್ಪ , ಹಾಸನ ಜಯನಗರ ಬಡಾವಣೆಯ ಕೃಷ್ಣ, ನಿತ್ಯನಂದ, ಗುಬ್ಬಿ ತಾಲೂಕು ನಿಟ್ಟೂರಿನ ಹನುಮಂತೆಗೌಡ, ಗುಬ್ಬಿ ತಾಲೂಕು ಮಾವಿನಹಳ್ಳಿಯ ಸಂಪತ್ ಕುಮಾರ್ ಗಾಯಾಳುಗಳು. 

ಚನ್ನರಾಯಪಟ್ಟಣ ವಿಭಾಗಕ್ಕೆ ಸೇರಿದ ಸಾರಿಗೆ ಬಸ್ ಬೆಂಗಳೂರಿನಿಂದ ಧರ್ಮಸ್ಥಳ ಕ್ಕೆ ತೆರಳುತ್ತಿದ್ದು, ಮುಂಜಾನೆ 5.30 ರ ವೇಳೆ ಬಾಗೆ ಗ್ರಾಮ ಸಮೀಪ ಸಾಗುತ್ತಿದ್ದ ವೇಳೆ ಬಸ್ಸಿನ ಎಕ್ಸಲ್ ತುಂಡಾಗಿ ಹೆದ್ದಾರಿ ಸಮೀಪದಲ್ಲಿದ್ದ ದಿವಾಕರ್ ಎಂಬುವವರ ಮನೆಗೆ ಡಿಕ್ಕಿ ಹೊಡೆದು, ಜೆಎಸ್ಎಸ್ ಶಾಲೆಯ ಕಾಂಪೌಂಡ್ ಭೇದಿಸಿ, ಶಾಲೆಯ ಅವರಣದಲ್ಲಿದ್ದ ಮರಗಿಡಗಳಿಗೆ ಡಿಕ್ಕಿ ಹೊಡೆದು ಶಾಲೆಯ ಮತ್ತೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. 

ಇದರಿಂದಾಗಿ ಬಸ್ ಮುಂದಿನ ಸೀಟ್ ನಲ್ಲಿ ಕುಳಿತಿದ್ದ ಅಮೃತರಾಜ್ ಸ್ಥಳದಲ್ಲೆ ಮೃತಪಟ್ಟರೆ ಏಳು ಜನರು ಗಾಯಗೊಂಡಿದ್ದಾರೆ.

ಅಡುಗೆ ಮನೆ ಛೀದ್ರ: ಸಾರಿಗೆ ಬಸ್, ದಿವಾಕರ್ ಎಂಬುವವರ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಮನೆಯ ಅಡುಗೆ ಕೊಠಡಿ ಸಂಪೂರ್ಣ ಛಿದ್ರವಾಗಿದೆ. ಮನೆಯವರು ಮತ್ತೊಂದು ಮನೆಯಲ್ಲಿ ಮಲಗಿದ್ದರು ಎನ್ನಲಾಗಿದೆ.

ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್ ಶಾಲಾ ಕಾಂಪೌಂಡ್‌ ಸೀಳಿಕೊಂಡು ತೋಟದೊಳಗೆ ನಿಂತಿರುವುದು.