ಸಾರಾಂಶ
ರಸ್ತೆ ಹಾಳಾಗಿದ್ದು ನಿರ್ವಹಣೆ ಕೊರತೆಯಿಂದ ಪ್ರವಾಸಿಗರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಉದ್ಯಮಿ ಸುರೇಶ್ ತಮ್ಮ ಸ್ವಂತ ಖರ್ಚಿನಿಂದ ಜೆಸಿಬಿ ಮೂಲಕ ಸ್ವಚ್ಛಗೊಳಿಸಲು ಸಹಕಾರ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸೋಮವಾರಪೇಟೆ ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳಗುಡಿ ಬೆಟ್ಟಕ್ಕೆ ತೆರಳುವ ರಸ್ತೆ ಗಿಡಗಂಟಿಗಳಿಂದ ತುಂಬಿದ್ದನ್ನು ಗಮನಿಸಿದ ಬೆಂಗಳೂರಿನ ಉದ್ಯಮಿ ಸುರೇಶ್, ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಮಾದರಿಯಾಗಿದ್ದಾರೆ.ಮಕ್ಕಳಗುಡಿ ವ್ಯೂ ಪಾಯಿಂಟ್‌ನಲ್ಲಿ ಯಾವುದೇ ರೀತಿಯ ಸುರಕ್ಷತೆಗಳು ಇಲ್ಲದಿದ್ದು, ಎಲ್ಲಿ ನೋಡಿದರೂ ಮದ್ಯದ ಬಾಟಲಿಗಳು ರಾಶಿ, ರಾಶಿ ಬಿದ್ದಿವೆ. ಇದರಿಂದ ಬೆಟ್ಟಕ್ಕೆ ಹೋಗಲು ಸಂಜೆ ಹೊತ್ತು ಪ್ರವಾಸಿಗರು ಭಯ ಪಡುವಂತಾಗಿದೆ. ಅಲ್ಲದೇ ಈ ಸ್ಥಳಕ್ಕೆ ತೆರಳುವ ರಸ್ತೆಯೂ ಕೂಡ ಹಾಳಾಗಿದ್ದು, ನಿರ್ವಹಣೆ ಕೊರತೆಯಿಂದ ಪ್ರವಾಸಿಗರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿತ್ತು. ಸಾರ್ವಜನಿಕರೂ ಹಾಗೂ ಗ್ರಾಮಸ್ಥರೂ ಕೂಡ ಹೋಗದಂಥ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಉದ್ಯಮಿ ಸುರೇಶ್ ಅವರು ತಮ್ಮ ಸ್ವಂತ ಖರ್ಚಿನಿಂದ ಜೆಸಿಬಿ ಮೂಲಕ ಸ್ವಚ್ಛಗೊಳಿಸಲು ಸಹಕಾರ ನೀಡಿದ್ದಾರೆ.
ಗ್ರಾಮ ಪಂಚಾಯಿತಿಯವರು ಕಳೆದ 2-3 ವರ್ಷಗಳಿಂದ ಸ್ವಚ್ಛತಾ ಕಾರ್ಯ ನಡೆಸಿಕೊಂಡು ಬಂದಿದ್ದರು. ಆದರೆ ಈಗ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ತಾಣಗಳಲ್ಲೊಂದಾದ ಮಕ್ಕಳ ಗುಡಿಬೆಟ್ಟ ಪಾಳು ಬಿದ್ದಿರುವುದು ಕಂಡು ಸಾರ್ವಜನಿಕರು ಚಿಂತಿತರಾಗಿದ್ದರು.ಈ ಸ್ಥಳಕ್ಕೆ ರಾಜ್ಯದಿಂದ ಅಲ್ಲದೇ ಹೊರರಾಜ್ಯದಿಂದಲೂ ಕೂಡ ಪ್ರವಾಸಿಗರೂ ಬರುತ್ತಾರೆ. ಹೀಗಾಗಿ ರಸ್ತೆ ಸೇರಿದಂತೆ ಬೆಟ್ಟದ ಪ್ರದೇಶವನ್ನು ಸ್ವಚ್ಛತಾ ಕಾರ್ಯವನ್ನು ನಡೆಸಿಕೊಟ್ಟಿದ್ದೇನೆ. ಈ ಪ್ರದೇಶವನ್ನು ಇನ್ನು ಮುಂದೆಯಾದರೂ ಗಮನಹರಿಸಿ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಉದ್ಯಮಿ ಸುರೇಶ್ ಹೇಳಿದರು.