ಸಾರಾಂಶ
ಸಾಮೂಹಿಕ ಪ್ರಾರ್ಥನೆಯಲ್ಲಿ ರಾಜಕೀಯ ನಾಯಕರು ಭಾಗಿ । ಶುಭಾಶಯ ವಿನಿಮಯ
ಕನ್ನಡಪ್ರಭ ವಾರ್ತೆ ಬಳ್ಳಾರಿಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ಎನ್ನಲಾದ ಈದ್- ಉಲ್ -ಫಿತರ್ (ರಂಜಾನ್) ಹಬ್ಬವನ್ನು ಜಿಲ್ಲಾದ್ಯಂತ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ರಂಜಾನ್ ಹಬ್ಬದ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಮುಸ್ಲಿಮರು ಉಪವಾಸ ಆಚರಣೆಯಲ್ಲಿದ್ದರು. ಹಬ್ಬದ ದಿನ ಹೊಸಬಟ್ಟೆ ಧರಿಸಿ ಈದ್ಗಾ ಮೈದಾನಗಳು ಹಾಗೂ ಮಸೀದಿಗಳಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಗಳಲ್ಲಿ ಪಾಲ್ಗೊಂಡಿದ್ದರು. ಪ್ರಾರ್ಥನೆಗೆ ಆಗಮಿಸಿದ್ದ ಮುಸ್ಲಿಂರು ಹಾಗೂ ಇತರೆ ಸಮುದಾಯದ ಮುಖಂಡರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಜಿಲ್ಲೆಯ ವಿವಿಧೆಡೆ ರಂಜಾನ್ ಹಬ್ಬದ ಅಂಗವಾಗಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ರಾಜಕೀಯ ನಾಯಕರು ಭಾಗವಹಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿರುವ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಮರು ಭಾಗವಹಿಸಿದ್ದರು. ಸಾಮೂಹಿಕ ಪ್ರಾರ್ಥನೆ ಬಳಿಕ ಧರ್ಮಗುರು ಸಿದ್ಧಿಕಿ ಅವರು ರಂಜಾನ್ ಹಬ್ಬದ ಮಹತ್ವ, ಉಪವಾಸ ವ್ರತದ ಹಿನ್ನೆಲೆ, ರಂಜಾನ್ ವೇಳೆ ಕೈಗೊಳ್ಳಬೇಕಾದ ಸಂಕಲ್ಪಗಳು, ದಾನದ ಮಹತ್ವ ಹಾಗೂ ಸೌಹಾರ್ದತೆಯ ನೆಲೆಯಲ್ಲಿ ಹಬ್ಬದ ಆಚರಣೆ ಕುರಿತು ತಿಳಿಸಿಕೊಟ್ಟರು. ಪ್ರಾರ್ಥನೆಯಲ್ಲಿ ಪಾಲ್ಗೊಂಡವರು ಸಂಪ್ರದಾಯದಂತೆ ಧವಸ ಧಾನ್ಯ, ಹಣ್ಣು-ಹಂಪಲುಗಳನ್ನು ದಾನ ಮಾಡಿದರು.
ಲೋಕಸಭಾ ಸದಸ್ಯ ಈ.ತುಕಾರಾಂ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಮೇಯರ್ ಮುಲ್ಲಂಗಿ ನಂದೀಶ್, ಕಾಂಗ್ರೆಸ್ ಮುಖಂಡರಾದ ಮಹ್ಮದ್ ರಫೀಕ್, ಇಬ್ರಾಹಿಂಬಾಬು, ಪಾಲಿಕೆ ಸದಸ್ಯ ಪೇರಂ ವಿವೇಕ್, ಹುಮಾಯೂನ್ ಖಾನ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರಲ್ಲದೆ, ಧರ್ಮಗುರು ಸಿದ್ಧಿಕಿ ಅವರು ನಡೆಸಿಕೊಟ್ಟ ಧರ್ಮೋಪದೇಶ ಸಂದೇಶವನ್ನು ಆಲಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ವೃದ್ಧರು, ಮಕ್ಕಳು ಪಾಲ್ಗೊಂಡು ಗಮನ ಸೆಳೆದರು.ಮನೆಯಲ್ಲಿದ್ದ ಮುಸ್ಲಿಂ ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸಿ, ಬಂಧು ಬಾಂಧವರನ್ನು ಭೇಟಿ ಮಾಡಿ ಸಿಹಿ ಹಂಚುವ ಮೂಲಕ ಹಬ್ಬದ ಶುಭಾಶಯಗಳನ್ನು ಹೇಳಿದರು.
ಜಿಲ್ಲೆಯ ಕಂಪ್ಲಿ, ಕುರುಗೋಡು, ಸಿರುಗುಪ್ಪ, ಸಂಡೂರು ಹಾಗೂ ಬಳ್ಳಾರಿ ತಾಲೂಕಿನ ವಿವಿಧೆಡೆ ರಂಜಾನ್ ಹಬ್ಬ ಸಡಗರ ಸಂಭ್ರಮದಿಂದ ನಡೆಯಿತು. ಗ್ರಾಮೀಣ ಪ್ರದೇಶಗಳಲ್ಲೂ ಹಬ್ಬದ ಸಡಗರ ಕಂಡು ಬಂತು. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ಜರುಗಿದವು.ಯುಗಾದಿ ಹಾಗೂ ರಂಜಾನ್ ಸರಣಿ ಹಬ್ಬದ ಹಿನ್ನೆಲೆ ಬಳ್ಳಾರಿ ನಗರ ಜನ ಓಡಾಟವಿಲ್ಲದೆ ಬಿಕೋ ಎನ್ನುತ್ತಿತ್ತು. ಬೆಳಗ್ಗೆಯಿಂದಲೇ ಜನರ ಓಡಾಟ ವಿರಳವಾಗಿತ್ತು. ನಗರದ ಭಾಗಶಃ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದವು. ಕೆಲವೊಂದು ಅಂಗಡಿ, ಹೋಟೆಲ್ ಮಾತ್ರ ತೆರೆದಿದ್ದವು.
ಹಿಂದೂಗಳು ಯುಗಾದಿ ಸಡಗರದಿಂದ ಇನ್ನು ಹೊರ ಬಂದಿರಲಿಲ್ಲ. ಹಬ್ಬದ ಎರಡನೇ ದಿನವೂ ಯುಗಾದಿಯ ಸಂಭ್ರಮ ಮುಂದುವರಿದಿತ್ತು. ಬಳ್ಳಾರಿ ಭಾಗದಲ್ಲಿ ಯುಗಾದಿ ಎರಡನೇ ದಿನ ಕೆಟ್ಟಕರಿ ಎಂದು ಆಚರಣೆ ಮಾಡುತ್ತಿದ್ದು, ಈ ದಿನದಲ್ಲಿ ಯಾವುದೇ ಶುಭ ಕಾರ್ಯ ಕೈಗೊಳ್ಳುವುದಿಲ್ಲ. ಹೊರಗಡೆ ಪ್ರಯಾಣ ಬೆಳೆಸುವುದಿಲ್ಲ. ಹೀಗಾಗಿ ಹಿಂದೂಗಳು ಮನೆಯಲ್ಲಿಯೇ ಇದ್ದು ಯುಗಾದಿಯ ಎರಡನೇ ದಿನವನ್ನು ಕಳೆದರೆ, ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಸಡಗರ ಸಂಭ್ರಮದಲ್ಲಿದ್ದರು. ಭಾವೈಕ್ಯತೆಯ ಸಂಕೇತವಾದ ರಂಜಾನ್ ಹಬ್ಬದಲ್ಲಿ ಹಿಂದೂ ಹಾಗೂ ಮುಸ್ಲಿಂರು ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.