ನಾಡು, ನುಡಿ ಅಸ್ಮಿತೆಯ ಸೇವೆ ಮಾಡುತ್ತಿರುವ ಕಸಾಪ

| Published : Aug 04 2024, 01:26 AM IST

ನಾಡು, ನುಡಿ ಅಸ್ಮಿತೆಯ ಸೇವೆ ಮಾಡುತ್ತಿರುವ ಕಸಾಪ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಹಿತ್ಯ ಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡನಾಡು, ನುಡಿಯ ಅಸ್ಮಿತೆಯ ಕೈಂಕರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಹಿತ್ಯ ಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡನಾಡು, ನುಡಿಯ ಅಸ್ಮಿತೆಯ ಕೈಂಕರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ನುಡಿದರು.ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದಿ.ಕಸ್ತೂರಿ ಗಿರಿಮಲಪ್ಪ ಬೆಣ್ಣೂರ, ಲಿಂ.ಸಿದ್ದಪ್ಪ ಬಸಲಿಂಗಪ್ಪ ಹಂಚಲಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಿರಿಯರ ಸ್ಮರಣೆಯನ್ನು ತಮ್ಮ ತಮ್ಮ ಮನೆಗಳಲ್ಲಿ ಬಹುತೇಕರು ಮಾಡಿಕೊಳ್ಳುತ್ತಾರೆ. ಅದೇ ಹಿರಿಯರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ದಾನಿಗಳು ನೀಡಿದ ದತ್ತಿ ನಿಧಿ ಪಡೆದು ಅವರ ಹೆಸರಿನಲ್ಲಿ ಪ್ರತಿವರ್ಷ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ವಿವಿಧ ವಿಷಯಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ನಡೆಸುತ್ತಿರುವುದು ಮೆಚ್ಚುವಂತಹದ್ದು ಎಂದರು.ಹಿರಿಯರು ತಮ್ಮ ಮಕ್ಕಳಿಗೆ ಆಸ್ತಿ ಮಾಡದೇ ಅವರನ್ನೇ ಆಸ್ತಿಯನ್ನಾಗಿ ಮಾಡುವಂತಾದರೇ ಸಮಾಜಕ್ಕೆ ಉತ್ತಮ ವ್ಯಕ್ತಿಗಳು ಸಿಗಲು ಸಾಧ್ಯ. ಇಂದಿನ ದತ್ತಿ ಲಿಂ.ಸಿದ್ದಪ್ಪ ಬಸಲಿಂಗಪ್ಪ ಹಂಚಲಿ ಅವರ ಹೆಸರಿನಲ್ಲಿ ಅವರ ಮಗ ನೀಡಿದ್ದಾರೆ. ಲಿಂ.ಸಿದ್ದಪ್ಪ ಹಂಚಲಿ ಅವರು ಆಸ್ತಿಯನ್ನು ಮಾಡದೇ ಉತ್ತಮವಾಗಿ ಮಕ್ಕಳನ್ನು ನೀಡಿದ್ದರಿಂದಾಗಿ ಇಂದು ಅವರು ಮಕ್ಕಳಾದ ಶಿಕ್ಷಕರಾದ ಅಶೋಕ ಹಂಚಲಿ, ಬಸವರಾಜ ಹಂಚಲಿ ನಾಡಿನಲ್ಲಿ ಉತ್ತಮ ವಾಗ್ಮಿಗಳಾಗಿ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಶಿಕ್ಷಕ, ವಾಗ್ಮಿ ಬಸವರಾಜ ಹಂಚಲಿ ಮಾತನಾಡಿ, ಕನ್ನಡದ ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡುತ್ತಿದೆ. ದೇವರ ರೂಪದಲ್ಲಿರುವ ತಂದೆ-ತಾಯಿಯ ಸೇವೆಯನ್ನು ಪ್ರತಿಯೊಬ್ಬರೂ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.ಪೊಲೀಸ್ ಇಲಾಖೆಯ ಬಸವರಾಜ ಕಳ್ಳಿಗುಡ್ಡ ಅವರು ಯಾದಗಿರಿ ಮೈಲಾರಲಿಂಗೇಶ್ವರ ಮಹಿಮೆ ಕುರಿತು, ಶಿಕ್ಷಕ ವೈ.ಆರ್‌.ಇಂಗಳೇಶ್ವರ ಅವರು ಶರಣರ ಚಿಂತನೆ ಹಾಗೂ ಸಾಮಾಜಿಕ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಡೋಣೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಹೈದರಸಾಬ್‌ ಚಪ್ಪರಬಂದ, ಮಾರುತಿ ನಲವಡೆ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಎಸ್.ಬಿ.ಕೊಟ್ರಶೆಟ್ಟಿ, ಕಸಾಪ ಮಹಿಳಾ ಪ್ರತಿನಿಧಿ ಶಾಂತಾ ಚೌರಿ ಇದ್ದರು. ಮಹಾದೇವಿ ಬಿರಾದಾರ ಪ್ರಾರ್ಥಿಸಿದರು. ಬಿ.ವಿ.ಚಕ್ರಮನಿ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಬಿ.ಎಂ.ಚಿಂಚೋಳ್ಳಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ಪ್ರತಿಮೆಗೆ ಹಾಗೂ ದಿ.ಕಸ್ತೂರಿ ಗಿರಿಮಲಪ್ಪ ಬೆಣ್ಣೂರ, ಲಿಂ.ಸಿದ್ದಪ್ಪ ಬಸಲಿಂಗಪ್ಪ ಹಂಚಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಮನ ಸಲ್ಲಿಸಲಾಯಿತು. ಬಾಕ್ಸ್‌...ಕನ್ನಡಪ್ರಭದ ವರದಿಗಾರ ನಂದಿಹಾಳ ಸೇರಿದಂತೆ ಗಣ್ಯರಿಗೆ ಸನ್ಮಾನಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕವು ನೀಡುವ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಪ್ರಶಸ್ತಿಗೆ ಭಾಜನರಾದ ಕನ್ನಡಪ್ರಭದ ತಾಲೂಕು ಹಿರಿಯ ವರದಿಗಾರ ಬಸವರಾಜ ನಂದಿಹಾಳ ಸೇರಿದಂತೆ ಪತ್ರಕರ್ತ ಪ್ರಕಾಶ ಬೆಣ್ಣೂರ, ನಿವೃತ್ತ ಶಿಕ್ಷಕ ಶ್ರೀಶೈಲ ಮುಳವಾಡ ಅವರನ್ನು ತಾಲೂಕು ಕಸಾಪದಿಂದ ಸನ್ಮಾನಿಸಿ, ಗೌರವಿಸಲಾಯಿತು.ಕೋಟ್‌...ಸಾಮಾಜಿಕ ರಂಗದ ಪತ್ರಿಕಾರಂಗದ ಸೇವೆಯು ಅಮೋಘವಾಗಿದೆ. ಸ್ಥಳೀಯ ಎಲ್ಲ ಕಾರ್ಯನಿರತ ಪತ್ರಕರ್ತರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಚೆಗೆ ಜಿಲ್ಲಾಮಟ್ಟದ ಪ್ರಶಸ್ತಿಗೆ ಭಾಜನರಾದ ಕನ್ನಡಪ್ರಭದ ತಾಲೂಕು ಹಿರಿಯ ವರದಿಗಾರ ಬಸವರಾಜ ನಂದಿಹಾಳ ಹಾಗೂ ಪತ್ರಕರ್ತ ಪ್ರಕಾಶ ಬೆಣ್ಣೂರ ಅವರನ್ನು ತಾಲೂಕು ಕಸಾಪ ವಿಶೇಷವಾಗಿ ಸನ್ಮಾನಿಸಿದ್ದು ಶ್ಲಾಘನೀಯ.-ಸಿದ್ದಲಿಂಗ ಸ್ವಾಮೀಜಿ, ವಿರಕ್ತಮಠ.